
ಬೆಂಗಳೂರು (ಅ.8): ಹಾಲು ಎಣ್ಣೆ ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟ ನಿವಾರಿಸುವ ಉದ್ದೇಶದೊಂದಿಗೆ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದ್ದು, ಬಿಎಂಟಿಸಿ ಬಸ್ ಪ್ರಯಾಣ ದರ ಶೇ.15 ರಿಂದ 17ರಷ್ಟು ಮತ್ತು ಉಳಿದ ಮೂರು ನಿಗಮಗಳ ಬಸ್ ಪ್ರಯಾಣ ದರ ಶೇ.13ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾದಲ್ಲಿ ಬಹುತೇಕ ನಿಶ್ಚಿತವಾಗಿರುವ ನಂದಿನ ಹಾಲಿನ ದರದ ಏರಿಕೆ ಬಳಿಕ ಪ್ರಯಾಣವೂ ಜನಸಾಮಾನ್ಯರ ಪಾಲಿಗೆ ಹೊರೆಯಾಗಲಿದೆ.
ಡೀಸೆಲ್ ಬೆಲೆ, ನೌಕರರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು 8 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ. ಅಲ್ಲದೆ ನಿಗಮಗಳ ನಷ್ಟದ ಪ್ರಮಾಣ ವರ್ಷದಿಂದ ವರ್ಷದಿಂದ ಹೆಚ್ಚುತ್ತಲೇ ಇದೆ. ಹೀಗಾಗಿ ಬಸ್ ಪ್ರಯಾಣ ದರ ಹೆಚ್ಚಳ ಸೇರಿ ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಅಧ್ಯಯನ ಅಂತಿಮ ಹಂತದಲ್ಲಿದ್ದು, ಈ ವಾರದೊಂದಿಗೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಅದಕ್ಕೂ ಮುನ್ನವೇ ಬಸ್ ಪ್ರಯಾಣ ದರ ಹೆಚ್ಚಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂಬುದನ್ನು ಅತುಲ್ ತಿವಾರಿ ಸಮಿತಿ ಸಲ್ಲಿಸುವ ವರದಿಯನ್ನಾಧರಿಸಿ ತೀರ್ಮಾನಿಸಲಾಗುತ್ತದೆ. ಮೂಲಗಳ ಪ್ರಕಾರ ಉಳಿದೆಲ್ಲ ನಿಗಮಗಳಿಗಿಂತ ಬಿಎಂಟಿಸಿ ಹೆಚ್ಚಿನ ನಷ್ಟದಲ್ಲಿರುವ ಕಾರಣ ಆ ನಿಗಮದ ಬಸ್ ಪ್ರಯಾಣ ದರ ಶೇ.15ರಿಂದ 17ರಷ್ಟು ಹೆಚ್ಚಳಕ್ಕೆ ಉಳಿದಂತೆ ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್ ಪ್ರಯಾಣ ದರ ಶೇ.13ರಿಂದ 15ರಷ್ಟು ಹೆಚ್ಚಳ ಮಾಡುವ ಕುರಿತು ಚರ್ಚಿಸಲಾಗಿದೆ.
ಇನ್ನೊಂದು ಚರ್ಚೆಯಂತೆ ಶೇಕಡಾವಾರು ಪ್ರಯಾಣ ದರ ಹೆಚ್ಚಳ ಮಾಡುವ ಬದಲು ಸ್ಟೇಜ್‌ವಾರು ಪ್ರಯಾಣ ದರ ಹೆಚ್ಚಳ ಮಾಡುವುದು ಸೂಕ್ತ ಎಂದೂ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಎರಡೂ ವಿಚಾರಗಳ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ