‘ಬಿ’ ರಿಪೋರ್ಟ್ ಕೋರ್ಟ್ ಒಪ್ಪಿದರೆ ಮಾತ್ರ ಪಾಸ್‌ಪೋರ್ಟ್ ಹಕ್ಕು: ಹೈಕೋರ್ಟ್
- ‘ಬಿ’ ರಿಪೋರ್ಟ್ ಕೋರ್ಟ್ ಒಪ್ಪಿದರೆ ಮಾತ್ರ ಪಾಸ್‌ಪೋರ್ಟ್ ಹಕ್ಕು
- ಕೋರ್ಟ್ ಅಂಗೀಕಾರಕ್ಕೂ ಮುನ್ನ ಆರೋಪಿ ದೋಷಮುಕ್ತ ಎಂದು ಪರಿಗಣಿಸಲಾಗದು; ತೀರ್ಪು
ಬೆಂಗಳೂರು (ನ.22) : ಅಪರಾಧ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ‘ಬಿ’ ರಿಪೋರ್ಟ್ ನ್ಯಾಯಾಲಯದ ಅಂಗೀಕಾರಕ್ಕೆ ಬಾಕಿಯಿರುವಾಗ ಆರೋಪಿತರು ಪ್ರಕರಣದಿಂದ ದೋಷಮುಕ್ತರಾಗಿದ್ದಾರೆ ಎಂದರ್ಥವಲ್ಲ. ಇಂತಹ ಸಂದರ್ಭದಲ್ಲಿ ಆರೋಪಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆ ನೀಡಲು ನಿರಾಕರಿಸಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಸೂಚನೆ ಪ್ರಶ್ನಿಸಿ ಮೈಸೂರು ನಿವಾಸಿ ಕಾಜಲ್ ನರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವೋಟರ್ ಐಡಿ ಹಗರಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹ
ಪಾಸ್‌ಪೋರ್ಟ್ ಕಾಯ್ದೆ-1967ರ ಸೆಕ್ಷನ್ 6(2)(ಎಫ್) ಪ್ರಕಾರ, ಕ್ರಿಮಿನಲ್ ಆರೋಪ ಹೊತ್ತಿರುವವರ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗ ಆರೋಪಿತರಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯನ್ನು ನಿರಾಕರಿಸುವ ಅಧಿಕಾರ ಪಾರ್ಸ್‌ಪೋಟ್ ಪ್ರಾಧಿಕಾರ ಹೊಂದಿರುತ್ತದೆ. ಆದರೆ, ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆ ಎದುರಿಸುತ್ತಿರುವ ಅರ್ಜಿದಾರರು, ಖುಲಾಸೆಗೊಂಡರೆ ಅಥವಾ ಆರೋಪ ಮುಕ್ತರಾದರೆæ ಅಥವಾ ಅವರ ವಿರುದ್ಧದ ಪ್ರಕರಣ ರದ್ದಾದರೆ, ಕಾಯ್ದೆಯ ಸೆಕ್ಷನ್ 6(2)(ಎಫ್) ತೀವ್ರತೆ ಕಡಿಮೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ:
ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿ ಅನ್ವಯ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅರ್ಜಿದಾರರಿಗೆ ಪಾಸ್‌ಪೋರ್ಟ್ ಮರು ವಿತರಣೆ ಮಾಡಿದ್ದರು. ಈ ಕುರಿತು ಪೊಲೀಸರು ತಪಾಸಣೆ ನಡೆಸಿದ ವೇಳೆ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಅದನ್ನು ಅವರು ಮರೆಮಾಚಿರುವ ಸಂಗತಿ ಬೆಳಕಿಗೆ ಬಂದಿತ್ತು. ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರ ಮುಚ್ಚಿಟ್ಟು ಪಾರ್ಸ್‌ಪೋರ್ಟ್ ಪಡೆದಿದ್ದಾರೆ. ಹಾಗಾಗಿ, ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ನೀಡಬೇಕು ಎಂದು ಆರ್‌ಪಿಒ ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಕಾಜಲ್ ನರೇಶ್ ಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪಾರ್ಸ್‌ಪೋರ್ಟ್ ಕಾಯ್ದೆ ಸೆಕ್ಷನ್ 12(ಬಿ) ಪ್ರಕಾರ ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಪಾಸ್‌ಪೋರ್ಟ್ ವಾಪಸ್ ಕೊಡಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಅನ್ವಯವಾಗುತ್ತಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಪರ ವಕೀಲರು, ಪಾಸ್‌ಪೋರ್ಟ್ ಅವಧಿ ಮುಗಿದ ನಂತರ ಮರು ವಿತರಣೆ ಮಾಡುವ ಸಂದರ್ಭದಲ್ಲಿ ಕಾಯ್ದೆಯ ನಿಯಮಗಳ ಪ್ರಕಾರ, ಅಪರಾಧ ಪ್ರಕರಣಗಳಿಂದ ಮುಕ್ತರಾಗಿರಬೇಕು. ಬಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಅಪರಾಧದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಪರಿಗಣಿಸಬಾರದು. ಬಿ ರಿಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಅದನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರು ಪಾಸ್ ಪೋರ್ಟ್ ಮರು ವಿತರಣೆಗೆ ಕೋರಿದಾಗ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರವನ್ನು ಮುಚ್ಚಿಟ್ಟಿದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬೇಕಿದೆ. ಹಾಗಾಗಿ, ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತಿಳಿಸಿದರು.
ಮುಸ್ಲಿಮರ ಮದುವೆ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ: ಹೈಕೋರ್ಟ್
ಅಲ್ಲದೆ, ವಿದೇಶಕ್ಕೆ ತೆರಳುವ ಅಗತ್ಯವಿದ್ದರೆ ಆ ಕುರಿತು ಅಗತ್ಯ ನಿರ್ದೇಶನಕ್ಕಾಗಿ ಅರ್ಜಿದಾರರು ಪಾಸ್‌ಪೊರ್ಟ್ ಅಧಿಕಾರಿಗಳ ಮುಂದೆ ಮತ್ತು ಪ್ರಕರಣ ಬಾಕಿಯಿರುವ ವಿಚಾರಣಾ ನ್ಯಾಯಾಲಯದ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಅವಕಾಶ ಕಲ್ಪಿಸಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.