ನಿಗಮ-ಮಂಡಳಿ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಈಗ ಡವಡವ

By Kannadaprabha NewsFirst Published Feb 5, 2024, 4:34 AM IST
Highlights

ಶಾಸಕರಿಗೆ ಜ.26 ರಂದೇ ನಿಗಮ-ಮಂಡಳಿ ಹಂಚಿಕೆಯಾಗಿದೆ. ಕಾರ್ಯಕರ್ತರ ಪೈಕಿ 34 ಮಂದಿ ಕಾರ್ಯಕರ್ತರ ಪಟ್ಟಿ ಸಿದ್ಧವಾಗಿದ್ದರೂ ನಿಗಮ-ಮಂಡಳಿ ಹಂಚಿಕೆಯಾಗಿಲ್ಲ. ಈ ಬಗ್ಗೆ ಒಂದೆರಡು ಸಭೆ ನಡೆಯಿತಾದರೂ ಕಳೆದ 8-10 ದಿನಗಳಿಂದ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
 

ಬೆಂಗಳೂರು(ಫೆ.05): ತೀವ್ರ ಒತ್ತಡದ ಹಿನ್ನೆಲೆಯಲ್ಲಿ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವ ರಾಜ್ಯ ಸರ್ಕಾರವು ಕಾರ್ಯಕರ್ತರಿಗೆ ನಿಗಮ-ಮಂಡಳಿ ಹುದ್ದೆ ಹಂಚುವ ಪ್ರಕ್ರಿಯೆಗೆ ವೇಗ ನೀಡುತ್ತಿಲ್ಲ. ಕಳೆದ 8-10 ದಿನಗಳಿಂದ ನೇಮಕ ಪ್ರಕ್ರಿಯೆ ಬಗ್ಗೆ ಸುಳಿವೇ ಇಲ್ಲದಿರುವುದರಿಂದ ಆಕಾಂಕ್ಷಿ ಕಾರ್ಯಕರ್ತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಶಾಸಕರಿಗೆ ಜ.26 ರಂದೇ ನಿಗಮ-ಮಂಡಳಿ ಹಂಚಿಕೆಯಾಗಿದೆ. ಕಾರ್ಯಕರ್ತರ ಪೈಕಿ 34 ಮಂದಿ ಕಾರ್ಯಕರ್ತರ ಪಟ್ಟಿ ಸಿದ್ಧವಾಗಿದ್ದರೂ ನಿಗಮ-ಮಂಡಳಿ ಹಂಚಿಕೆಯಾಗಿಲ್ಲ. ಈ ಬಗ್ಗೆ ಒಂದೆರಡು ಸಭೆ ನಡೆಯಿತಾದರೂ ಕಳೆದ 8-10 ದಿನಗಳಿಂದ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.

Latest Videos

ನಿಗಮ ಮಂಡಳಿ ಅಧ್ಯಕ್ಷನಾಗಿರುವುದು ನನಗೆ ಬಯಸದೇ ಬಂದ ಭಾಗ್ಯ: ಶಾಸಕ ರಾಜು ಕಾಗೆ

ಆತಂಕ ಏಕೆ?:

ಸದ್ಯದಲ್ಲೇ ಜಂಟಿ ಅಧಿವೇಶನ, ಬಜೆಟ್ ಮಂಡನೆ ಆ ಬಳಿಕ ಮಾರ್ಚ್‌ ತಿಂಗಳಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ನೀತಿ ಸಂಹಿತೆ ಜಾರಿಯಾದರೆ ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ನಿಗಮ-ಮಂಡಳಿ ನೇಮಕ ಮಾಡುವಂತಿಲ್ಲ. ಹೀಗಾಗಿ ಪಟ್ಟಿಯಲ್ಲಿ ಹೆಸರಿರುವ ಕಾರ್ಯಕರ್ತರಿಗೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಧ್ಯಕ್ಷ ಸ್ಥಾನ ಸಿಗಲ್ಲವೇನೋ ಎಂಬ ಆತಂಕ ಉಂಟಾಗಿದೆ ಎಂದು ತಿಳಿದುಬಂದಿದೆ.

ನಿಗಮ-ಮಂಡಳಿ ನೇಮಕದ ವೇಳೆ ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಅಧಿಕಾರ ನೀಡಬೇಕು. ಲೋಕಸಭೆ ಚುನಾವಣೆ ಬಳಿಕ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದರು. ಹೀಗಾಗಿ ಶಾಸಕರ ಪಟ್ಟಿಯನ್ನು ಮಾತ್ರವೇ ಹೈಕಮಾಂಡ್‌ಗೆ ರವಾನಿಸಿದ್ದರು.

ಎಲ್ಲರಿಗೂ ಅಧಿಕಾರ ಸಿಗಲೆಂದುನಿಗಮ ಹುದ್ದೆಗೆ 2 ವರ್ಷ ಅವಧಿ: ಡಿಕೆ ಶಿವಕುಮಾರ

ಆದರೆ ಹೈಕಮಾಂಡ್‌ ಕಾರ್ಯಕರ್ತರನ್ನೂ ಸೇರಿಸಿ ನಿಗಮ-ಮಂಡಳಿ ಅಧಿಕಾರ ಹಂಚಿಕೆ ಮಾಡಿ ಎಂದು ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ನಿಂದಲೂ ಅನುಮೋದನೆ ಪಡೆದಿದೆ. ಬೆನ್ನಲ್ಲೇ ಶಾಸಕರ ಪಟ್ಟಿಯನ್ನೂ ಪ್ರಕಟಿಸಿದೆ. ಆದರೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ಹಂಚಿಕೆ ಪ್ರಕ್ರಿಯೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಆತಂಕ ಏಕೆ?

- 34 ಶಾಸಕರಿಗೆ ನಿಗಮ-ಮಂಡಳಿ ಹುದ್ದೆಗಳ ಅಧ್ಯಕ್ಷ ಸ್ಥಾನ ಘೋಷಣೆ
- ಆದರೆ ಕಾರ್ಯಕರ್ತರಿಗೆ ಹುದ್ದೆ ನೀಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿಲ್ಲ
- 34 ಕಾರ್ಯಕರ್ತರ ಪಟ್ಟಿ ಸಿದ್ಧ. ಆದರೆ ನಿಗಮ-ಮಂಡಳಿ ಹಂಚಿಕೆಯಾಗಿಲ್ಲ
- ಜಂಟಿ ಅಧಿವೇಶನ, ಬಜೆಟ್ ಮಂಡನೆ ತಯಾರಿಯಲ್ಲಿ ಸರ್ಕಾರ ಬ್ಯುಸಿ
- ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಸಾಧ್ಯತೆ
- ಹೀಗಾದಲ್ಲಿ ಚುನಾವಣೆ ಮುಗಿಯುವವರೆಗೂ ಹುದ್ದೆ ಸಿಗಲ್ಲ ಎಂಬ ಚಿಂತೆ

click me!