* ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ ಕಾರ್ಯರೂಪಕ್ಕೆ ಬಂದರೆ ಇವೆಲ್ಲಾ ಸ್ಥಗಿತ
* ಕೊಪ್ಪಳದಲ್ಲಿ 6 ಕಿ.ಮೀ. ವ್ಯಾಪ್ತಿಯಲ್ಲಿ 2 ಟೋಲ್
* ಸುರತ್ಕಲ್ ಟೋಲ್ ಸ್ಥಗಿತ ಖಚಿತ
ಬೆಂಗಳೂರು(ಮಾ.25): ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ. ಅಂತರದೊಳಗಿರುವ ಹೆಚ್ಚುವರಿ ಟೋಲ್‌ಗಳನ್ನು(Toll) ಮುಂದಿನ ಮೂರು ತಿಂಗಳೊಳಗಾಗಿ ಮುಚ್ಚಲಾಗುವುದೆಂಬ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿಕೆ ಕಾರ್ಯರೂಪಕ್ಕೆ ಬಂದರೆ, ರಾಜ್ಯದಲ್ಲೂ ಹಲವು ಟೋಲ್‌ಗೇಟ್‌ಗಳು ಸ್ಥಗಿತ ಅಥವಾ ವಿಲೀನಗೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಹಾದುಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ(National Highway) 28 ಟೋಲ್‌ಗಳ ನಡುವಿನ ಅಂತರ 60 ಕಿ.ಮೀ.ಗಳಿಗಿಂತ ಕಡಿಮೆ ಇದೆ.
ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ 4, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ತಲಾ 3, ಬೆಂಗಳೂರು, ತುಮಕೂರು, ಗದಗ, ಉಡುಪಿ, ತುಮಕೂರು, ಹಾಸನ, ಮೈಸೂರು, ಕಲಬುರಗಿಗಳಲ್ಲಿ ತಲಾ 2, ಹಾವೇರಿ, ದಾವಣಗೆರೆ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ತಲಾ 1 ಟೋಲ್ಗಳು 60 ಕಿ.ಮೀ. ವ್ಯಾಪ್ತಿಯೊಳಗಿವೆ.
ಕರ್ನಾಟಕದಲ್ಲೂ 60 ಕಿಮೀಗೆ ಒಂದೇ ಟೋಲ್: ಸಚಿವ ಪಾಟೀಲ್
ರಾಜ್ಯ ರಾಜಧಾನಿ ಬೆಂಗಳೂರು(Bengaluru) ಮತ್ತು ಪಕ್ಕದ ತುಮಕೂರು ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನವಯುಗ-ನೆಲಮಂಗಲ-ಕ್ಯಾತ್ಸಂದ್ರ-ತರೂರು ಟೋಲ್‌ಗೇಟ್‌ಗಳಲ್ಲಿ ಎಲ್ಲ ಟೋಲ್‌ಗೇಟ್‌ಗಳ ನಡುವಿನ ಅಂತರ 60 ಕಿ.ಮೀ.ಗಳಿಗಿಂತ ಕಡಿಮೆಯೇ ಇದೆ. ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಮತ್ತು ಟಿ.ನರಸೀಪುರ ಟೋಲ್‌ಗೇಟ್‌ಗಳ ನಡುವಿನ ಅಂತರ ಕೇವಲ 41 ಕಿ.ಮೀ. ಗಡ್ಕರಿ ಮಾತಿನಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾದರೆ ಇವುಗಳಲ್ಲಿ ಕೆಲ ಟೋಲ್ಗಳು ವಿಲೀನ ಅಥವಾ ಮುಚ್ಚುವ ನಿರೀಕ್ಷೆಗಳಿವೆ.
ಉತ್ತರ ಕನ್ನಡದಲ್ಲಿ ಗೋವಾ(Goa) ಗಡಿಯಿಂದ ಭಟ್ಕಳ ಗಡಿ ತನಕದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 187.24 ಕಿ.ಮೀ. ಚತುಷ್ಪಥ ರಸ್ತೆ. ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ಈ ಹೆದ್ದಾರಿಗೆ ಟೋಲ್ ನಿರ್ಮಿಸಲಾಗಿದೆ. ಇಲ್ಲಿಂದ ಕೇವಲ 50 ಕಿ.ಮೀ. ಅಂತರದಲ್ಲಿ ಕುಮಟಾ ತಾಲೂಕಿನ ಹೊಳೆಗದ್ದೆಯಲ್ಲಿ ಮತ್ತೊಂದು ಟೋಲ್ ಇದ್ದು, ಈ ಟೋಲ್‌ನಿಂದ ಭಟ್ಕಳ ಹಾಗೂ ಕುಂದಾಪುರ ಗಡಿಯಾದ ಶಿರೂರುನಲ್ಲಿ 56 ಕಿ.ಮೀ. ಅಂತರದಲ್ಲಿ ಮಗದೊಂದು ಟೋಲ್ ನಿರ್ಮಿಸಲಾಗಿದೆ.
ಸುರತ್ಕಲ್ ಟೋಲ್ ಸ್ಥಗಿತ ಖಚಿತ:
ಇನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66(ಮುಂಬೈ-ಕನ್ಯಾಕುಮಾರಿ), 75(ಮಂಗಳೂರು-ಬೆಂಗಳೂರು)ರಲ್ಲಿ ಒಟ್ಟು 6 ಟೋಲ್‌ಗಳಿವೆ. ಎನ್‌ಎಚ್ 75ರಲ್ಲಿ ಬ್ರಹ್ಮರಕೂಟ್ಲು, 66ರಲ್ಲಿ ಬರುವ ತಲಪಾಡಿ, ಸುರತ್ಕಲ್ ಮುಕ್ಕ, ಹೆಜಮಾಡಿ ಟೋಲ್‌ಗೇಟ್‌ಗಳು(Toll Gate) 60 ಕಿ.ಮೀ. ಒಳಗೆಯೇ ಇರುವುದು ವಾಹನ ಸವಾರರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ತಲಪಾಡಿ ಹಾಗೂ ಸುರತ್ಕಲ್ ನಡುವೆ ಇರುವ ಅಂತರ 35 ಕಿ.ಮೀ, ಸುರತ್ಕಲ್ ಮತ್ತು ಹೆಜಮಾಡಿ ನಡುವೆ 18 ಕಿ.ಮೀ, ಇನ್ನು ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ನಡುವಿನ ಅಂತರ 32 ಕಿ.ಮೀ. ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗಳ ನಡುವಿನ ಅಂತರವೂ 55 ಕಿ.ಮೀ. ಇದೆ. ಇನ್ನು ಹಾಸನವನ್ನು ಬೆಂಗಳೂರಿನೊಂದಿಗೆ ಜೋಡಿಸುವ ಎನ್‌ಎಚ್75ರಲ್ಲಿನ ಶಾಂತಿಗ್ರಾಮ ಮತ್ತು ಹಿರಿಸಾವೆ ಟೋಲ್‌ಗಳ ನಡುವಿನ ಅಂತರ ಕೂಡ 45 ಕಿ.ಮೀ.
ಧಾರವಾಡ ಜಿಲ್ಲೆಯಲ್ಲಿ 60 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಟೋಲ್‌ಗಳಿವೆ. ರಾಷ್ಟ್ರೀಯ ಹೆದ್ದಾರಿ 4(ಥಾಣೆ-ಚೆನ್ನೈ)ಕ್ಕೆ ಸಂಬಂಧಿಸಿ ಹುಬ್ಬಳ್ಳಿ ಸಮೀಪದ ಗಬ್ಬೂರ ಕ್ರಾಸ್, ಧಾರವಾಡದ ನರೇಂದ್ರ ಕ್ರಾಸ್‌ಗಳಲ್ಲಿ ಟೋಲ್‌ಗಳಿವೆ. ಗೋವಾ ರಸ್ತೆಯ ಕೆಲಗೇರಿ, ಸವದತ್ತಿ ರಸ್ತೆಯ ಅಮ್ಮಿನಬಾವಿ ಬಳಿ ಟೋಲ್ ಸಂಗ್ರಹಿಸುತ್ತಿದ್ದು, ಇವೆಲ್ಲವೂ 60 ಕಿ.ಮೀ. ಅಂತರದಲ್ಲೇ ಇವೆ. ಕಲಬುರಗಿ ಜಿಲ್ಲೆಯ ಆಳಂದ ಸೇಡಂ ಮೂಲಕ ಸಾಗುವ ವಾಗದರಿ-ರಿಬ್ಬನಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲಬುರಗಿಯಿಂದ ತಲಾ 25 ಕಿ.ಮೀ. ದೂರದಲ್ಲಿ 2 ಟೋಲ್‌ಗಳಿವೆ.
100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!
ಇವುಗಳಲ್ಲಿ ಈಗಾಗಲೇ ಬ್ರಹ್ಮರಕೂಟ್ಲು, ಸುರತ್ಕಲ್ ಮುಕ್ಕದ ಟೋಲ್‌ಗೇಟ್‌ಗಳು ವಿವಾದಕ್ಕೊಳಗಾಗಿದ್ದು, ಇವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ನಿತಿನ್ ಗಡ್ಕರಿ ಅವರು ಸುರತ್ಕಲ್ ಟೋಲ್‌ಗೇಟ್ ರದ್ದುಪಡಿಸುವ ಭರವಸೆ ನೀಡಿದ್ದು, ಹೀಗಾಗಿ ಈ ಟೋಲ್‌ಗೇಟ್ ಬಂದ್ ಆಗುವುದು ಬಹುತೇಕ ಖಚಿತವಾಗಿದೆ.
ಕೊಪ್ಪಳದಲ್ಲಿ 6 ಕಿ.ಮೀ. ವ್ಯಾಪ್ತಿಯಲ್ಲಿ 2 ಟೋಲ್!
ಅಚ್ಚರಿ ವಿಷಯವೆಂದರೆ ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೇವಲ 6 ಕಿ.ಮೀ.ಅಂತರದಲ್ಲಿ 2 ಟೋಲ್‌ಗಳಿವೆ. ಕೊಪ್ಪಳ ತಾಲೂಕಿನ ಹಿಟ್ನಾಳ್ ಬಳಿ ಒಂದು ಟೋಲ್, ಅಲ್ಲಿಂದ ಕೇವಲ 6 ಕಿ.ಮೀ. ದೂರದ ಕೆರೆಹಳ್ಳಿಯಲ್ಲಿ ಮತ್ತೊಂದು ಟೋಲ್ ಇದೆ. ಈ ಕುರಿತು ಈಗಾಗಲೇ ಹಲವು ಬಾರಿ ಹೋರಾಟ, ಪ್ರತಿಭಟನೆ ನಡೆದಿವೆ.