ಕೊರೋನಾ ಮಹಾಮಾರಿ : ರಾಜ್ಯದ ಜನರಿಗೆ ಭಾರಿ ಗುಡ್ ನ್ಯೂಸ್

By Kannadaprabha NewsFirst Published Oct 30, 2020, 7:17 AM IST
Highlights

ಇಡೀ ವಿಶ್ವಕ್ಕೆ ಅಪ್ಪಳಿಸಿ ಬೆಚ್ಚಿ ಬೀಳಿಸಿದ್ದ ಕೊರೋನಾ ಮಹಾಮಾರಿ ವಿಚಾರದಲ್ಲಿ ರಾಜ್ಯದ ಜನತೆಗೆ ಇಲ್ಲಿದೆ ಗುಡ್ ನ್ಯೂಸ್...

ಬೆಂಗಳೂರು (ಅ.30):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಳೆದೊಂದು ತಿಂಗಳಲ್ಲಿ ತೀವ್ರವಾಗಿ ಇಳಿಮುಖವಾಗುತ್ತಿದೆ. ಅಕ್ಟೋಬರ್‌ ಆರಂಭದ ದಿನಗಳಲ್ಲಿ ಶೇ.10ಕ್ಕಿಂತ ಹೆಚ್ಚು ಇರುತ್ತಿದ್ದ ಪಾಸಿಟಿವಿಟಿ ದರ ಈಗ ಶೇ.5ಕ್ಕಿಂತ ಕೆಳಕ್ಕೆ ಇಳಿದಿದೆ. ಅಲ್ಲದೆ, ಶೇ.90ರಷ್ಟುಕೊರೋನಾ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲ್ಲಿ, ರಾಜ್ಯವು ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಗಣನೀಯ ಯಶಸ್ಸು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ.

ಸಕ್ರಿಯ ಕೇಸ್‌ ಶೇ.50 ಇಳಿಕೆ:  ಅ.1ರಂದು ರಾಜ್ಯದಲ್ಲಿ 1.10 ಲಕ್ಷ ಸಕ್ರಿಯ ಪ್ರಕರಣಗಳಿದ್ದವು. ಆದರೆ ಅ.28ರ ಹೊತ್ತಿಗೆ ಇದು 68,161ಕ್ಕೆ ಕುಸಿದಿದೆ. ಹಾಗೆಯೇ ಈ ಅವಧಿಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4.92 ಲಕ್ಷ ಮಂದಿಯಿಂದ 7.33 ಲಕ್ಷಕ್ಕೆ ಏರಿದೆ. ರಾಜ್ಯದಲ್ಲಿ ಸದ್ಯ ಶೇ.8.4ರಷ್ಟುಸಕ್ರಿಯ ಪ್ರಕರಣಗಳಿದ್ದು, ಶೇ.1.4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಳೆದ 28 ದಿನಗಳಲ್ಲಿ ಕೊರೋನಾ ಸೋಂಕಿನ ಸ್ಥಿತಿಗತಿಯಲ್ಲಿ ರಾಜ್ಯ ಸ್ಥಿರವಾದ ಪ್ರಗತಿ ಸಾಧಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಕೊರೋನಾ ಮಹಾಮಾರಿ : ಎಚ್ಚರ.. ರಾಜಧಾನಿಗೆ ಕಾದಿದೆ 3ನೇ ಅಲೆ ಭೀತಿ

ಅಕ್ಟೋಬರ್‌ನ ಆರಂಭದ ದಿನಗಳಲ್ಲಿ ಏರುಗತಿಯಲ್ಲಿ ವರದಿಯಾಗುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಅ.10ರ ಬಳಿಕ ಇಳಿಕೆ ಹಾದಿಯಲ್ಲಿ ಸಾಗಿದೆ. ಅದರಲ್ಲೂ ಅ.15ರ ಬಳಿಕ ಪ್ರತಿದಿನ ಗುಣಮುಖರ ಸಂಖ್ಯೆಯೇ ಹೆಚ್ಚಾಗಿ ವರದಿಯಾಗುತ್ತಿದೆ. ದಿನನಿತ್ಯ ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತಿದ್ದ ಪಾಸಿಟಿವಿಟಿ ದರ ಇದೀಗ ಶೇ.5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ವರದಿಯಾಗುತ್ತಿದೆ ಎಂದಿದ್ದಾರೆ.

click me!