
ಬೆಂಗಳೂರು (ಸೆ.12) : ಮಹದೇವಪುರ ವಲಯದ ರೈನ್ ಬೋ ಡ್ರೈವ್, ಇಕೋ ಸ್ಪೇಸ್, ಅನುಗ್ರಹ ಲೇಔಟ್, ಸಾಯಿಲೇಔಟ್ ಸೇರಿದಂತೆ ಇನ್ನಿತರೆ ಕಡೆ ಸೋಮವಾರದಿಂದ ದೊಡ್ಡ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.ನಗರದಲ್ಲಿ ನಿರಂತವಾಗಿ ಸುರಿದ ಮಳೆಗೆ ಮಹದೇವಪುರದ 20ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿದ್ದವು. ಅಲ್ಲಿದ್ದ ರಾಜಕಾಲುವೆಗಳ ಒತ್ತುವರಿಯಿಂದಲೇ ಪ್ರವಾಹ ಸೃಷ್ಟಿಯಾಗಲು ಕಾರಣ ಎಂದು ತಿಳಿದಿರುವ ಬಿಬಿಎಂಪಿ ಅದಕ್ಕಾಗಿ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಕಳೆದ ಸೆ.1ರಿಂದ 9ರವರೆಗೆ ಕೇವಲ ಖಾಲಿ ಜಾಗ, ಕಾಂಪೌಡ್‌ಗಳನ್ನು ಕೆಡವಿ ತೆರವು ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಸೋಮವಾರದಿಂದ ರಾಜಕಾಲುವೆ ಮೇಲೆ ನಿರ್ಮಿಸಲಾದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದಾರೆ.
ಕೆರೆ ಒತ್ತುವರಿ ನಿರ್ದಾಕ್ಷಿಣ್ಯ ತೆರವುಗೊಳಿಸಲು ಸೂಚನೆ: ಸಚಿವ ಸೋಮಣ್ಣ
ರೈನ್‌ಬೋ ಡ್ರೈವ್ ಲೇಔಟ್(Rainbow Drive Layout)ನಲ್ಲಿ 15ಕ್ಕೂ ಹೆಚ್ಚಿನ ಕಟ್ಟಡಗಳು ರಾಜಕಾಲುವೆ ಮುಚ್ಚಿ ನಿರ್ಮಾಣವಾಗಿರುವುದನ್ನು ಪತ್ತೆ ಮಾಡಲಾಗಿದೆ. ಜತೆಗೆ ಹೊರವರ್ತುಲ ರಸ್ತೆಯ ಇಕೋ ಸ್ಪೇಸ್‌ನಲ್ಲಿನ ದೊಡ್ಡ ಕಟ್ಟಡಗಳು ಕೂಡ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ. ಈ ಕುರಿತು ವರದಿ ಸಿದ್ಧಪಡಿಸಿರುವ ಬಿಬಿಎಂಪಿ(BBMP) ಅಧಿಕಾರಿಗಳು ಸೋಮವಾರ ಆ ಭಾಗದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಿದೆ.
ಸೋಮವಾರದಿಂದ ಸರ್ವೇ ಸಿಬ್ಬಂದಿಯನ್ನು ಜತೆಗೆ ಕರೆದುಕೊಂಡು ಸ್ಥಳದಲ್ಲೇ ಒತ್ತುವರಿ ಗುರುತಿಸಿ, ನಂತರ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಇನ್ನು ಮುಂದೆ ಯಾರಿಗೂ ನೋಟಿಸ್ ನೀಡುವುದಿಲ್ಲ, ಬದಲಿಗೆ ನಕ್ಷೆಯಂತೆ ರಾಜಕಾಲುವೆ ಒತ್ತುವರಿಯನ್ನು ಪತ್ತೆ ಮಾಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಆ ಮೂಲಕ ಮುಂಚೆಯೇ ಒತ್ತುವರಿದಾರರು ತೆರವು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುವ ಕ್ರಮಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಸೃಷ್ಟಿಯಾಗದಂತೆ ಎಲ್ಲ ಕ್ರಮ ಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸೋಮವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.
-ಬಸವರಾಜ ಕಬಾಡೆ, ಮುಖ್ಯ ಎಂಜಿನಿಯರ್, ಮಹದೇವಪುರ ವಲಯ
Raja Kaluve Encroachment: ಸಿಎಂ ತಾಕೀತು ಬೆನ್ನಲ್ಲೇ 34 ಕಡೆ ರಾಜಕಾಲುವೆ ಒತ್ತುವರಿ ತೆರವು
ನೆರೆಪೀಡಿತ 1064 ಮನೆಗಳಿಗೆ ಬಿಬಿಎಂಪಿ ಪರಿಹಾರ:
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮಹದೇವಪುರ ವಲಯದಲ್ಲಿ 1,064 ಮನೆಗಳಿಗೆ ಹಾನಿಯಾಗಿದ್ದು, ತಲಾ .10 ಸಾವಿರ ಪರಿಹಾರ ನೀಡಲಾಗುವುದು ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ. ಈ ಕುರಿತು ವಿವರಣೆ ನೀಡಿದ ಅವರು, ಪ್ರವಾಹ ಕಡಿಮೆಯಾದ ನಂತರ ಮಹದೇವಪುರ ವಲಯದಲ್ಲಿ ಪಾಲಿಕೆ ಸಿಬ್ಬಂದಿ ವಾರ್ಡ್ ಮಟ್ಟದಲ್ಲಿ ಸಮೀಕ್ಷೆ ಮಾಡಿದ್ದು, 1,064 ಮನೆಗಳಿಗೆ ನೀರು ನುಗ್ಗಿ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳು ಹಾಳಾಗಿರುವುದನ್ನು ಗುರುತಿಸಲಾಗಿದೆ. ಪಾಲಿಕೆಯಿಂದ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ (ಡಿಬಿಟಿ) ಪರಿಹಾರದ ಹಣ ವರ್ಗಾಯಿಸಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನುಸಾರ ತಲಾ .10 ಸಾವಿರ ಧನಸಹಾಯ ನೀಡಲಾಗುತ್ತದೆ. ಈಗಾಗಲೇ ಸಂತ್ರಸ್ತರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಪಡೆಯಲಾಗಿದೆ. ಸೋಮವಾರ ಮಹದೇಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸೇರಿ ಅನೇಕ ಜನಪ್ರತಿನಿಧಿಗಳು ಪರಿಹಾರ ಧನ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಹೆಚ್ಚು ನಷ್ಟವಾಗಿದೆ, 30 ಸಾವಿರ ನೀಡಿ:
ಪ್ರವಾಹದಿಂದ ಎತ್ತರದ ಪ್ರದೇಶಗಳು ಮತ್ತು ನೀರು ನುಗ್ಗದ ಸ್ಥಳಗಳಿಗೆ ತೆರಳಿ ಆಶ್ರಯ ಪಡೆದಿದ್ದೆವು. ಬಿಬಿಎಂಪಿಯಿಂದ 3 ದಿನ ಊಟ ನೀಡಿರುವುದು ಬಿಟ್ಟರೆ ಬೇರೇನೂ ಸೌಲಭ್ಯಗಳನ್ನು ಕೊಟ್ಟಿಲ್ಲ. ಈಗ ಪ್ರವಾಹ ಪರಿಸ್ಥಿತಿ ಸಂಪೂರ್ಣ ತಗ್ಗಿದ್ದು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡುವ ಹಾಗೂ ಬದಲಿ ವಸ್ತುಗಳನ್ನು ಖರೀದಿ ಮಾಡಬೇಕಿದೆ. ಪಾಲಿಕೆ ನೀಡುವ .10 ಸಾವಿರ ಪರಿಹಾರ ಸಾಕಾಗುವುದಿಲ್ಲ. ಹಾಗಾಗಿ ನಷ್ಟದ ಪ್ರಮಾಣ ಹೆಚ್ಚಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯಸ್ಥಿಕೆ ವಹಿಸಿ ತಲಾ .30 ಸಾವಿರ ಪರಿಹಾರ ನೀಡಲು ಸೂಚಿಸಬೇಕು ಎಂದು ಸಂತ್ರಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ