ನಟ ದರ್ಶನ್ ರಕ್ಷಣೆಗೆ ಹೆಂಡತಿ ವಿಜಯಲಕ್ಷ್ಮಿ ಮಾಡಿದ ಪ್ರಯತ್ನ ವಿಫಲ; ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ!

Published : Oct 08, 2026, 11:57 AM IST
Vijayalakshmi Darshan

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದರು. ಆರೋಪಿಗೆ ಕೇವಲ ಪಾಟಿಸವಾಲು ನಡೆಸುವ ಹಕ್ಕಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ನವದೆಹಲಿ (ಅ.08): ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಪತಿಯನ್ನು ಕಾನೂನಿನ ಕಂಟಕದಿಂದ ರಕ್ಷಿಸಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ಕಾನೂನು ಹೋರಾಟ ವಿಫಲವಾಗಿದ್ದು, ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ಏನು?

ಪ್ರಕರಣದಲ್ಲಿ ಆರೋಪಿಯೊಬ್ಬ ಮಾಫಿ ಸಾಕ್ಷಿ (Approver) ಆಗುವುದನ್ನು ಮತ್ತು ಆತನ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿಜಯಲಕ್ಷ್ಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ನ್ಯಾಯಾಲಯಕ್ಕೆ ಈ ರೀತಿಯ ಹೇಳಿಕೆ ದಾಖಲಿಸಿಕೊಳ್ಳುವ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠದಲ್ಲಿ ಈ ಮಹತ್ವದ ಅರ್ಜಿಯ ವಿಚಾರಣೆ ನಡೆಯಿತು.

ಕೋರ್ಟ್ ಕಲಾಪದಲ್ಲಿ ನಡೆದಿದ್ದೇನು?

ದರ್ಶನ್ ಪರ ಹಿರಿಯ ವಕೀಲ ನಾಗಮುತ್ತು ಅವರು ವಾದ ಮಂಡಿಸಿ, 'ಮಾಫಿ ಸಾಕ್ಷಿ ಹೇಳಿಕೆ ವಿಚಾರದಲ್ಲಿ ಕೇವಲ ಪ್ರಿನ್ಸಿಪಲ್ ಕೋರ್ಟ್‌ಗೆ ಮಾತ್ರ ಅಧಿಕಾರವಿದ್ದು, ವಿಚಾರಣಾ ನ್ಯಾಯಾಲಯಕ್ಕೆ (ಟ್ರಯಲ್ ಕೋರ್ಟ್) ಈ ಅಧಿಕಾರವಿಲ್ಲ' ಎಂದು ವಾದ ಮಂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಪರ್ದಿವಾಲಾ ಪೀಠ, 'ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳುವ ಸಂಪೂರ್ಣ ಅಧಿಕಾರ ಸೆಷನ್ಸ್/ಟ್ರಯಲ್ ಕೋರ್ಟ್‌ಗೆ ಇದೆ. ಟ್ರಯಲ್ ಕೋರ್ಟ್‌ಗೆ ಅಧಿಕಾರವಿಲ್ಲ ಎಂಬ ವಾದವನ್ನು ಒಪ್ಪಲಾಗದು. ಇದಕ್ಕಿಂತ ಬಲವಾದ ಮತ್ತೇನಾದರೂ ಅಂಶಗಳಿದ್ದರೆ ವಾದ ಮಂಡಿಸಿ' ಎಂದು ಕಟುವಾಗಿ ಹೇಳಿತು.

ಆರೋಪಿಗೆ ಪ್ರಶ್ನಿಸುವ ಹಕ್ಕಿಲ್ಲ, ಕ್ರಾಸ್ ಎಕ್ಸಾಮಿನೇಷನ್‌ಗೆ ಮಾತ್ರ ಅವಕಾಶ:

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, 'ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಪ್ರಶ್ನಿಸುವ ಹಕ್ಕು ಆರೋಪಿಗಳಿಗೆ ಇರುವುದಿಲ್ಲ. ಆದರೆ, ಆ ಸಾಕ್ಷಿಯನ್ನು ಪಾಟಿಸವಾಲಿಗೆ (Cross-examination) ಒಳಪಡಿಸುವ ಹಕ್ಕು ಆರೋಪಿಗಿದೆ. ಈಗಾಗಲೇ ಹೈಕೋರ್ಟ್ ಕ್ರಾಸ್ ಎಕ್ಸಾಮಿನೇಷನ್ ವೇಳೆ ಆರೋಪಿ ನ್ಯಾಯಾಲಯದಲ್ಲಿ ಹಾಜರಿರಲು ಅವಕಾಶ ಕಲ್ಪಿಸಿದೆ' ಎಂದು ಪೀಠದ ಗಮನಕ್ಕೆ ತಂದರು.

ಸರ್ಕಾರದ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪೀಠ, ಆರೋಪಿಗೆ ಕೇವಲ ಪಾಟಿಸವಾಲು ನಡೆಸುವ ಹಕ್ಕಿದೆಯೇ ಹೊರತು, ಮಾಫಿ ಸಾಕ್ಷಿಯ ಪ್ರಕ್ರಿಯೆಯನ್ನೇ ವಿರೋಧಿಸಲು ಅಥವಾ ಪ್ರಶ್ನಿಸಲು ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿ ವಿಜಯಲಕ್ಷ್ಮಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ದರ್ಶನ್ ಪರ ವಕೀಲರಿಗೆ ದೊಡ್ಡ ಮುಖಭಂಗವಾದಂತಾಗಿದ್ದು, ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲಾತಿಗೆ ಇದ್ದ ಕಾನೂನು ಅಡ್ಡಿ ಸಂಪೂರ್ಣ ನಿವಾರಣೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಸರಾ ಹಬ್ಬಕ್ಕೂ ಮುನ್ನವೇ ಮಹತ್ವದ ಬದಲಾವಣೆ: 14 ಅಕಾಡೆಮಿ, 3 ಪ್ರಾಧಿಕಾರಗಳ ಅಧ್ಯಕ್ಷರಿಗೆ ಹುದ್ದೆ ಬಿಡಲು ಸೂಚನೆ!
ಹಾಲಿನ ದರ ಹೆಚ್ಚಳ ಬೆನ್ನಲ್ಲೇ KSRTC, BMTC ಪ್ರಯಾಣಿಕರಿಗೂ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಸಜ್ಜು!