ಕೋವಿಡ್‌ ಬುಲೆಟಿನ್‌: ದೇಶದಲ್ಲೇ ಕರ್ನಾಟಕ ನಂ.1..!

By Kannadaprabha NewsFirst Published Jun 19, 2021, 7:47 AM IST
Highlights

* ಅತ್ಯಂತ ಸಮಗ್ರ, ಸುಲಭವಾಗಿ ಗ್ರಹಿಸುವ ರೀತಿಯಲ್ಲಿ ದೈನಂದಿನ ಮಾಹಿತಿ ಪ್ರಕಟ
* ವಿಶ್ವದ ಅಗ್ರಮಾನ್ಯಅಮೆರಿಕದ ಸ್ಟಾನ್‌ಫಾರ್ಡ್‌ ವಿವಿ ಅಧ್ಯಯನ ವರದಿ ಅಭಿಪ್ರಾಯ
* ನಾಲ್ಕು ಮಾನದಂಡದಲ್ಲಿ ಬುಲೆಟಿನ್‌ ಲಭ್ಯತೆ 
 

ಬೆಂಗಳೂರು(ಜೂ.19): ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ರಾಜ್ಯದಲ್ಲಿನ ಕೋವಿಡ್‌ ಸೋಂಕಿನ ದೈನಂದಿನ ಮಾಹಿತಿ ನೀಡಲು ಪ್ರಕಟಿಸುವ ಮಾಧ್ಯಮ ಬುಲೆಟಿನ್‌ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ವಿಶ್ವದ ಅಗ್ರಮಾನ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಅಮೆರಿಕದ ಸ್ಟಾನ್‌ಫಾರ್ಡ್‌ ವಿವಿಯ ವಿದ್ಯಾರ್ಥಿಗಳ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

ದೇಶದ 29 ರಾಜ್ಯಗಳ ಕೋವಿಡ್‌ ಬುಲೆಟಿನ್‌ ಅನ್ನು ಲಭ್ಯತೆ, ಮಾಹಿತಿಯನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ಕ್ರೋಢಿಕರಣ, ವಿವಿಧ ವರ್ಗಗಳ ವಿಂಗಡಣೆ ಮತ್ತು ಖಾಸಗಿತನಕ್ಕೆ ಗೌರವ ಈ ನಾಲ್ಕು ಮಾನದಂಡಗಳ ಮೇಲೆ ವಿಶ್ಲೇಷಿಸಿರುವ ಈ ವಿವಿಯ ವಿದ್ಯಾರ್ಥಿಗಳು ರಾಜ್ಯದ ಬುಲೆಟಿನ್‌ಗೆ ನಂಬರ್‌ 1 ಸ್ಥಾನ ನೀಡಿದ್ದಾರೆ.

Latest Videos

2020ರ ಮೇ 19 ರಿಂದ 2020 ರ ಜೂನ್‌ 1 ರ ವರೆಗಿನ ಕೋವಿಡ್‌ ಬುಲೆಟಿನ್‌ ಅನ್ನು ವಿಶ್ಲೇಷಣೆಗೆ ಒಳಪಡಿಸಿ 0 ದಿಂದ 1 ರೊಳಗೆ ಅಂಕಗಳನ್ನು ಹಂಚಲಾಗಿದೆ. ಕರ್ನಾಟಕ 0.61 ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಕೇರಳ (0.52), ಒಡಿಸ್ಸಾ (0.51) , ಪಾಂಡಿಚೇರಿ (0.51), ತಮಿಳುನಾಡು (0.51) ರಾಜ್ಯಗಳಿವೆ. ಕೊನೆಯ ಸ್ಥಾನದಲ್ಲಿ ಶೂನ್ಯ ಅಂಕದೊಂದಿಗೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿವೆ.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜೂನ್18ರ ಅಂಕಿ-ಸಂಖ್ಯೆ

ನಾಲ್ಕು ಮಾನದಂಡದಲ್ಲಿ ಬುಲೆಟಿನ್‌ ಲಭ್ಯತೆಯಲ್ಲಿ 0.73, ಮಾಹಿತಿಯ ಸರಳ ಕ್ರೋಢಿಕರಣದಲ್ಲಿ 0.75 ಅಂಕ ಪಡೆದು ರಾಜ್ಯ ಅಗ್ರಸ್ಥಾನದಲ್ಲಿದೆ. ಖಾಸಗಿತನದ ರಕ್ಷಣೆಯಲ್ಲಿ ಪಂಜಾಬ್‌ ಮತ್ತು ಚಂಡೀಗಢ ಹೊರತು ಪಡಿಸಿ ಉಳಿದೆಲ್ಲ ರಾಜ್ಯಗಳು ಗರಿಷ್ಠ 0.5 ಅಂಕ ಪಡೆದಿದೆ. ಆದರೆ ಸೋಂಕಿತರ ಮಾಹಿತಿಯ ವಿಭಾಗೀಕರಣದಲ್ಲಿ ಜಾರ್ಖಂಡ್‌ (0.50) ಮೊದಲ ಸ್ಥಾನದಲ್ಲಿದ್ದು ರಾಜ್ಯ 0.39 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಸೋಂಕಿನ ಒಟ್ಟು ಮತ್ತು ದೈನಂದಿನ ಮಾಹಿತಿ, ಈ ಹಿಂದಿನ ಮಾಹಿತಿ, ಮಾಹಿತಿಯನ್ನು ಗ್ರಾಫಿಕ್‌ ಮೂಲಕ ಸರಳವಾಗಿ ಮಂಡಿಸುವುದು, ಬುಲೆಟಿನ್‌ ಸುಲಭವಾಗಿ ಸಿಗುವುದು, ಆಂಗ್ಲಭಾಷೆಯಲ್ಲಿ ಬುಲೆಟಿನ್‌, ಕೋವಿಡ್‌ನ ದೈನಂದಿನ ಮತ್ತು ಒಟ್ಟು ಪ್ರವೃತ್ತಿಯನ್ನು ತೋರಿಸುವ ಗ್ರಾಫಿಕ್‌, ವಯೋಮಾನ, ಲಿಂಗ, ಸಹ ಅಸ್ವಸ್ಥತೆ ಆಧಾರಿತ ವಿಂಗಡನೆ, ಜಿಲ್ಲಾವಾರು ಮಾಹಿತಿ ಮತ್ತು ಖಾಸಗಿತನ ರಕ್ಷಣೆಯ ಅಂಶಗಳನ್ನು ಪರಿಗಣಿಸಲಾಗಿದೆ. ಈ ಅಧ್ಯಯನವನ್ನು ವಿವಿಯ ವರುಣ್‌ ವಾಸುದೇವನ್‌, ವರ್ಷಾ ಸಂಕರ್‌, ಸಿದ್ಧಾರ್ಥ ಎ.ವಾಸುದೇವನ್‌, ಜೇಮ್ಸ್‌ ಜೋ ನಡೆಸಿದ್ದಾರೆ.

ರಾಜ್ಯದ ಕೋವಿಡ್‌ ವರದಿಯಲ್ಲಿ ದಿನನಿತ್ಯದ ಸೋಂಕಿತರು, ಜಿಲ್ಲಾವಾರು ಸೋಂಕಿತರ ಸಂಖ್ಯೆ, ಗುಣಮುಖರಾದವರು,, ಸಕ್ರಿಯ ಪ್ರಕರಣಗಳ ಮಾಹಿತಿ ಇರುತ್ತದೆ. ಮರಣ ಹೊಂದಿದವರ ಸಂಖ್ಯೆ, ವಯಸ್ಸು, ಸಹ ಅಸ್ವಸ್ಥತೆ, ಆಸ್ಪತ್ರೆಗೆ ದಾಖಲಾದ ದಿನ, ಮರಣ ಹೊಂದಿದ ದಿನದ ಮಾಹಿತಿ, ಪರೀಕ್ಷೆಯ ಪ್ರಮಾಣ, ಸೇರಿದಂತೆ ಈವರೆಗಿನ ಒಟ್ಟು ಪ್ರಕರಣ, ಒಟ್ಟು ಸಾವು, ಗುಣಮುಖರಾದವರು, ಒಟ್ಟು ಪರೀಕ್ಷೆಯ ಮಾಹಿತಿ ಇರುತ್ತದೆ.
 

click me!