ಫೋನ್‌ ಕದ್ದಾಲಿಕೆ: ಬೆಲ್ಲದ್‌ ದೂರು ಬಗ್ಗೆ ಎಸಿಪಿ ತನಿಖೆ

By Kannadaprabha NewsFirst Published Jun 19, 2021, 11:42 AM IST
Highlights

* ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ನೀಡಿರುವ ದೂರು
* ಬೆಲ್ಲದ್‌ಗೆ ಪರಿಚಯ ಇಲ್ಲದ ವ್ಯಕ್ತಿಯಿಂದ ಪದೇ-ಪದೇ ಕರೆ 
* ಬೆಲ್ಲದ್‌ ಅವರಿಂದ ಮಾಹಿತಿ ಪಡೆದು ಕೂಲಂಕಷವಾಗಿ ತನಿಖೆ 

ಬೆಂಗಳೂರು(ಜೂ.19): ​ ಕುರಿತು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ನೀಡಿರುವ ದೂರಿನ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶಾಸಕ ಅರವಿಂದ್‌ ಬೆಲ್ಲದ್‌ ಅವರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ನೀಡಿರುವ ದೂರಿನ ಪ್ರತಿ ನಮಗೆ ವರ್ಗಾವಣೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಲಿದೆ. ಎರಡ್ಮೂರು ಬಾರಿ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಪರಿಚಯ ಇಲ್ಲದ ವ್ಯಕ್ತಿಯಿಂದ ಪದೇ-ಪದೇ ಕರೆ ಬಂದಿದೆ. ಅಲ್ಲದೆ, ಫೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ಶಾಸಕರು ದೂರಿನಲ್ಲಿ ಹೇಳಿದ್ದಾರೆ. ಈ ಎಲ್ಲದರ ಬಗ್ಗೆ ಶಾಸಕ ಅರವಿಂದ್‌ ಬೆಲ್ಲದ್‌ ಅವರಿಂದ ತನಿಖಾಧಿಕಾರಿಗಳು ಮಾಹಿತಿ ಪಡೆದು ಕೂಲಂಕಷವಾಗಿ ನಡೆಸಲಿದ್ದಾರೆ. ಈಗಾಗಲೇ ಕೇಂದ್ರ ವಿಭಾಗದ ಡಿಸಿಪಿ ಕೂಡ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಈ ಬಗ್ಗೆ ಕಬ್ಬನ್‌ಪಾರ್ಕ್ ಎಸಿಪಿ ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ಆಯುಕ್ತರು ವಿವರಿಸಿದರು.

ಕರೆಗಳ ಬಗ್ಗೆ ತನಿಖೆ:

ಶಾಸಕ ಅರವಿಂದ್‌ ಬೆಲ್ಲದ್‌ ಅವರಿಂದ ದೂರಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಿದೆ. ಶಾಸಕರು ಮೊಬೈಲ್‌ ಮೂಲಕ ಸಂಪರ್ಕಕಕ್ಕೆ ಸಿಕ್ಕಿದ್ದು, ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದು ಕಬ್ಬನ್‌ಪಾರ್ಕ್ ಎಸಿಪಿ ಯತಿರಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಜೈಲಿಂದ ಕರೆ ಬಂದಿದ್ದರೂ ಆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಹೀಗಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿದೆ. ಎಫ್‌ಐಆರ್‌ ಏಕಾಏಕಿ ಮಾಡುವುದಿಲ್ಲ, ಪರಿಶೀಲನೆ ನಡೆಸಿ ಎಫ್‌ಐಆರ್‌ ದಾಖಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬೆಲ್ಲದ್ ಫೋನ್ ಟ್ಯಾಪಿಂಗ್ ಬಾಂಬ್; ಯಾರದು ಯುವರಾಜ ಸ್ವಾಮಿ..?

ಶಾಸಕ ಅರವಿಂದ್‌ ಬೆಲ್ಲದ ಅವರು ವಿಧಾನಸಭೆಯ ಸ್ಪೀಕರ್‌ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ಕೊಟ್ಟಿರುವ ಬಗ್ಗೆ ಹೇಳಿದ್ದಾರೆ. ವಿಷಯ ಗೊತ್ತಾದ ತಕ್ಷಣ ಸತ್ಯಾಸತ್ಯತೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ತಿಳಿಸಿದ್ದಾರೆ. 

ಸಿಬಿಐ ತನಿಖೆಗೆ ಗುರಿಯಾಗಿದ್ದವರಿಗೇ ಹೊಣೆ

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇಶ ವ್ಯಾಪಿ ಸದ್ದು ಮಾಡಿದ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಎಸಿಪಿ ಯತಿರಾಜ್‌ ಸಿಬಿಐ ತನಿಖೆಗೆ ಗುರಿಯಾಗಿದ್ದರು. ಪ್ರಸ್ತುತ ಯತಿರಾಜ್‌ ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿಯಾಗಿದ್ದಾರೆ. ಇದೀಗ ಮತ್ತೆ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಅದೇ ಎಸಿಪಿಗೆ ವಹಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
 

click me!