ರೆಡ್‌ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ವಿಶೇಷ ತಹಸೀಲ್ದಾರ್‌

By Kannadaprabha NewsFirst Published Oct 7, 2020, 7:45 AM IST
Highlights

ಖಾತೆ ವರ್ಗಾವಣೆ ಮಾಡಲು 7 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೆರೆ| ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ವಿಶೇಷ ತಹಸೀಲ್ದಾರ್‌ ಸೇರಿದಂತೆ ಮೂವರು ಅಧಿಕಾರಿಗಳು| ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ| 

ಬೆಂಗಳೂರು(ಅ.07): ಜಮೀನು ಖಾತೆ ವರ್ಗಾವಣೆ ಮಾಡುವ ಸಂಬಂಧ ಏಳು ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಶೇಷ ತಹಸೀಲ್ದಾರ್‌ ಸೇರಿದಂತೆ ಮೂವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಸೀಲ್ದಾರ್‌ ಲಕ್ಷ್ಮೀ, ತಹಸೀಲ್ದಾರ್‌ ಕಚೇರಿಯ ಶಿರಸ್ತೇದಾರ್‌ ಪ್ರಸನ್ನಕುಮಾರ್‌, ಖಾಸಗಿ ವ್ಯಕ್ತಿ ಉಷಾ ಎಂಬುವವರು ಎಸಿಬಿ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ. ಬೇಗೂರು ನಿವಾಸಿಯೊಬ್ಬರು ಬೆಂಗಳೂರು ದಕಿಷಣ ತಾಲೂಕಿನಲ್ಲಿ 2 ಎಕರೆ ಜಮೀನನ್ನು ಖರೀದಿಸಿದ್ದರು. ಜಮೀನನ್ನು ಖರೀದಿಸಿದ ಬಳಿಕ ದಾಖಲಾತಿಗಳು ಸರಿ ಇಲ್ಲದ ಕಾರಣ ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಸೆ.14ರಂದು ದೂರುದಾರರಿಗೆ ಜಮೀನಿನ ಖಾತೆ ಮಾಡಿಕೊಡುವಂತೆ ತೀರ್ಪು ನೀಡಿತ್ತು.

ಸರ್ಕಾರಿ ಜಮೀನು ಖಾಸಗಿಗೆ ಪರಭಾರೆ: ನಿವೃತ್ತ ತಹಸೀಲ್ದಾರ್‌ಗೆ ಎಸಿಬಿ ಬಿಸಿ

ದೂರದಾರರು ಖರೀದಿಸಿದ ಜಮೀನಿನ ಮಾಲೀಕರು ಸಾವನ್ನಪ್ಪಿದ ಕಾರಣ ಅವರ ಮಕ್ಕಳ ಹೆಸರಿಗೆ ಖಾತೆ ವರ್ಗಾವಣೆಯಾಗಬೇಕಿತ್ತು. ಖಾತೆ ವರ್ಗಾವಣೆಗಾಗಿ ದೂರುದಾರರು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಆರೋಪಿ ಲಕ್ಷ್ಮೀ 5 ಲಕ್ಷ ರು. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೇ, ಶಿರಸ್ತೇದಾರ್‌ ಪ್ರಸನ್ನ ಕುಮಾರ್‌ 2 ಲಕ್ಷ ರು. ಲಂಚ ನೀಡುವಂತೆ ಕೇಳಿದ್ದರು. ಲಂಚ ಕೊಡಲು ಇಚ್ಛಿಸದ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು, ಲಕ್ಷ್ಮೀ ಪರವಾಗಿ ಖಾಸಗಿ ವ್ಯಕ್ತಿ ಉಷಾ 5 ಲಕ್ಷ ರು. ಮತ್ತು ಪ್ರಸನ್ನಕುಮಾರ್‌ 2 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ.
 

click me!