ಆಡಳಿತಗಾರನಿಗೆ ತಲೆ ತಣ್ಣಗಿರಬೇಕು. ಹೃದಯ ವಿಶಾಲವಾಗಿರಬೇಕು. ಬದಲಾವಣೆಯನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ತುಮಕೂರು (ಮಾ.05): ಆಡಳಿತಗಾರನಿಗೆ ತಲೆ ತಣ್ಣಗಿರಬೇಕು. ಹೃದಯ ವಿಶಾಲವಾಗಿರಬೇಕು. ಬದಲಾವಣೆಯನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ತುಮಕೂರಿನ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಭಾನುವಾರ ಸಪಪೂ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬದಲಾವಣೆಯನ್ನು ಅರ್ಥ ಮಾಡಿಕೊಂಡು ಆಡಳಿತ ಮಾಡಬೇಕು. ಆಡಳಿತಗಾರನಿಗೆ ಮಸ್ತಕ ತಣ್ಣಗಿದ್ದು, ಹೃದಯ ವಿಶಾಲವಾಗಿರಬೇಕು. ಬದುಕನ್ನು ಕಟ್ಟಿಕೊಡುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ತುಮಕೂರು ಜಿಲ್ಲೆಯ 24 ಲಕ್ಷ ಜನರಿಗೆ ಉಭಯ ಸರ್ಕಾರಗಳ ವಿವಿಧ ಯೋಜನೆಗಳ ಸವಲತ್ತುಗಳನ್ನು ಒದಗಿಸಲಾಗಿದೆ. ಯೋಜನೆಗಳನ್ನು ಘೋಷಿಸುವುದಲ್ಲದೆ, ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಮ್ಮ ಸರ್ಕಾರ ಮುಂದಿದೆ ಎಂದ ಮುಖ್ಯಮಂತ್ರಿಗಳು ಕನ್ನಡ ನಾಡಿನಲ್ಲಿ ಬಡತನವನ್ನು ಸಂಪೂರ್ಣವಾಗಿ ಅಳಿಸಿ, ಸಮೃದ್ಧಿ ಕರ್ನಾಟಕ ಸ್ಥಾಪಿಸುವ ಸಂಕಲ್ಪ ಕೈಗೊಳ್ಳುತ್ತಿರುವುದಾಗಿ ಘೋಷಿಸಿದರು.
ಬಿಜೆಪಿ ಗೆಲುವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿಸಲಿ: ಕಟೀಲ್ ಸವಾಲು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗರೀಬ್ ಕಲ್ಯಾಣ್, ಆತ್ಮ ನಿರ್ಭರ್ ಭಾರತ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಯೋಜನೆಗಳ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ತಂತ್ರಜ್ಞಾನದ ಮೂಲಕ ಜಮೆಯಾಗುತ್ತಿದೆ. ಸುಮಾರು 53.43 ಲಕ್ಷ ಕರ್ನಾಟಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ 16 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೊಟ್ಟಿದ್ದು, 4487 ಕೋಟಿ ರಾಜ್ಯ ಸರ್ಕಾರ ಕೊಟ್ಟಿದೆ ಎಂದರು.
17 ಲಕ್ಷ ಮನೆ ಮಂಜೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕಕ್ಕೆ 17 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಜನರ ಮನೆಯ ಬಾಗಿಲಿಗೆ ಕುಡಿಯುವ ನೀರನ್ನು ನೀಡಿದ್ದೇವೆ. ದೀನ್‌ದಯಾಳ್ ಯೋಜನೆಯ ಬೆಳಕು ಕಾರ್ಯಕ್ರಮದಡಿ ಕಳೆದ ಒಂದು ವರ್ಷದಲ್ಲಿ 2.38 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
40 ಲಕ್ಷ ಮನೆಗೆ ಕುಡಿಯುವ ನೀರು: ಕಳೆದ ಮೂರು ವರ್ಷಗಳಲ್ಲಿ ಜೆ.ಜೆ.ಎಂ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 72 ವರ್ಷಗಳಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಯೋಜನೆಯಿದ್ದು, ನಮ್ಮ ಡಬಲ್ ಎಂಜಿನ್ ಸರ್ಕಾರ ಮೂರೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿರುವುದು ದಾಖಲೆಯೇ ಸರಿ ಎಂದರು.
ರೈತ ವಿದ್ಯಾನಿಧಿ: ರೈತರ ಮಕ್ಕಳು ಸಹ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ರೈತ ವಿದ್ಯಾ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ 12 ಲಕ್ಷ ರೈತರ ಮಕ್ಕಳು ಹಾಗೂ ತುಮಕೂರು ಜಿಲ್ಲೆಯ 18 ಸಾವಿರ ರೈತ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು. ನಾನು ಮೂಡ ಬಿದರೆಗೆ ಹೋಗಿದ್ದೆ, 18 ವರ್ಷದ ಹೆಣ್ಣು ಮಗಳು ಒಂದು ಪತ್ರವನ್ನು ಕೊಟ್ಟರು. ವಿದ್ಯಾನಿಧಿ ಸಿಕ್ಕಿದೆ, ಕೇಳದೆ ಇಷ್ಟೆಲ್ಲಾ ಕೊಟ್ಟಿದ್ದೀರಾ ಸಂತೋಷ ಆಯ್ತು. ವಿದ್ಯಾನಿಧಿ ನನಗೆ ಎರಡು ಬಾರಿ ಸಿಕ್ಕಿದೆ. ಆದರೆ ಇನ್ನೊಬ್ಬರಿಗೂ ಈ ಯೋಜನೆ ಸಿಗಬೇಕು. ತಮಗೆ ಒಂದು ಸಾಕು ಎಂದು ಪತ್ರ ಬರೆದಿದ್ದರು ಎಂದು ಸ್ಮರಿಸಿದ ಬೊಮ್ಮಾಯಿ, ರೈತರ ಎಲ್ಲಾ ಮಕ್ಕಳಿಗೂ ವಿದ್ಯಾ ನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಡಯಾಲಿಸಿಸ್: ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸೀಸ್ ಸೈಕಲ್ ಅನ್ನು ಒಂದು ಲಕ್ಷಕ್ಕೆ ಈ ವರ್ಷ ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ. 12 ಹೊಸ ಕೇಂದ್ರಗಳ ಮೂಲಕ ಕಿಮೋ ಥೆರಪಿ ಸೈಕಲ್ ಅನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ, ಅಂತೆಯೇ ಕಾಕ್ಲಿಯರ್ ಇನ್ ಪ್ಲಾಂಟ್, ಪೌಷ್ಠಿಕ ಆಹಾರ ಕೊರತೆ ನೀಗಿಸುವ ಕಾರ್ಯಕ್ರಮ, 60 ವರ್ಷ ಮೇಲ್ಪಟ್ಟವರಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮ, ನಮ್ಮ ಕ್ಲಿನಿಕ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ಜಮೀನು ಇಲ್ಲದ ಕಡು ಬಡ ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ, ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಯೋಜನೆ, ಹಳ್ಳಿಗಾಡಿನ ಮಕ್ಕಳಿಗಾಗಿ 2 ಸಾವಿರ ಶಾಲಾ ಬಸ್‌ಗಳ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು 400 ಕೋಟಿ ರು: ಆಸಿಡ್ ದಾಳಿಯಾದ ಸಂತ್ರಸ್ತೆಗೆ 10 ಸಾವಿರ ಸಹಾಯಧನ ನೀಡುತ್ತಿದ್ದೇವೆ. ಇದು ಸರ್ಕಾರದ ಮಾನವೀಯತೆ ಮುಖ. ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ನೀಡಲು 400 ಕೋಟಿ ಅನುದಾನ ನೀಡಿದ್ದೇವೆ. ಎಸ್‌ಸಿ, ಎಸ್‌ಟಿಯವರಿಗೆ ರಿಸರ್ವೇಷನ್ ಹೆಚ್ಚಿಸಿದ್ದೇವೆ. ರಿಸರ್ವೇಷನ್ ಕೊಡಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದವರಿಗೆ ಮೀಸಲಾತಿ ಹೆಚ್ಚಿಸಿ, ಉತ್ತರ ಕೊಟ್ಟಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಸರ್ಕಾರವಲ್ಲ, ಜನ ಶ್ರೀಮಂತವಾಗಬೇಕು: ಯುವಕರಿಗೆ ಸ್ವಾವಲಂಬನೆ ಉದ್ಯೋಗ ಮಾಡಲು ಯೋಜನೆ ತಂದಿದ್ದೇವೆ. ದುಡಿಯುವವರನ್ನು ಗುರುತಿಸಿ ಸಹಾಯ ಮಾಡಲಾಗುತ್ತಿದೆ. ಕೇವಲ ಎಲ್ಲಾ ಮಹಿಳೆಯರಿಗೂ 2 ಸಾವಿರ ಕೊಡುವಂತಹದಲ್ಲ, ಇಂದು ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ ಅನ್ನುವಂತಾಗಿದೆ. ದುಡಿಮೆಗೆ ಸಹಾಯ ಮಾಡುವುದು ನಮ್ಮ ಕೆಲಸ. ಸರ್ವ ವ್ಯಾಪಿ ಸರ್ವಸ್ಪರ್ಶಿ ಆಡಳಿತ ನೀಡುತ್ತಿದ್ದೇವೆ. ಇವತ್ತು ಸರ್ಕಾರ ಶ್ರೀಮಂತವಾಗಿರಬಾರದು, ಜನರು ಶ್ರೀಮಂತವಾಗಿರಬೇಕು ಎಂಬ ಉದ್ದೇಶ ಇಟ್ಟುಕೊಂಡು ಆಡಳಿತ ಮಾಡುತ್ತಿದ್ದೇನೆ. 970 ಕೋಟಿ ಅನುದಾನ ತುಮಕೂರಿಗೆ ಸಿಕ್ಕಿದೆ. ಎಂದಾದರೂ ಇಷ್ಟೊಂದು ಅನುದಾನ ಯೋಜನೆ ಸಿಕ್ಕಿತ್ತಾ ಎಂದು ಪ್ರಶ್ನಿಸಿದ ಬೊಮ್ಮಾಯಿ, ಪ್ರಧಾನಿ ನರೇಂದ್ರಮೋದಿ ದೂರದೃಷ್ಟಿಹೊಂದಿರುವ ನಾಯಕ ಎಂದು ಪ್ರಶಂಶಿಸಿದರು.
ತುಮಕೂರು ಆಧುನಿಕವಾಗಿ ಬೆಳೆಯುತ್ತಿದೆ: ರಾಜ್ಯದಲ್ಲೇ ರಾಜಧಾನಿ ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ತುಮಕೂರು. ಸ್ಮಾರ್ಟ್‌ಸಿಟಿಗಳನ್ನು ಮಾಡಿದ್ದರ ಪರಿಣಾಮ ತುಮಕೂರು ಆಧುನಿಕವಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ ಬೆಂಗಳೂರು ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ತುಮಕೂರು. ಇದು ಬೆಂಗಳೂರಿನ ಸ್ಯಾಟಲೈಟ್ ನಗರವಾಗಿದೆ. ತುಮಕೂರು ನಗರ ಅತ್ಯಂತ ಪ್ರಶಸ್ತ ವಲಯದಲ್ಲಿದೆ ಎಂದು ಬೊಮ್ಮಾಯಿ ಹೇಳಿದರು.
ಹಣ ನೀಡಲು ತಡ ಮಾಡಲಿಲ್ಲ: ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಭೆಗೆ ತಡವಾಗಿ ಬಂದಿದ್ದಕ್ಕಾಗಿ ಕ್ಷಮೆ ಕೇಳಿ, ಈ ಸಭೆಗೆ ತಡವಾಗಿ ಬಂದಿದ್ದೇನೆ. ನಿಮ್ಮ ಕೆಲಸಗಳಿಗೆ ಹಣ ನೀಡಲು ತಡ ಮಾಡಲಿಲ್ಲ. ಬೇರೆ ಸರ್ಕಾರಗಳು ಹಣ ನೀಡಲು ತಡ ಮಾಡಿ, ಸಮಾರಂಭಗಳಿಗೆ ಮುಂದಿರುತ್ತಾರೆ. ನಾವು ಆ ರೀತಿಯಲ್ಲ. ಇಷ್ಟುದೊಡ್ಡ ಸಂಖ್ಯೆಯಲ್ಲಿ ಬಂದು, ನಮ್ಮ ಬದುಕಿನಲ್ಲಿ ಬದಲಾವಣೆಯಾಗಿದೆ ಎಂದು ಕೃತಜ್ಞತೆ ತೋರಿದ್ದೀರಿ ಎಂದರು.
ಸಮೃದ್ಧ ಕರ್ನಾಟಕ ನಿರ್ಮಾಣ ಸಂಕಲ್ಪ: ಫಲಾನುಭವಿಗಳ ಸಮಾವೇಶದಲ್ಲಿ ಸಮೃದ್ಧ ಕರ್ನಾಟಕ ನಿರ್ಮಾಣ ಸಂಕಲ್ಪ ಮಾಡಿದ ಬೊಮ್ಮಾಯಿ, ಅಧಿಕಾರಕ್ಕಾಗಿ, ದುರ್ಲಾಭಕ್ಕಾಗಿ, ಜನರ ಸಮಸ್ಯೆಗೊತ್ತಿಲ್ಲದವರು, ಸುಳ್ಳನ್ನು ಸತ್ಯಕ್ಕಿಂತ ಮಿಗಿಲಾಗಿ ಹೇಳುತ್ತಿರುವ ರಾಜಕಾರಣ ಒಂದು ಕಡೆಯಿದ್ದು, ಹಲವು ಯೋಜನೆಗಳು ಘೋಷಣೆಯಾಗುತ್ತಿದ್ದರೂ, ಅವು ಅನುಷ್ಟಾನವಾಗುತ್ತಿಲ್ಲ ಎಂದರು.
ಜಿಲ್ಲೆಗೆ ಒಂದಲ್ಲ ಒಂದು ಫಲ ಸಿಕ್ಕಿದೆ: ತುಮಕೂರಿನಲ್ಲಿ 24 ಲಕ್ಷ ಜನರಿಗೆ ಒಂದಲ್ಲ ಒಂದು ಯೋಜನೆಯ ಫಲ ಸಿಕ್ಕಿದೆ. ಮೊದಲು ಒಂದು ಸಣ್ಣ ಸರ್ಟಿಫೀಕೆಚ್ ಪಡೆಯಲು ಕಚೇರಿ ಅಲೆಯಬೇಕಿತ್ತು. ಸಬ ಕಾ ಸಾಥ್, ಸಬ ಕಾ ವಿಕಾಸ್ ಯೋಜನೆಯನ್ನು ಮೋದಿಯವರು ಮಾಡಿದರು. ನೇರವಾಗಿ ನಗದು ಜನರ ಅಕೌಂಟಿಗೆ ತಲುಪುವಂತೆ ಮಾಡಿದರು. ಹಿಂದೆಂದು ಕಂಡು ಹರಿಯದ ರೀತಿ 970 ಕೋಟಿ ರು. ಗಳ ಸ್ಮಾರ್ಟ್ ಸಿಟಿ ಯೋಜನೆಯನ್ನು ಘೋಷಿಸಿ ಅನುಷ್ಠಾನಗೊಳಿಸಲಾಗಿದ್ದು, ಎತ್ತಿನಹೊಳೆ ಯೋಜನೆಯೂ ಶೀಘ್ರವೆ ಪೂರ್ಣಗೊಳ್ಳಲಿದೆ ಎಂದರು.
ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ: ರಮೇಶ್ ಜಾರಕಿಹೊಳಿ
ಚೆಕ್ ವಿತರಣೆ: ಇದೇ ಸಂದರ್ಭ ಕೃಷಿ ಇಲಾಖೆಯ ರೈತ ವಿದ್ಯಾ ನಿಧಿ ಯೋಜನೆ, ಪಿ.ಎಂ. ಕಿಸಾನ್ ಯೋಜನೆ, ರೈತ ಶಕ್ತಿ ಯೋಜನೆ, ಅಮೃತ್ ಯೋಜನೆ, ವಸತಿ ಯೋಜನೆ, ಜೇನು ಸಾಕಾಣಿಕೆ ಯೋಜನೆ, ಅಮೃತ ಕ್ರೀಡಾ ಯೋಜನೆ, ಹಾಲು ಉತ್ಪಾದಕರಿಗೆ ಉತ್ತೇಜನ ಸೇರಿದಂತೆ ಸಾಂಕೇತಿಕವಾಗಿ 18 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಚೆಕ್ ವಿತರಿಸಿದರು. ಜಿಲ್ಲೆಯಾದ್ಯಂತ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಸಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಎ.ಎಸ್. ಜಯರಾಮ್, ಡಾ. ಸಿ.ಎಂ. ರಾಜೇಶ್ ಗೌಡ, ವಿಧಾನ ಪರಿಷತ್ ಶಾಸಕ ಚಿದಾನಂದ್‌ಎಂ.ಗೌಡ, ಮಹಾಪೌರರಾದ ಎಂ. ಪ್ರಭಾವತಿ ಸುಧೀಶ್ವರ್, ಉಪಮಹಾಪೌರ ಟಿ.ಕೆ. ನರಸಿಂಹಮೂರ್ತಿ, ನಗರಾಭಿವೃದ್ಧಿ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿಇಒ ವಿದ್ಯಾಕುಮಾರಿ, ತುಮಕೂರು ಪಾಲಿಕೆ ಆಯುಕ್ತ ಎಚ್.ವಿ. ದರ್ಶನ್, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.