ವಿವಾದಿತ Bengaluru Tunnel Road ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!

Published : Dec 22, 2025, 10:32 AM IST
Adani Group to Get Bengaluru Tunnel Road Tender?

ಸಾರಾಂಶ

ಬೆಂಗಳೂರಿನ ಟ್ರಾಫಿಕ್ ನಿವಾರಣೆಗೆ ಉದ್ದೇಶಿಸಲಾದ ಟನಲ್ ರಸ್ತೆ ಯೋಜನೆಗೆ ಅದಾನಿ ಗ್ರೂಪ್ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಅದಾನಿ ವಿರೋಧಿಸುವ ಕಾಂಗ್ರೆಸ್ ಸರ್ಕಾರಕ್ಕೆ ಇದು ರಾಜಕೀಯವಾಗಿ ಇಕ್ಕಟ್ಟನ್ನು ಸೃಷ್ಟಿಸಿದೆ.

ಬೆಂಗಳೂರು (ಡಿ.22): ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೂಪಿಸಿರುವ ಕನಸಿನ ಯೋಜನೆ 'ಟನಲ್ ರಸ್ತೆ' ಈಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದಾ ರಾಷ್ಟ್ರಮಟ್ಟದಲ್ಲಿ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್, ಇದೀಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡುವ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಕಡಿಮೆ ಮೊತ್ತಕ್ಕೆ ಅದಾನಿ ಗ್ರೂಪ್ಸ್ ಬಿಡ್:

ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ 16.75 ಕಿ.ಮೀ ಉದ್ದದ ಟನಲ್ ರಸ್ತೆ ಯೋಜನೆಗಾಗಿ ಜಿಬಿಎ (GBA) ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಅದಾನಿ ಗ್ರೂಪ್ಸ್ ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದೆ. ಎರಡು ಪ್ಯಾಕೇಜ್‌ಗಳಲ್ಲಿ ನಡೆದ ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅದಾನಿ ಸಮೂಹವು ಮುಂಚೂಣಿಯಲ್ಲಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅದಾನಿ ಗ್ರೂಪ್ಸ್ ಸಲ್ಲಿಸಿರುವ ಮೊತ್ತವು ಸರ್ಕಾರದ ಅಂದಾಜು ಪಟ್ಟಿಗಿಂತಲೂ ಅಧಿಕವಾಗಿದೆ.

ಸರ್ಕಾರದ ಅಂದಾಜಿಗಿಂತ ಶೇ. 24ರಷ್ಟು ಹೆಚ್ಚು ಹಣಕ್ಕೆ ಬೇಡಿಕೆ

ಈ ಯೋಜನೆಗಾಗಿ ಸರ್ಕಾರವು 17,698 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ನಿಗದಿಪಡಿಸಿತ್ತು. ಆದರೆ, ಅದಾನಿ ಗ್ರೂಪ್ಸ್ 22,267 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿದೆ. ಅಂದರೆ ಸರ್ಕಾರದ ಅಂದಾಜಿಗಿಂತ ಸುಮಾರು 4,569 ಕೋಟಿ ರೂಪಾಯಿ (ಶೇ. 24) ಹೆಚ್ಚು ಹಣವನ್ನು ಅದಾನಿ ಗ್ರೂಪ್ ಕೇಳಿದೆ. ಇನ್ನೊಂದೆಡೆ ಹೈದರಾಬಾದ್ ಮೂಲದ ವಿಶ್ವ ಸಮುದ್ರ ಗ್ರೂಪ್ 25,474 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ (L2).

ತಾಂತ್ರಿಕ ಕಾರಣಗಳಿಂದ ಇತರ ಕಂಪನಿಗಳು ಹೊರಕ್ಕೆ:

ಆರಂಭದಲ್ಲಿ ದಿಲೀಪ್ ಬಿಲ್ಡ್ ಕಾನ್ ಮತ್ತು ರೈಲ್ವೆ ವಿಕಾಸ್ ನಿಗಮ ಲಿಮಿಟೆಡ್ (RVNL) ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಈ ಕಂಪನಿಗಳ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಹಣಕಾಸು ಬಿಡ್ ಹಂತಕ್ಕೆ ತಲುಪಿದ್ದು ಅದಾನಿ ಗ್ರೂಪ್ಸ್ ಮತ್ತು ವಿಶ್ವ ಸಮುದ್ರ ಕಂಪನಿಗಳು ಮಾತ್ರ.

ಸರ್ಕಾರದ ಮುಂದಿರುವ ಆಯ್ಕೆಗಳೇನು?

ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಸಲ್ಲಿಕೆಯಾಗಿರುವುದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ. ಸದ್ಯ ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ:

  • ಈ ಟೆಂಡರ್ ಅನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್ ಕರೆಯುವುದು.
  • ಈಗಿರುವ ಕಡಿಮೆ ಬಿಡ್‌ದಾರರಾದ (L1) ಅದಾನಿ ಗ್ರೂಪ್ ಜೊತೆ ಮಾತುಕತೆ ನಡೆಸಿ ದರ ಕಡಿಮೆ ಮಾಡುವಂತೆ ಚೌಕಾಸಿ ಮಾಡುವುದು.

ಹಿಂದೆ ನಡೆದ ಮೊದಲ ಟೆಂಡರ್‌ನಲ್ಲಿ ಯಾರೂ ಭಾಗವಹಿಸದ ಕಾರಣ, ಈಗ ಚೌಕಾಸಿ ನಡೆಸಿ ಅದಾನಿ ಸಮೂಹಕ್ಕೇ ಟೆಂಡರ್ ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗುತ್ತಾ ಟನಲ್ ರಸ್ತೆ?

ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಅದಾನಿ ಗ್ರೂಪ್ ಗುರಿಯಾಗಿದೆ. ಅದಾನಿ ವಿರುದ್ಧ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಟೀಕಿಸಿದ್ದಾರೆ. ಆದರೆ ಈಗ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಅದೇ ಅದಾನಿ ಗ್ರೂಪ್‌ಗೆ ಸಾವಿರಾರು ಕೋಟಿ ಮೊತ್ತದ ಟೆಂಡರ್ ನೀಡಿದರೆ ಅದು ಮುಜುಗರಕ್ಕೆ ಕಾರಣವಾಗಬಹುದು. ಇತ್ತ ಟನಲ್ ರಸ್ತೆಯನ್ನು ವಿರೋಧಿಸುತ್ತಿರುವ ಬಿಜೆಪಿ, ಈಗ ತನ್ನ ಬೆಂಬಲಿತ ಎಂದು ಬಿಂಬಿತವಾಗಿರುವ ಅದಾನಿ ಗ್ರೂಪ್ ವಿರುದ್ಧ ದನಿ ಎತ್ತುತ್ತದೆಯೇ ಅಥವಾ ಸುಮ್ಮನಿರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?
'ನೀವು ಎಂಎಲ್ಸಿ ಅನ್ನೋಕೆ ಸಾಕ್ಷಿ ಏನು?' Keshav Prasad ಕಾರು ತಡೆದ ಟೋಲ್ ಸಿಬ್ಬಂದಿ, ಒಂದು ಗಂಟೆ ಕಾಲ ಕಿರಿಕ್!