ಭೀಕರ ರಸ್ತೆ ಅಪಘಾತ ನೇಪಾಳ ಮೂಲದ ಒಂದೇ ಕುಟುಂಬದ ಐವರು ಸಾವಿಗೀಡಾದ ದುರ್ಘಟನೆ ಕಲಬುರಗಿಯಲ್ಲಿ ನಡೆದಿದೆ. ದಂಪತಿಗಳು ಅವರ ಇಬ್ಬರು ಮಕ್ಕಳು ಸೇರಿ ಇವರು ಸ್ಥಳದಲ್ಲೇ ಸಾವು ಹತ್ತು ದಿನಗಳ ಹಿಂದಷ್ಟೇ ಹಸೆಮಣೆ ಏರಿದ ಮಧುಮಗಳೂ ಬಲಿ. ಫಾಸ್ಟ್ ಫುಡ್ ತಯಾರಿಸಿ ಜೀವನ ನಡೆಸುತ್ತಿದ್ದವರು ಕುಟುಂಬ.
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ ನ.2:- ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳೂ ಸೇತಿ ಐವರು ಧಾರಣವಾಗಿ ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ಮಾದಾಬಾಳ್ ಲಕ್ಷ್ಮಿ ಕ್ರಾಸ್ ಬಳಿ ಸಂಭವಿಸಿದೆ.
ಮಹಾರಾಷ್ಟ್ರದ ದುದನಿಯಿಂದ ಅಫಜಲಪೂರ ಕಡೆಗೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿ ಎರಡು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರು ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಬೆಂಗಳೂರು: ಅತೀ ವೇಗದ ಬೆಂಜ್ ಕಾರು ಬೈಕ್‌ಗೆ ಡಿಕ್ಕಿ, ಸವಾರ ಸಾವು
ಮೃತರೆಲ್ಲರೂ ನೇಪಾಳ ಮೂಲದವರು
ಈ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಮೂಲತಹ ನೇಪಾಳದವರು ಎಂದು ತಿಳಿದು ಬಂದಿದೆ. 25 ವರ್ಷದ ರತನ್ ಮತ್ತು 21 ವರ್ಷದ ಅಸ್ಮಿತ ದಂಪತಿಗಳು ಹಾಗೂ ಇವರ ಇಬ್ಬರು ಮಕ್ಕಳಾದ 5 ವರ್ಷದ ಮಿಲನ್ ಮತ್ತು 2 ವರ್ಷದ ಧರಕನ್ ಹಾಗೂ ರತನ್ ನ ತಮ್ಮನ ಹೆಂಡತಿ 18 ವರ್ಷದ ಸ್ವಸ್ತಿಕಾ ಮೃತ ದುರ್ದೈವಿಗಳು.
ದುದನಿಗೆ ಹೋಗಿ ಬರುವಾಗ ಅಪಘಾತ
ನೇಪಾಳ ದೇಶದ ಸುರಕೇತ ಮೂಲದವರಾದ ಈ ಕುಟುಂಬದವರು, ಕಳೆದ ನಾಲ್ಕು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ಫಾಸ್ಟ್ ಫುಡ್ ತಯಾರಿಕಾ ವ್ಯಾಪಾರ ನಡೆಸುತ್ತಿದ್ದರು. ಪಕ್ಕದ ಮಹಾರಾಷ್ಟ್ರದ ಧುದನಿಯಲ್ಲಿ ಇವರ ಸಂಬಂಧಿಕರ ಇನ್ನೊಂದು ಕುಟುಂಬ ನೆಲೆಸಿದ್ದು, ಅನಾರೋಗ್ಯಕೀಡಾಗಿರುವ ಸಂಬಂಧಿಕರೊಬ್ಬರ ಭೇಟಿಗಾಗಿ ದಂಪತಿಗಳು ಮಕ್ಕಳು ಸೇರಿದಂತೆ ಐವರು ಒಂದೇ ಬೈಕ್ ಮೇಲೆ ತೆರಳಿದ್ದರು. ಭೇಟಿ ಮುಗಿಸಿ ಮರಳಿ ಅಫಜಲಪುರಕ್ಕೆ ಬರುತ್ತಿರುವಾಗ, ಈ ಅಪಘಾತ ಸಂಭವಿಸಿದೆ.
ಕಂದಮ್ಮಗಳ ಸ್ಥಿತಿ ಕಂಡು ಮರುಗಿದ ಜನ
ಮೃತಪಟ್ಟವರು ನಮ್ಮ ದೇಶದವರಲ್ಲದಿದ್ದರೇನು ? ಅಪಘಾತದ ತೀವ್ರತೆಯಿಂದ ಚಿದ್ರ ಚಿದ್ರವಾಗಿರುವ ದೇಹಗಳನ್ನು ಕಂಡು ದಾರಿ ಹೋಕರೂ ಸಹ ಮಮ್ಮಲ ಮರಗಿದರು. ಅದರಲ್ಲೂ ವಿಶೇಷವಾಗಿ ಎರಡು ಪುಟ್ಟ ಕಂದಮ್ಮಗಳ ತಲೆ ಸೀಳಿ ಮೆದುಳು ಹೊರ ಬಂದಿದ್ದು, ನೋಡಲಾಗದೆ ಕೆಲ ದಾರಿ ಹೋಕರು ಕಣ್ಣಿರು ಸುರಿಸಿದ ಘಟನೆಗೂ ಈ ಅಪಘಾತ ಸಾಕ್ಷಿಯಾಯಿತು.
ಮೃತ ಪಟ್ಟವರಲ್ಲಿ ಒಬ್ಬಳು ಮದುಮಗಳು
ದಂಪತಿ ಹಾಗೂ ಅವರ ಇಬ್ಬರು ಮಕ್ಕಳ ಧಾರಣ ಸಾವು ಒಂದೆಡೆಯಾದರೆ, ಇದೇ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಸ್ವಸ್ತಿಕಾ, ಕೇವಲ ಹತ್ತೇ ಹತ್ತು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಧುಮಗಳು. ಅಪಘಾತದಲ್ಲಿ ಮೃತಪಟ್ಟ ಬೈಕ್ ಚಾಲಕ ರತನ್ ನ ತಮ್ಮನ ಹೆಂಡತಿಯೇ ಈ ಸ್ವಸ್ತಿಕಾ. ಕೇವಲ ಹತ್ತೇ ಹತ್ತು ದಿನಗಳ ಹಿಂದೆ ರತನ್ ನ ತಮ್ಮ ಕೃಷ್ಣ ಎನ್ನುವಾತನೊಂದಿಗೆ ವಿವಾಹ ನೆರವೇರಿತ್ತು.
ಅಫಜಲಪುರ ಪೊಲೀಸರ ಭೇಟಿ ಶವ ಶಿಫ್ಟ್
ಅಫಜಲಪುರ ದುಧನಿ ಮಾರ್ಗ ಮದ್ಯದಲ್ಲಿ ಅಫಜಲಪುರದಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ಮಾದಬಾಳ ಲಕ್ಷ್ಮಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆ ಎಷ್ಟಿದೆ ಎಂದರೆ ರಸ್ತೆ ತುಂಬಾ ಶವಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಐದೂ ಜನರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಫಜಲಪುರ ಪೊಲೀಸರು, ಶವಗಳನ್ನ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಟುಂಬದವರಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ನೇಪಾಳ ಮೂಲದ ದಂಪತಿಗಳು ಇಬ್ಬರು ಪುತ್ರರು ಸೇರಿ ಐವರು ಸಾವಿಗೀಡಾದ ಭೀಕರ ಅಪಘಾತದಿಂದಾಗಿ ಅಫಜಲಪುರದಲ್ಲಿ ವಾಸವಾಗಿರುವ ನೇಪಾಳ ಮೂಲದ ಈ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಫಜಲಪುರ ಮಾತ್ರವಲ್ಲದೇ ಕಲಬುರಗಿ, ದುದನಿ ಸೇರಿ ಬೇರೆ ಬೇರೆ ಕಡೆ ವಾಸ ಇರುವ ಅವರ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿ ಬಂದರು.
ಲಾರಿ ಚಾಲಕ ಎಸ್ಕೇಪ್
ಅಪಘಾತದ ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲಿಗೆ ಬಿಟ್ಟು ಪರಾರಿಯಾಗಿದ್ದಾನೆ. AP 21, TA 5140 ನಂಬರ್ ಪ್ಲೇಟ್ ಹೊಂದಿರುವ ಈ ಲಾರಿ ಆಂದ್ರಪ್ರದೇಶಕ್ಕೆ ಸೇರಿದ್ದು ಎನ್ನಲಾಗಿದೆ.
ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಎದುರೇ ಭೀಕರ ಅಪಘಾತ, 13 ಜನರ ದುರ್ಮರಣ
ಬೈಕ್ ಚಾಲಕನ ಬೇಜವಾಬ್ದಾರಿ
ಈ ಭೀಕರ ಅಪಘಾತದಲ್ಲಿ ಬೈಕ್ ಚಾಲಕನ ಬೇಜವಾಬ್ದಾರಿತನವು ಎದ್ದು ಕಾಣುತ್ತಿದೆ. ಇಬ್ಬರು ಮಕ್ಕಳು ಸೇರಿದಂತೆ ಐವರು ಒಂದೇ ಬೈಕ್ ನಲ್ಲಿ ಪ್ರಯಾಣಿಸಿದ್ದೆ ಬೈಕ್ ನಿಯಂತ್ರಣ ತಪ್ಪಲು ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಅಫಜಲಪುರ ಪೊಲೀಸರು, ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.