2025ರ ವೇಳೆಗೆ ರಾಜ್ಯ ಮಲೇರಿಯಾ ಮುಕ್ತ, ರೋಗ ನಿಯಂತ್ರಣಕ್ಕೆ ಸುಧಾಕರ್‌ ಸೂಚನೆ

Published : Jul 17, 2022, 07:35 AM IST
2025ರ ವೇಳೆಗೆ ರಾಜ್ಯ ಮಲೇರಿಯಾ ಮುಕ್ತ, ರೋಗ ನಿಯಂತ್ರಣಕ್ಕೆ ಸುಧಾಕರ್‌ ಸೂಚನೆ

ಸಾರಾಂಶ

ಮಲೇರಿಯಾ ಹೆಚ್ಚಿರುವ ಕಡೆ ಹೋಗಿ ಅರಿವು ಮೂಡಿಸಿ, ಮಲೇರಿಯಾ ನಿಯಂತ್ರಣಕ್ಕೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಸುಧಾಕರ್‌ ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಈ ರೋಗ ವ್ಯಾಪಿಸುವ ಭೀತಿ ಇದ್ದು, ರೋಗ ನಿಯಂತ್ರಣಕ್ಕೆ ಸರ್ಕಾರದ ಸಕಲ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಬೆಂಗಳೂರು (ಜು.17): ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದರ ಜತೆಗೆ ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಜನರು ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದ್ದಾರೆ. ಶನಿವಾರ ವಿಧಾನಸೌಧದಲ್ಲಿ ಆಯೋಜಿದ 2025ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ಮಾಡುವ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸಾವುಗಳು ಸಂಭವಿಸುತ್ತಿತ್ತು. 80, 90ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಸರ್ಕಾರವು ತಪಾಸಣೆ ಮತ್ತು ಅರಿವು ಕಾರ್ಯಕ್ರಮಗಳ ಮೂಲಕ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ ಎಂದರು. ‘ಮಲೇರಿಯಾ, ಡೆಂಘಿ ಮೊದಲಾದ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಅಂತಹ ಕಡೆಗಳಲ್ಲಿ ಸ್ವಾಭಾವಿಕವಾಗಿ ಮಳೆ ನೀರು ಶೇಖರಣೆಯಾಗುತ್ತದೆ.

ಇದರಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಮಲೇರಿಯಾ ರೋಗವನ್ನು ಸಾಧಾರಣ ರೋಗ ಎಂದು ಪರಿಗಣಿಸುವಂತಿಲ್ಲ. ಈ ಮಳೆಗಾವು ಅತ್ಯಂತ ಸವಾಲಿನ ಅವಧಿಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಹೆಚ್ಚು ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೇರಿಯಾ ಹೆಚ್ಚಿರುವ ಕಡೆಗಳಿಗೆ ಹೋಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ರೋಗ ನಿರ್ಮೂಲನೆ ಮಾಡಿದರೆ ಮಾತ್ರ ಸಾಲುವುದಿಲ್ಲ. ಅದು ಮತ್ತೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಪ್ರಕರಣ ಕಂಡುಬಂದಿಲ್ಲ ಎಂದಾಕ್ಷಣ ಅಲ್ಲಿ ರೋಗ ಇಲ್ಲ ಎಂದು ಭಾವಿಸಬಾರದು. ಸಾಮೂಹಿಕ ಪ್ರಯತ್ನ, ಸಂಘಟಿತ ಕಾರ್ಯದ ಮೂಲಕ ಮಲೇರಿಯಾ ನಿರ್ಮೂಲನೆ ಕಾರ್ಯ ನಡೆಯಬೇಕು’ಎಂದು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಿಸಿದಾಗ ಮಾತ್ರ ಇದು ಸಾಧ್ಯ. ಮಲೇರಿಯಾ ಮಾತ್ರವಲ್ಲದೇ, ಕ್ಷಯ ರೋಗವನ್ನು ಕೂಡ ನಿರ್ಮೂಲನೆ ಮಾಡಬೇಕಿದೆ. ಮಲೇರಿಯಾ ನಿರ್ಮೂಲನೆಗೆ 2030ರ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ನಮ್ಮ ರಾಜ್ಯದಲ್ಲಿ 2025ರ ಗುರಿಯನ್ನಿಟ್ಟುಕೊಳ್ಳಲಾಗಿದೆ. ಸರ್ಕಾರದ ಕೆಲಸ, ಸಂಘ-ಸಂಸ್ಥೆಗಳ ನೆರವು ಮತ್ತು ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಾಲಕಿಗೆ ಶ್ಲಾಘನೆ: ಇದೇ ವೇಳೆ ಮಲೇರಿಯಾ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ರೋಗವಾಹನ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರ ಆಯೋಜಿಸಿದ್ದ ಪೋಸ್ಟರ್‌ ರಚನೆ ಸ್ಪರ್ಧೆಯಲ್ಲಿ ವಿಜೇತೆಯಾದ ವಿದ್ಯಾರ್ಥಿನಿ ಅವನಿ ಹೆಗಡೆ ಅವರನ್ನು ಸಚಿವರು ಶ್ಲಾಘಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಡಕ್ ಸೂಚನೆ: ಇನ್ನು ಮಳೆ, ಪ್ರವಾಹ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗದಂತೆ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಈಗಾಗಲೇ  ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಳೆದ ಗುರುವಾರ ಹಿರಿಯ ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದಾಗಿ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಆನೆಕಾಲು ಮೊದಲಾದ ರೋಗಗಳು ಹರಡುವ ತೀವ್ರ ಸಾಧ್ಯತೆ ಇದೆ. ಇದಕ್ಕಾಗಿ ಪ್ರತಿ ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು. ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಲು ಹಾಗೂ ಸಮನ್ವಯಕ್ಕಾಗಿ ನಿಯಂತ್ರಣ ಕೊಠಡಿಯೊಂದನ್ನು ಆರಂಭಿಸಬೇಕು ಸೂಚನೆ ನೀಡಿದ್ದಾರೆ

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕುರಿತು ಕೂಡಲೇ ಸ್ಥಳ ಸಮೀಕ್ಷೆ ನಡೆಸಿ ಅಧ್ಯಯನ ನಡೆಸಬೇಕು. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡಿ ರೋಗ ಹರಡದಂತೆ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ