ಹೊಯ್ಸಳ ರಾಜವಂಶ ಹುಟ್ಟಿದ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷದ ಬಳಿಕ ಬಸ್‌ ಸಂಚಾರ

By Sathish Kumar KH  |  First Published Jun 26, 2023, 5:48 PM IST

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಬಳಿಕ ಕಾಂಗ್ರೆಸ್ ಸರ್ಕಾರದಿಂದ ಹೊಯ್ಸಳ ರಾಜವಂಶದ ತವರೂರಿಗೆ ಮೊಟ್ಟ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಾಗಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.26): ಇಡೀ ದೇಶದಲ್ಲಿ ಹೊಯ್ಸಳ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಯಾರಿಗೆ ಮಾಹಿತಿ ಇಲ್ಲ ಹೇಳಿ. ಒಂದು ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಚಿಕ್ಕಮಗಳೂರು ಜಿಲ್ಲೆಯ ಹೊಯ್ಸಳ ಗ್ರಾಮಕ್ಕೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿದ್ದರೂ ಸರ್ಕಾರದ ಸಾರಿಗೆ ಬಸ್‌ ಸಂಪರ್ಕವಿರಲಿಲ್ಲ. ಆದರೆ, ಇದೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಐತಿಹಾಸಿಕ ಹೊಯ್ಸಳ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಆಗಮಿಸಿದ್ದು, ಗ್ರಾಮಸ್ಥರೆಲ್ಲರೂ ಹಬ್ಬದಂತೆ ಸಂಭ್ರಮಾಚರಣೆ ಮಾಡಿದರು.

Latest Videos

undefined

ಕರ್ನಾಟಕ ರಾಜ್ಯವನ್ನಾಳಿದ ಪ್ರಸಿದ್ಧ ಮನೆತನಗಳಲ್ಲಿ ಒಂದಾದ, ಹೊಯ್ಸಳ ರಾಜವಂಶದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ, ರಾಜವಶದ ತವರು ಗ್ರಾಮವಾದ ಮೂಲ ಹೊಯ್ಸಳ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕು ಅಮೃತ ಮಹೋತ್ಸವ ಆಚರಣೆ ಮಾಡಿದರೂ ಸರ್ಕಾರದ ಬಸ್‌ ಸಂಚಾರವೇ ಸಿಕ್ಕಿರಲಿಲ್ಲ. ಇಡೀ ರಾಜ್ಯವನ್ನಾಳಿದ ರಾಜವಂಶದ ತವರಿಗೆ ಕನಿಷ್ಠ ಮೂಲ ಸೌಕರ್ಯವಾದ ಸಾರಿಗೆ ಸಂಪರ್ಕ ಪಡೆಯಲು ಸಾಧ್ಯವಾಗದೇ ಗ್ರಾಮಸ್ಥರು ಪರಿತಪಿಸಿ ಹೋಗಿದ್ದರು. ಆದರೆ, 75 ವರ್ಷಗಳ ನಿರಂತರ ಹೋರಾಟದ ಫಲವಾಗಿ ಇಂದು (ಜೂ.26 ಸೋಮವಾರ) ಕೆಎಸ್‌ಆರ್‌ಟಿಸಿ ಬಸ್‌ ಗ್ರಾಮಕ್ಕೆ ಬಂದಿದೆ.

ಮಹಿಳೆಯರಂತೆ ಉಚಿತ ಪ್ರಯಾಣ ಬೇಡ, ಬಸ್‌ನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಕೊಡಿ

ಆ ಗ್ರಾಮದಲ್ಲಿ ಇಂದು ಸಂಭ್ರಮವೂ ಸಂಭ್ರಮ. ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. 75 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಬಸ್ ಗ್ರಾಮಕ್ಕೆ ಆಗಮಿಸಿತ್ತು. ಕೆಂಪು ಬಸ್ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರಲ್ಲಿ ಸಂತಸ ಇಮ್ಮುಡಿಗೊಂಡಿತ್ತು. ಅದು ಕೂಡ ಹೊಯ್ಸಳ ರಾಜವಂಶದ ಮೂಲ ಹೊಯ್ಸಳ ಗ್ರಾಮಕ್ಕೆ ಬಂದ ಸರ್ಕಾರಿ ಬಸ್ ನೋಡಿ ಗ್ರಾಮಸ್ಥರು ಸಂಭ್ರಮಿಸಿದರು. ಇಡೀ ಗ್ರಾಮಸ್ಥರು ಪಟಾಕಿ ಸಿಡಿಸಿ ಹಬ್ಬದ ಸಂಭ್ರಮವನ್ನೇ ಆಚರಿಸಿದರು. ಈ ಕುರಿತು ಸರ್ಕಾರಕ್ಕೂ ಧನ್ಯವಾದ ತಿಳಿಸಿದರು.

ದಶಕಗಳ ಹೋರಾಟದ ಬಳಿಕ ಸರ್ಕಾರಿ ಬಸ್ :  ರಾಜ್ಯವನ್ನಾಳಿದ ಹಲವು ರಾಜ ಮನೆತನಗಳಲ್ಲಿ ಹೊಯ್ಸಳರ ಮನೆತನ ಕೂಡ ಒಂದು. ಅಂತಹಾ ಹೊಯ್ಸಳ ರಾಜರ ಮೂಲ ಸ್ಥಾನವಾದ ಹೊಯ್ಸಳಲು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಬಳಿಕ  ಮೊದಲ ಬಾರಿಗೆ ಸರ್ಕಾರಿ ಬಸ್ ಬಂದಿದೆ. ದಶಕಗಳ ಮನವಿ ಹಾಗೂ ಹೋರಾಟದ ಬಳಿಕ ಅಂತು-ಇಂತು ನಮ್ಮ ಊರಿಗೆ ಸರ್ಕಾರಿ ಬಸ್ ಬಂತೆಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ. ರಾಜವಂಶ ಹೊಯ್ಸಳರ ಮೂಲಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಯ್ಸಳಲು ಗ್ರಾಮ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇಂದಿಗೂ ಇದೆ. ಈ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳಿವೆ. ಕಾಡಂಚಿನ ಈ ಕುಗ್ರಾಮ ಮೂಲಭೂತ ಸಮಸ್ಯೆಗಳಿಂದ ವಂಚಿತವಾಗಿತ್ತು. 

ಮೂಲ ಸೌಕರ್ಯಗಳು ಇನ್ನೂ ಮರೀಚಿಕೆ: ರಾಜ್ಯದಲ್ಲಿ 75 ವರ್ಷಗಳಿಂದ ಅನೇಕ ಸರ್ಕಾರಗಳು ಬಂದು- ಹೋದರೂ ಈ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರಲಿಲ್ಲ. ಈ ಗ್ರಾಮದ  ಇತರೆ ಸಮಸ್ಯೆಗಳಿಗೂ ಯಾವ ಸರ್ಕಾರಗಳು ಸ್ಪಂದಿಸಿರಲಿಲ್ಲ. ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನನಾಯಕರು ಏನನ್ನೂ ಮಾಡಿರಲಿಲ್ಲ. ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲೆ-ಕಾಲೇಜುಗಳು ಹಾಗೂ ಕಚೇರಿಗಳಿಗೆ ಹೋಗಬೇಕಾಗಿತ್ತು. ಇಲ್ಲಿನ ನಿವಾಸಿಗಳು ಮೂಡಿಗೆರೆಗೆ ನೂತನವಾಗಿ ಆಯ್ಕೆಯಾದ ಶಾಸಕಿ ನಯನಾ ಮೋಟಮ್ಮರಿಗೂ ಬಸ್‌ಗಾಗಿ ಮನವಿ ಸಲ್ಲಿಸಿದ್ದರು. ಈಗ ಮನವಿಗೆ ಸ್ಪಂದಿಸಿದ್ದು, ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಕನಕಪುರದ ಗಂಡು ಯಾವುದಕ್ಕೂ ಹೆದರಿ‌ ಕೂರಬಾರದು: ಡಿಕೆ ಬ್ರದರ್ಸ್‌ಗೆ ಸಿ.ಟಿ. ರವಿ ಸಲಹೆ

ಬಸ್ ಬರುತ್ತಿದ್ದಂತೆ ಅಲಂಕಾರ ಮಾಡಿ ಪೂಜೆ ಸಲ್ಲಿಕೆ: 
ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಹಾಗಾಗಿ, ಗ್ರಾಮಸ್ಥರು ಬಸ್ಸಿಗೆ ತಳಿರು ತೋರಣಗಳನ್ನ ಕಟ್ಟಿ ಸ್ವಾಗತಿಕೊಂಡಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಕಟ್ಟಿ, ಟೇಪ್ ಕತ್ತರಿಸುವ ಮೂಲಕ ಮತ್ತೆಂದು ಬಸ್‌ ಸಂಚಾರ ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ. ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಜನೆಯು ಈ ಭಾಗದ ಬಡ ವರ್ಗದವರಿಗೆ ಲಭ್ಯವಾಗಲಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಇಂದಿಗೂ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಹಾಗಾಗಿ, ಸರ್ಕಾರ ಎಲ್ಲಾ ಭಾಗಕ್ಕೂ ಸರ್ಕಾರಿ ಬಸ್ ಬಿಡುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ.

click me!