ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?

Kannadaprabha News, Ravi Janekal |   | Kannada Prabha
Published : Dec 22, 2025, 08:18 AM IST
Govt Grants Only 1 Room for 237 Requests in Hadagali Schools vijayanagar

ಸಾರಾಂಶ

ಹೂವಿನಹಡಗಲಿ ಮೀಸಲು ಕ್ಷೇತ್ರದ ಶಾಸಕ ಕೃಷ್ಣನಾಯ್ಕ ಅವರು ಬೆಳಗಾವಿ ಅಧಿವೇಶನದಲ್ಲಿ ಕ್ಷೇತ್ರದ ಗಂಭೀರ ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಸೋರುತ್ತಿರುವ ಸರ್ಕಾರಿ ಶಾಲೆಗಳು, ಅಪೂರ್ಣ ನೀರಾವರಿ ಯೋಜನೆಗಳು, ಹದಗೆಟ್ಟ ರಸ್ತೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು, ತಕ್ಷಣದ ಕ್ರಮಕ್ಕೆ ಒತ್ತಾಯಿಸಿದರು.

ಹೂವಿನಹಡಗಲಿ (ಡಿ.22): ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದ 189 ಸರ್ಕಾರಿ ಶಾಲೆಗಳಲ್ಲಿ 25 ಸಾವಿರಕ್ಕೂ ಅಧಿಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ, ಆದರೆ, ಆ ಶಾಲೆಗಳಲ್ಲಿ ಮೂಲಸೌಲಭ್ಯಗಳೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ಅಭ್ಯಾಸ ಮಾಡಬೇಕು ಎಂದು ಶಾಸಕ ಕೃಷ್ಣನಾಯ್ಕ ಬೆಳಗಾವಿ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ಅನಾವರಣ ಮಾಡಿದರು.

ತಾಲೂಕಿನ 650 ಶಾಲೆಗಳು ಮಳೆ ಬಂದಾಗ ಸೋರುತ್ತಿವೆ. ಅದಕ್ಕಾಗಿ ಸರ್ಕಾರಕ್ಕೆ 237 ಕೊಠಡಿಗಳನ್ನು ಕೇಳಿದರ ಕೇವಲ 1 ಕೊಠಡಿ ಮಂಜೂರು ಮಾಡಿದೆ. ಶಾಲೆಗಳಲ್ಲಿ ಶೌಚಾಲಯವಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲಾ ಆವರಣದಲ್ಲಿ ನಿಂತು ಬಿಸಿಯೂಟ ಮಾಡುವ ಪರಿಸ್ಥಿತಿ ಇದೆ. ಜ್ವಲಂತ ಸಮಸ್ಯೆಗಳ ಮಧ್ಯೆ ಶಾಲೆಗಳಲ್ಲಿ ಕಲಿಕಾ ವಾತವರಣ ಹೇಗೆ ಸೃಷ್ಟಿಯಾಗುತ್ತದೆ. ಈ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರದಲ್ಲಿ 84 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದೆ. ಇದರಲ್ಲಿ 32 ಸಾವಿರ ಹೆಕ್ಟೇರ್‌ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಸಣ್ಣ ನೀರಾವರಿ ಇಲಾಖೆಯ ಏತ ನೀರಾವರಿ ಯೋಜನೆಗಳಿಂದ 2685 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಇದರಲ್ಲಿ 355 ಹೆಕ್ಟೇರ್‌ ಪ್ರದೇಶಕ್ಕೆ ಮಾತ್ರ ನೀರುಣಿಸಲಾಗುತ್ತಿದೆ. ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ದಶಕದಿಂದ ಅರೆಬರೆ ಕಾಮಗಾರಿ ಆಗಿದೆ. ಕ್ಷೇತ್ರದ ಬನ್ನಿಕಲ್ಲು, ಹಿರೇಮಲ್ಲನಕೆರೆ, ತಳಕಲ್ಲು ಕೆರೆಗಳ ನೀರು ತಿಂಬಿಸುವ ಯೋಜನೆಯ ಪೈಪ್‌ಲೈನ್‌ ಸೋರುತ್ತಿದೆ. ಇದಕ್ಕೆ ಪ್ರತ್ಯೇಕ ಪೈಪ್‌ಲೈನ್‌ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಗಮನ ಹರಿಸುತ್ತಿಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ 158 ಕಿ.ಮೀ ರಸ್ತೆ ಗುಂಡಿಗಳಿಂದ ತುಂಬಿದೆ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿವೆ, ಆ್ಯಂಬುಲೆನ್ಸ್ ಇಲ್ಲ, ಮೂಲ ಸೌಕರ್ಯ ಕೊರತೆ ಇದೆ.ಕ್ಷೇತ್ರದ ಹುಲಿಗುಡ್ಡದ ಬಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇರುವ ಜಾಗದಲ್ಲಿ ಎರಡು ಹಾಸ್ಟೆಲ್ ತೆರೆಯಲು ಅವಕಾಶವಿದೆ. ಆದರೆ ನನ್ನ ಕ್ಷೇತ್ರದಲ್ಲಿ ತಾಂತ್ರಿಕ ಕಾಲೇಜು ಇಲ್ಲ ಎಂದು ತಪ್ಪು ಮಾಹಿತಿ ನೀಡಿ, ಹಾಸ್ಟೆಲ್ ವರ್ಗಾಯಿಸಲಾಗಿದೆ. ಇದರಿಂದಾಗಿ 76 ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಮಾಗಳ-ಕಲ್ಲಾಗನೂರು ಸೇತುವೆ ನಿರ್ಮಾಣಕ್ಕೆ ಶೀಘ್ರ ಚಾಲನೆ ಕೊಡಿ, ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆಗಳ ಅಗತ್ಯವಿದೆ. ಮಾಜಿ ಡಿಸಿಎಂ ದಿ. ಎಂ.ಪಿ. ಪ್ರಕಾಶ್ ಅವರು ರೂಪಿಸಿದ್ದ, ಪೊಲೀಸ್ ತರಬೇತಿ ಶಾಲೆ ತೆರೆಯುವ ಯೋಜನೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?
'ನೀವು ಎಂಎಲ್ಸಿ ಅನ್ನೋಕೆ ಸಾಕ್ಷಿ ಏನು?' ಕೇಶವ ಪ್ರಸಾದ್ ಕಾರು ತಡೆದ ಟೋಲ್ ಸಿಬ್ಬಂದಿ, ಒಂದು ಗಂಟೆ ಕಾಲ ಕಿರಿಕ್!