ಕೊರೋನಾ ಗುಣವಾದವರಲ್ಲಿ ಕಾಡುತ್ತಿದೆ ಬೇರೆ ಸಮಸ್ಯೆ : ತೀವ್ರ ನಿಗಾ

Published : Oct 30, 2020, 08:42 AM IST
ಕೊರೋನಾ ಗುಣವಾದವರಲ್ಲಿ ಕಾಡುತ್ತಿದೆ ಬೇರೆ ಸಮಸ್ಯೆ : ತೀವ್ರ ನಿಗಾ

ಸಾರಾಂಶ

ಕೊರೋನಾ ಗುಣಮುಖವಾದ ನಂತರ ಗುಣಮುಖರಾದ ವ್ಯಕ್ತಿಗಳಲ್ಲಿ ಇತರೆ ಆರೋಗ್ಯ ಸಮಸ್ಯೆ ಕಂಡು ಬರುತ್ತಿದೆ. 

ವರದಿ : ರಾಕೇಶ್‌ ಎನ್‌.ಎಸ್‌.

 ಬೆಂಗಳೂರು (ಅ.30):  ಕೊರೋನಾ ಸೋಂಕು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬ ಕೆಲವು ವೈದ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಶ್ವಾಸಕೋಶ, ಹೃದ್ರೋಗ, ಮೂತ್ರಕೋಶ ತಜ್ಞರು ಸೇರಿದಂತೆ ಹಲವು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಾಜ್ಯ ಸರ್ಕಾರ ರಚಿಸಿದೆ. ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿನಿಂದ ಗುಣಮುಖರಾದವರ ಆರೋಗ್ಯದ ಮೇಲೆ ನಿಗಾ ಇಡಲು ಮುಂದಾಗಿದೆ.

ಕೋವಿಡ್‌-19ರಿಂದ ದೀರ್ಘಕಾಲೀನ ಸಮಸ್ಯೆಗಳು ಕಂಡುಬಂದಿರುವ ಪ್ರಕರಣ ಈವರೆಗೆ ವರದಿಯಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಅನೇಕ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಂಕಿನಿಂದ ಗುಣಮುಖರಾದವರಿಗೆ ಕೆಲ ತಿಂಗಳುಗಳಲ್ಲಿ ವಿವಿಧ ಸಮಸ್ಯೆಗಳು ತಲೆದೋರಿ ತಮ್ಮಲ್ಲಿಗೆ ಚಿಕಿತ್ಸೆಗೆ ಬರುತ್ತಿರುವುದನ್ನು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.

ಸೋಂಕಿನ ಸುನಾಮಿ : ಮತ್ತೆ ಸ್ಟ್ರಿಕ್ಟ್ ಲಾಕ್‌ಡೌನ್-ಕರ್ಫ್ಯೂ, ಎಲ್ಲೆಲ್ಲಿ..? .

ಬೆಂಗಳೂರಿನ ಅಸ್ಟೆರ್‌ ಆರ್‌ ವಿ ಹಾಸ್ಪಿಟಲ್‌ ನರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀಕಂಠಸ್ವಾಮಿ, ಕೋವಿಡ್‌ ಬಂದ ಬಳಿಕ ಎರಡ್ಮೂರು ತಿಂಗಳಲ್ಲಿ ನರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟಅನೇಕ ರೋಗಿಗಳು ನಮ್ಮಲ್ಲಿಗೆ ಚಿಕಿತ್ಸೆಗೆ ಬಂದಿದ್ದಾರೆ. ಮರೆವು, ನಿದ್ದೆಯ ಸಮಸ್ಯೆ, ಜಡತ್ವ, ಗೊಂದಲ, ನಡೆಯುವಾಗ ಎಡವುವುದು, ಸ್ನಾಯು ಸೆಳೆತ, ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಅನೇಕರಿಗೆ ಕಾಡಿದೆ. ಹೆಚ್ಚಿನವರಿಗೆ ಮಧುಮೇಹ, ರಕ್ತದೊತ್ತಡ, ಮೂರ್ಛೆರೋಗ, ಪಾಶ್ರ್ವವಾಯು, ಪಾರ್ಕಿನ್‌ಸನ್‌ ಅಥವಾ ನರಕ್ಕೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳು ಕೋವಿಡ್‌ ಪೂರ್ವದಲ್ಲೇ ಇದ್ದವು. ಕೋವಿಡ್‌ ನಂತರದಲ್ಲಿ ಅವರಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿದೆ ಎಂದು ಅವರು ಅನುಭವನ್ನು ಹಂಚಿಕೊಂಡಿದ್ದಾರೆ.

ವೈರಾಣು, ಮೆದುಳು ಅಥವಾ ನರವ್ಯೂಹಕ್ಕೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದು ಕಾರಣವಾಗಿರಬಹುದು. ಚಿಕಿತ್ಸೆ ಅಥವಾ ಔಷಧಿಯ ಅಡ್ಡ ಪರಿಣಾಮವೂ ಆಗಿರಬಹುದು. ಕೋವಿಡ್‌ ಪೂರ್ವ ಕಾಯಿಲೆಗಳಿಂದಲೂ ಆಗಿರಬಹುದು. ಭಯ ಅಥವಾ ಒತ್ತಡದಿಂದ ಸಂಭವಿಸಿರಬಹುದು. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಿದೆ ಎಂದು ಡಾ.ಶ್ರೀಕಂಠಸ್ವಾಮಿ ಹೇಳುತ್ತಾರೆ.

ರಾಜ್ಯದಲ್ಲಿ ಆಗಸ್ಟ್‌ ಬಳಿಕ ಸೋಂಕು ಉಲ್ಬಣಗೊಂಡಿರುವ ಕಾರಣ ದೀರ್ಘಕಾಲದ ಕೋವಿಡ್‌ ಪರಿಣಾಮಗಳ ಪ್ರಕರಣಗಳು ಡಿಸೆಂಬರ್‌, ಜನವರಿಯ ಹೊತ್ತಿಗೆ ನಮ್ಮ ಗಮನಕ್ಕೆ ಬರಬಹುದು. ಈ ಪರಿಣಾಮಗಳಿಗೆ ವೈರಸ್‌ ಕಾರಣವೇ ಅಥವಾ ನೀಡುವ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ಆಗುತ್ತದೆಯೇ ಎಂಬುದರ ಬಗ್ಗೆ ಮಾಹಿತಿಯಿಲ್ಲ ಎಂದು ನಿಮ್ಹಾನ್ಸ್‌ನ ಮಾನಸಿಕ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಮಾ ಮೂರ್ತಿ ತಿಳಿಸುತ್ತಾರೆ.

ಕೋವಿಡ್‌ನಿಂದ ಗಂಭೀರ ಆರೋಗ್ಯ ಸ್ಥಿತಿ ಎದುರಿಸಿ ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ನರರೋಗ ತಜ್ಞರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ.ಶ್ರೀಕಂಠಸ್ವಾಮಿ ಸಲಹೆ ನೀಡುತ್ತಾರೆ.

ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್‌ ವಿಭಾಗದ ನೋಡಲ್‌ ಅಧಿಕಾರಿ ಡಾ.ಸ್ಮಿತಾ ಪ್ರಕಾರ, ‘ನಾವು ಆರು ಸಾವಿರಕ್ಕೂ ಕ್ಕೂ ಹೆಚ್ಚು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಎರಡು ಸಾವಿರಕ್ಕೂ ಹೆಚ್ಚು ರೋಗಿಗಳ ಮೇಲೆ ಕೋವಿಡ್‌ ಪುನಶ್ಚೇತನ ಕೇಂದ್ರದ ಮೂಲಕ ನಿಗಾ ಇಟ್ಟಿದ್ದೇವೆ. ಆದರೆ ಯಾವ ರೋಗಿಗೂ ದೀರ್ಘಕಾಲೀನ ಸಮಸ್ಯೆ ಕಂಡುಬಂದಿಲ್ಲ. ಆದರೆ ಕೆಲ ಖಾಸಗಿ ವೈದ್ಯರುಗಳು ಇಂತಹ ಸಮಸ್ಯೆಗಳ ಬಗ್ಗೆ ಹೇಳುತ್ತಿರುವುದನ್ನು ಕೇಳಿದ್ದೇನೆæ’ ಎಂದು ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!