ದುಬೈನಿಂದ ಬೆಂಗಳೂರಿಗೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್, ಚಿನ್ನ ಖರೀದಿಸಲು ಬೇಕಾದ ಹಣವನ್ನು ಹವಾಲಾ ಮುಖಾಂತರ ರವಾನೆ ಮಾಡಿರುವುದನ್ನು ಖುದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದೆ.
ಬೆಂಗಳೂರು (ಮಾ.26): ದುಬೈನಿಂದ ಬೆಂಗಳೂರಿಗೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್, ಚಿನ್ನ ಖರೀದಿಸಲು ಬೇಕಾದ ಹಣವನ್ನು ಹವಾಲಾ ಮುಖಾಂತರ ರವಾನೆ ಮಾಡಿರುವುದನ್ನು ಖುದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ನಟಿ ರನ್ಯಾ ರಾವ್ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಪೂರ್ಣಗೊಳಿಸಿರುವ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಾ.27ಕ್ಕೆ ತೀರ್ಪು ಕಾಯ್ದಿರಿಸಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಡಿಆರ್‌ಐ ಪರ ವಕೀಲರು ವಾದ ಮಂಡಿಸಿ, ರನ್ಯಾ ರಾವ್ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಗಂಭೀರ ಸ್ವರೂಪದ ಜಾಮೀನು ರಹಿತ ಅಪರಾಧ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ಕೇವಲ ಚಿನ್ನ ಅಕ್ರಮ ಸಾಗಣೆ ಅಪರಾಧ ನಡೆದಿಲ್ಲ. ಚಿನ್ನ ಖರೀದಿಗೆ ಬೇಕಾದಷ್ಟು ಹಣವನ್ನು ಹವಾಲಾ ಮೂಲಕ ವಿದೇಶಕ್ಕೆ ರವಾನಿಸಿರುವುದಾಗಿ ಆರೋಪಿ ರನ್ಯಾ ಅವರೇ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಿದರು. ರನ್ಯಾ ರಾವ್ ದುಬೈನಿಂದ ಚಿನ್ನದ ಜೊತೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ6:30ಕ್ಕೆ ಬಂದಿಳಿದ ವೇಳೆ ಡಿಐಆರ್ ಅಧಿಕಾರಿಗಳು ಆಕೆಯನ್ನು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ.
ಪರಿಶೀಲನೆ ವೇಳೆ ಡಿಆರ್‌ಐ ಅಧಿಕಾರಿಗಳು ಕಾನೂನುಬದ್ಧವಾದ ಎಲ್ಲ ಮಾರ್ಗಸೂಚಿ ಪಾಲಿಸಿದ್ದಾರೆ. ಕಸ್ಟಮ್ಸ್ ಕಾಯ್ದೆ ಸೆಕ್ಷನ್ 123 ಪ್ರಕಾರ ಯಾವುದೇ ಸರಕನ್ನು ಅಕ್ರಮವಾಗಿ ಸಾಗಣೆ ಮಾಡಲು ಯತ್ನಿಸಿದರೆ ಮತ್ತು ಕೃತ್ಯಕ್ಕೆ ನಂಬಲರ್ಹ ಪ್ರಾಥಮಿಕ ಸಾಕ್ಷ್ಯಗಳಿದ್ದರೆ ಜಾಮೀನು ನೀಡಬಾರದು. ಸಂಜೆ 6:30 ಕ್ಕೆ ಶುರುವಾದ ತಪಾಸಣೆ ಕಾರ್ಯ ಮಧ್ಯರಾತ್ರಿ 1:30 ಕ್ಕೆ ಮುಗಿದಿದೆ. ಆ ನಂತರ ರನ್ಯಾಗೆ ಸಮನ್ಸ್ ಜಾರಿಗೊಳಿಸಿ ಪ್ರಾಥಮಿಕ ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಪ್ರಾಥಮಿಕ ವಿಚಾರಣೆಯಲ್ಲಿ ರನ್ಯಾ ಅವರು ಚಿನ್ನ ಅಕ್ರಮ ಸಾಗಣೆ ಮಾಡಿರುವುದು ದೃಢಪಟ್ಟ ನಂತರವೇ ಬಂಧನ ಮಾಡಲಾಗಿದೆ.
ನಟಿ ರನ್ಯಾ ರಾವ್ ಕೇಸಲ್ಲಿರುವ ಇಬ್ಬರು ಸಚಿವರ ಹೆಸರು ಸದನದಲ್ಲಿ ಹೇಳುವೆ: ಶಾಸಕ ಯತ್ನಾಳ್
ಈ ವೇಳೆ ಬಂಧನಕ್ಕೆ ಸೂಕ್ತ ಕಾರಣ ನೀಡಿ ಅರೆಸ್ಟ್ ಮೆಮೊ ನೀಡಲಾಗಿದೆ. ಆದ್ದರಿಂದ ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಈ ವಾದ ಆಕ್ಷೇಪಿಸಿದ ರನ್ಯಾ ರಾವ್ ಪರ ವಕೀಲರು, ರನ್ಯಾ ಅವರ ವಿಚಾರಣೆ ಮತ್ತು ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ಅಧಿಕಾರಿಗಳು ಸಂಪೂರ್ಣವಾಗಿ ಕಸ್ಟಮ್ಸ್ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಹಾಗಾಗಿ, ರನ್ಯಾ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.ವಾದ -ಪ್ರತಿವಾದ ಆಲಿಸಿ ವಿಚಾರಣೆ ಮುಕ್ತಾಯಗೊಳಿಸಿದ ನ್ಯಾಯಾಲಯ ಮಾ.27ಕ್ಕೆ ತೀರ್ಪು ಕಾಯ್ದಿರಿಸಿತು.