ಬಿಜೆಪಿ ಟಿಕೆಟ್ ವಂಚನೆ ಪ್ರಕಣದಲ್ಲಿ ಚೈತ್ರಾ ಕುಂದಾಪುರ ಬಂಧನವಾದ ಬೆನ್ನಲ್ಲೇ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ ಟ್ರಾವೆಲ್ ಹಿಸ್ಟರಿ ರೋಚಕವಾಗಿದೆ.
ಬೆಂಗಳೂರು (ಸೆ.19): ರಾಜ್ಯದಲ್ಲಿ ಉಡುಪಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್‌ನ ಎ3 ಆರೋಪಿ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಪೊಲೀಸ್ ಬಂಧನದ ಭೀತಿಯಿಂದಾಗಿ ಪರಾರಿ ಆಗಿದ್ದರು. ತಮ್ಮ ಕಾರಿನ ಚಾಲಕ ನಿಂಗರಾಜು ಅವರೊಂದಿಗೆ 50 ಲಕ್ಷರೂ. ಹಣವನ್ನು ತೆಗೆದುಕೊಂಡು ಕಾರಿನಲ್ಲಿ ಹೊರಟ ಸ್ವಾಮೀಜಿ ಒಡಿಶಾದ ಕಟಕ್‌ಗೆ ಹೋಗುವವರೆಗೂ ಪೊಲೀಸರ ಕಣ್ಣಿಗೆ ಬೀಳದಂತೆ ಟ್ರಾವೆಲ್ ಮಾಡಿದ್ದಾರೆ. ಇಲ್ಲಿದೆ ನೋಡಿ ಅವರ ರೋಚಕ ಟ್ರಾವೆಲ್ ಹಿಸ್ಟರಿ...
ಉದ್ಯಮಿ ಗೋವಿಂದಬಾಬು ಪೂಜಾರಿ ತಮಗೆ 5 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು 10 ಜನರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಸಿನಿಮೀಯ ಶೈಲಿಯಲ್ಲಿ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿತ್ತು. ನಂತರ ಗ್ಯಾಂಗ್‌ನ 6 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆದರೆ, ಉದ್ಯಮಿ ದೂರು ದಾಖಲಿಸುತ್ತಿದ್ದಂತೆಯೇ ಎ3 ಆರೋಪಿ ಆಗಿರುವ ಹಿರೇಹಡಗಲಿಯ ಅಭಿನವ ಹಾಲಶ್ರೀ ಶ್ವಾಮೀಜಿ ಮಠದಿಂದಲೇ ಪರಾರಿ ಆಗಿದ್ದರು. ಈವರೆಗೆ 11 ದಿನಗಳ ಕಾಲ ತಲೆಮರೆಸಿಕೊಂಡಸಿದ್ದ ಸ್ವಾಮೀಜಿ ಒಡಿಶಾದ ಕಟಕ್‌ನಿಂದ ಕಾಶಿಗೆ ಹೋಗುವಾಗ ಸಿಕ್ಕಿಬಿದ್ದಿದ್ದಾರೆ.
ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ
ಗೋವಿಂದಬಾಬು ಪೂಜಾರಿಯಿಂದ ದೂರು ದಾಖಲಾಗುತ್ತಿದ್ದಂತೆ ಮಾಹಿತಿ ತಿಳಿದುಕೊಂಡ ಅಭಿನವ ಹಾಲಶ್ರೀ ಸ್ವಾಮೀಜಿ ತಮ್ಮ ಕಾರಿನ ಚಾಲಕ ನಿಂಗರಾಜು ಜೊತೆಗೆ ಹಿರೇಹಡಗಲಿ ಮಠದಿಂದ ಪರಾರಿ ಆಗಿದ್ದರು. ಹಿರೇಹಡಗಲಿಯ ಹಾಲಶ್ರೀ ಮಠದಿಂದ ರಾತ್ರಿ 11 ಗಂಟೆ ವೇಳೆಗೆ ಮೈಸೂರಿಗೆ ತೆರಳಿದ್ದರು. ನಂತರ, ಸೆ.12ರಂದು ಮೈಸೂರಿನ ಹೆಚ್‌ಎಎಲ್ ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸವಾಗಿದ್ದರು. ಇದಾದ ನಂತರ ಸೆ.3ರಂದು ಬೆಳಗ್ಗೆ ಮೈಸೂರಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಪೂರ್ವ ಮೊಬೈಲ್ ಸ್ಟೋರ್‌ಗೆ ತೆರಳಿದ್ದ ಸ್ವಾಮೀಜಿ 4 ಮೊಬೈಲ್ ಹಾಗೂ 4 ಸಿಮ್ ಖರೀದಿ ಮಾಡುತ್ತಾರೆ.
ಇನ್ನು ಅಪೂರ್ವ ಮೊಬೈಲ್ ಸ್ಟೋರ್‌ನಲ್ಲಿ ಖರೀದಿಸಿದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳ ಪೈಕಿ 2 ಹೊಸ ಮೊಬೈಲ್ ಹಾಗೂ 2 ಹೊಸ ಸಿಮ್ ಕಾರ್ಡ್‌ಗಳನ್ನು ತೆಗೆದುಕೊಂಡು ತಾವು ಬಳಕೆ ಮಾಡಲು ನಿರ್ಧಸುತ್ತಾರೆ. ಅದೇ ದಿನ ಮಧ್ಯಾಹ್ನ ತಮ್ಮ ಕಾರಿನ ಚಾಲಕ ನಿಂಗರಾಜು ಅವರಿಂದ 50 ಲಕ್ಷ ರೂ.ಗಳನ್ನು ತಮ್ಮ ಖರ್ಚಿಗೆ ತರಿಸಿಕೊಳ್ಳುತ್ತಾರೆ. ಅಂದರೆ, ಅಭಿನವ ಹಾಲಶ್ರೀ ಸ್ವಾಮೀಜಿಯ ಆಪ್ತನಾಗಿದ್ದ ಪ್ರಣವ್ ಎನ್ನುವವರಿಗೆ 50 ಲಕ್ಷ ರೂ. ಹಣವನ್ನು ಇಟ್ಟುಕೊಳ್ಳುವಂತೆ ಕೊಟ್ಟಿದ್ದರು. ಈ ಹಣವನ್ನು ಸ್ವಾಮೀಜಿಯ ಚಾಲಕ ನಿಂಗರಾಜು ತೆಗೆದುಕೊಂಡು ಬಂದಿದ್ದರು.
ಹಣ ವಾಪಸ್ ಕೇಳಿದ ಗೋವಿಂದ ಬಾಬು ವಿರುದ್ದ ಚೈತ್ರಾ ಹೈಡ್ರಾಮ, ಐಟಿ ಇಡಿಗೆ ದೂರು!
ಸಿಸಿಬಿ ಪೊಲೀಸರು ಈ ವೇಳೆಗಾಗಲೇ ಸ್ವಾಮೀಜಿಯನ್ನು ಬಂಧಿಸಲು ರಾಜ್ಯಾದ್ಯಂತ ತೀವ್ರ ಶೋಧ ಕಾರ್ಯವನ್ನು ಮಾಡುತ್ತಾರೆ. ಜೊತೆಗೆ, ಬಂಧನ ಮಾಡದಂತೆ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಾರೆ. ಇದ್ಯಾವುದೂ ಫಲಿಸದ ಹಿನ್ನೆಲೆಯಲ್ಲಿ ಸ್ವಾಮೀಜಿ ತಮ್ಮ ಕಾರಿನ ನಂಬರ್ ಪ್ಲೇಟ್ ಅನ್ನು ತೆಗೆಸಿ ಪ್ರಣವ್ ಮನೆಯಲ್ಲಿ ಕಾರನ್ನು ನಿಲ್ಲಿಸಿ, ಅಲ್ಲಿಂದ ಬಸ್‌ನ ಮೂಲಕ ಸ್ವಾಮೀಜಿ ಪರಾರಿ ಆಗುತ್ತಾರೆ. ಮೈಸೂರುನಿಂದ ಹೈದರಾಬಾದ್ (ಸಿಖಂದರಾಬಾದ್) ಗೆ ತೆರಳಿದ್ದರು. ಆದರೆ, ರಾಜ್ಯದಲ್ಲಿ ಸ್ವಾಮೀಜಿಯೊಂದಿಗೆ ಸಂಪರ್ಕ ಹೊಂದಿದ್ದ ನಿಂಗರಾಜು ಬಂಧನವಾಗ್ತಿದ್ದಂತೆ ಅಭಿನವ ಸ್ವಾಮೀಜಿ ಶ್ರೀಶೈಲ ಪರಾರಿಯಾಗಿದ್ದರು.
ಶ್ರೀಶೈಲದಲ್ಲಿರುವ ಮಾಹಿತಿ ಪೊಲೀಸರಿಗೆ ತಿಳಿದಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅಭಿನವ ಹಾಲಶ್ರೀ ಅಲ್ಲಿಂದ ಪೂರಿ- ಗಂಜಾಂ- ಕಟಕ್ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಒಡಿಶಾ ರಾಜ್ಯದ ಕಟಕ್‌ನಲ್ಲಿ ಸ್ಥಳೀಯ ಪೊಲೀಸರ ನೆರವಿನ ಮೇರೆಗೆ ಸ್ವಾಮೀಜಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆಯುತ್ತಾರೆ. ಅಲ್ಲಿಗೆ ತೆರಳಿದ ಬೆಂಗಳೂರು ಸಿಸಿಬಿ ಪೊಲೀಸರು, ಕಟಕ್‌ನಿಂದ ಕಾಶಿಗೆ ಪ್ರಯಾಣ ಮಾಡುವ ವೇಳೆ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಪ್ರಯಾಣ ಮಾಡುತ್ತಿದ್ದ ಸ್ವಾಮೀಜಿಯನ್ನು ಇಂದು ಮಧ್ಯಾಹ್ನದ ವಿಮಾನದಲ್ಲಿ ಬೆಂಗಳೂರಿಗೆ ಕರೆತಲಿದ್ದಾರೆ.