Asianet Suvarna News Asianet Suvarna News

Siddeshwara Swamiji: ಜನ ಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷ ಸಿದ್ದೇಶ್ವರ ಸ್ವಾಮೀಜಿ

ಅಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಪ್ರತಿರೂಪ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಸದಾ ಕಂಗೊಳಿಸುವಂತೆ ಮಾಡಿತ್ತು. ಅವರ ಮನಮುಟ್ಟುವ ಪ್ರವಚನ, ಮನಸನ್ನೇ ಪರಿವರ್ತಿಸುವ ಶಕ್ತಿ, ದುಶ್ಚಟಗಳನ್ನು ದೂರವಾಗಿಸುವ ಮಾಂತ್ರಿಕತೆ, ಹಗುರ ಮಾತುಗಳು, ಮೃದು ಪ್ರವಚನ ನೀಡಿದರೂ ಖಡಕ್‌ ಸಂದೇಶ ನೀಡುತ್ತಿದ್ದ ಶ್ರೀಗಳನ್ನು ಕಂಡರೆ ಅವರ ಭಕ್ತರು ಜೀವಂತ ದೇವರೆಂದೇ ಭಾವಿಸಿದ್ದರು.

Siddapurusha Siddeshwar Swamiji who sowed knowledge in peoples mind rav
Author
First Published Jan 3, 2023, 6:18 AM IST

ರುದ್ರಪ್ಪ ಆಸಂಗಿ

 ವಿಜಯಪುರ (ಜ.3) : ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಜೀವನವೇ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಸಿದ್ದೇಶ್ವರ ಶ್ರೀಗಳ ಬಿಳೆ ಪಂಚೆ, ಬಿಳಿ ಅಂಗಿ, ಸಾಧಾರಣ ಮೈಕಟ್ಟು, ತೇಜಸ್ಸು ಹೊಂದಿದ ನಗುಮುಖ ಕಂಡವರೆಲ್ಲರಿಗೂ ಚಿಂತೆ, ದುಗುಡು, ದುಮ್ಮಾನ ಮರೆಯಾಗುತ್ತಿದ್ದವು. ಶ್ರೀ ಸಿದ್ದೇಶ್ವರ ಶ್ರೀಗಳು ಯಾವುದೇ ಮೋಡಿ ಮೂಲಕ ಜನರನ್ನು ಮರಳು ಮಾಡಿದವರಲ್ಲ. ಅವರ ತೆರೆದಿಟ್ಟಜೀವನ ಇತರರಿಗೆ ಬದುಕಿನ ದಾರಿದೀಪ. ಜತೆಗೆ ಅಮೂಲ್ಯವಾದ ಪುಸ್ತಕವೂ ಹೌದು.

ಅಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಪ್ರತಿರೂಪ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಸದಾ ಕಂಗೊಳಿಸುವಂತೆ ಮಾಡಿತ್ತು. ಅವರ ಮನಮುಟ್ಟುವ ಪ್ರವಚನ, ಮನಸನ್ನೇ ಪರಿವರ್ತಿಸುವ ಶಕ್ತಿ, ದುಶ್ಚಟಗಳನ್ನು ದೂರವಾಗಿಸುವ ಮಾಂತ್ರಿಕತೆ, ಹಗುರ ಮಾತುಗಳು, ಮೃದು ಪ್ರವಚನ ನೀಡಿದರೂ ಖಡಕ್‌ ಸಂದೇಶ ನೀಡುತ್ತಿದ್ದ ಶ್ರೀಗಳನ್ನು ಕಂಡರೆ ಅವರ ಭಕ್ತರು ಜೀವಂತ ದೇವರೆಂದೇ ಭಾವಿಸಿದ್ದರು. ಹಾಗಾಗಿ ಶ್ರೀಗಳಿಗೆ ನಡೆದಾಡುವ ದೇವರು ಎಂದು ಜನರು ಸಂಬೋಧಿಸುವುದು ಬೆಳೆದುಕೊಂಡು ಬಂದಿತ್ತು. ಅವರು ನಿಜಕ್ಕೂ ದೇವರಂತೆ ನಿಜ ಜೀವನದಲ್ಲಿ ಬದುಕಿ ತೋರಿಸಿದ್ದಾರೆ.

Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

1940ರಲ್ಲಿ ಜನನ:

ದೇವತಾ ಸ್ವರೂಪಿ ಸಿದ್ದೇಶ್ವರ ಶ್ರೀಗಳ ಪೂರ್ವಾಶ್ರಮವು ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮ. 1940 ಅಕ್ಟೋಬರ್‌ 24 ರಂದು ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಓಗೆಪ್ಪಗೌಡ ಬಿರಾದಾರ ತಾಯಿ ಸಂಗವ್ವ ಅವರ ಪುಣ್ಯ ಉದರದಲ್ಲಿ ಜನಿಸಿದರು. ಶ್ರೀಗಳ ಬಾಲ್ಯದ ಹೆಸರು ಸಿದ್ದಗೊಂಡ ಬಿರಾದಾರ. ತದ ನಂತರ ಶ್ರೀ ಸಿದ್ಧೇಶ್ವರರಾಗಿ ಆಧ್ಯಾತ್ಮಿಕ ದಿವ್ಯ ಚೇತನವಾಗಿ ರೂಪುಗೊಂಡರು.

ಬಾಲ್ಯದಲ್ಲಿಯೇ ಅಧ್ಯಾತ್ಮದ ಒಲವು:

ಬಾಲ್ಯದಲ್ಲಿಯೇ ಎಲ್ಲರೂ ಶ್ರೀ ಸಿದ್ದೇಶ್ವರ ಅವರನ್ನು ಸಿದ್ದು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಸಿದ್ದು ಬಾಲ್ಯದಲ್ಲಿಯೇ ಅಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಏಕಾಂತಪ್ರಿಯರಾಗಿದ್ದ ಶ್ರೀ ಸಿದ್ದೇಶ್ವರ ಶ್ರೀಗಳು ಚಿಕ್ಕಂದಿನಲ್ಲಿ ಊರಿನ ಗುಡ್ಡದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು ಎಂದು ಹಿರಿಯರಾದ ಬಿ.ಎಸ್‌.ಪಟ್ಟಣ ಅವರು ನೆನಪಿಸಿಕೊಂಡರು.

ಸ್ನಾತಕೋತ್ತರ ಪದವೀದರ!:

ಶ್ರೀ ಸಿದ್ದೇಶ್ವರ ಶ್ರೀಗಳು ಓದುವುದರಲ್ಲಿಯೂ ಮುಂದಿದ್ದರು. ಆಗಿನ ಮೂಲ್ಕಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಊರ ಹೊರ ವಲಯದ ಸನ್ಯಾಸಿ ಮಠಕ್ಕೆ ಹೋಗಿ ಸಹಪಾಠಿಗಳೊಂದಿಗೆ ನಾಲ್ಕೈದು ದಿನ ವಾಸ್ತವ್ಯ ಹೂಡಿದ್ದರು. ನಂತರ ಶ್ರೀಗಳು ಈಶ್ವರ ಲಿಂಗದ ಸಣ್ಣ ಗುಡಿಯಲ್ಲಿ ಬಾಗಿಲಿಗೆ ಕಲ್ಲು ಇಟ್ಟುಕೊಂಡು ಮೂರು ದಿನ ಧ್ಯಾನಕ್ಕೆ ಕುಳಿತರು. ವಿಷಯ ತಿಳಿದ ಮಲ್ಲಿಕಾರ್ಜುನ ಶ್ರೀಗಳು ತಮ್ಮ ಕಡೆಯವರನ್ನು ಕಳುಹಿಸಿ ಆಶ್ರಮಕ್ಕೆ ಕರೆತಂದರು ಎಂಬ ವಿಷಯವನ್ನು ಅವರನ್ನು ಬಾಲ್ಯದಿಂದ ಕಂಡವರೆಲ್ಲರೂ ವಿವರಿಸುತ್ತಾರೆ.

ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿವರೆಗೆ ಅಭ್ಯಾಸ ಮಾಡಿ ನಂತರ ವಿಜಯಪುರ ನಗರದ ಎಸ್‌.ಎಸ್‌.ಹೈಸ್ಕೂಲ್‌ನಲ್ಲಿ 8ನೇ ತರಗತಿ, ಬಳಿಕ ಚಡಚಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಮಲ್ಲಿಕಾರ್ಜುನ ಅಪ್ಪಗಳ ಪ್ರವಚನ ಇದ್ದಾಗ ಅಲ್ಲಿಯೇ ಶಿಕ್ಷಣ ಮುಂದುವರೆಸಿ, ನಂತರ ಬಿಎಲ್‌ಡಿಇ ಸಂಸ್ಥೆಯ ಅಂದಿನ ‘ವಿಜಯ ಕಾಲೇಜ್‌’ ಪಿಯುಸಿ ಅಧ್ಯಯನ, ನಂತರ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದರು.

ಅಧ್ಯಾತ್ಮ ಲೋಕದ ಆಶಾಕಿರಣ:

ಜ್ಞಾನಯೋಗಾಶ್ರಮದ ಸಂಸ್ಥಾಪಕ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಲು ಶ್ರೀ ಸಿದ್ದೇಶ್ವರ ಶ್ರೀಗಳು ಹೋಗುತ್ತಿದ್ದರು. ಅದುವೇ ಆಧ್ಯಾತ್ಮಿಕ ಲೋಕದ ದಿವ್ಯ ಚೇತನ ಉದಯಿಸುವ ಕಾಲಘಟ್ಟಕ್ಕೆ ಮುನ್ನುಡಿ ಬರೆಯಿತು.

1958ರಲ್ಲಿ ಚಡಚಣದಲ್ಲಿ ಪ್ರವಚನ ಮುಕ್ತಾಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ಬಾಲಕ ಸಿದ್ಧಗೊಂಡ ಅವರನ್ನು ಶಿಷ್ಯನನ್ನಾಗಿ ಸಿದ್ದೇಶ್ವರ ಎಂದು ನಾಮಕರಣ ಮಾಡಿದರು. ಅಲ್ಲಿಂದಲೇ ಸಿದ್ದೇಶ್ವರ ಮಹಾಸ್ವಾಮೀಜಿಗಳು ಅಧ್ಯಾತ್ಮ ಜೀವನದ ಜ್ಞಾನ ಜ್ಯೋತಿಯಾಗಿ ಬೆಳಗಿ ಅಂಧಕಾರವನ್ನು ದೂರ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. 1960 ರಲ್ಲಿ ಸಿದ್ಧಾಂತ ಶಿಖಾಮಣಿ ವಿಷಯವಾಗಿ ಮರಾಠಿಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಪ್ರವಚನ ಮಾಡುತ್ತಿದ್ದಾಗ ತಮ್ಮ ಪ್ರಿಯ ಶಿಷ್ಯ ಸಿದ್ದೇಶ್ವರ ಅವರಿಗೆ ಕನ್ನಡದಲ್ಲಿ ಟಿಪ್ಪಣಿ ಮಾಡಿಕೊಳ್ಳಲು ಹೇಳಿದ್ದರು. ಪ್ರವಚನ ಸಂಪನ್ನಗೊಂಡ ಸಂದರ್ಭದಲ್ಲಿ ಆ ಟಿಪ್ಪಣಿಯೇ ಬೃಹತ್‌ ಪ್ರಮಾಣದಲ್ಲಿ ರೂಪಿತವಾಯಿತು. 400 ಪುಟಗಳ ಬೃಹತ್‌ ಗ್ರಂಥ ರೂಪ ತಾಳಿತು, ಅದೇ ಸಿದ್ಧಾಂತ ಶಿಖಾಮಣಿಯ ಮೊದಲ ಆವೃತ್ತಿ.

ಪ್ರವಚನಗಳ ಚೇತನ:

ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಪ್ರವಚನವೇ ಸರ್ವಸ್ವವಾಗಿತ್ತು. ಪ್ರವಚನಗಳಿಂದಲೇ ಜನರ ಜೀವನ, ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಕನ್ನಡ, ಇಂಗ್ಲಿಷ್‌, ಪರ್ಷಿಯನ್‌ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರವೀಣರಾಗಿದ್ದ ಶ್ರೀಗಳು ನಿರರ್ಗಳವಾಗಿ ಉಪನ್ಯಾಸ ನೀಡುತ್ತಿದ್ದರು. ಸಾಕ್ರೆಟಿಸ್‌ ತತ್ವಗಳಿಂದ ಹಿಡಿದು ಕನಫä್ಯಷಿಯಸ್‌ ತತ್ವಗಳನ್ನು, ಬುದ್ಧನ ಬೋಧನೆಗಳನ್ನು, ಬಸವಣ್ಣನವರ ವಿಚಾರಗಳನ್ನು, ವೇದಗಳ ಸಾರವನ್ನು ಪ್ರವಚನದಲ್ಲಿ ಉಲ್ಲೇಖಿಸುವುದುಂಟು.

ಅಮೆರಿಕ, ಜಪಾನ್‌ ಸೇರಿದಂತೆ ಹಲವಾರು ದೇಶಗಳಲ್ಲಿಯೂ ಶ್ರೀಗಳು ತಮ್ಮ ದಿವ್ಯ ಪ್ರವಚನಾಮೃತವನ್ನು ಭಕ್ತಾದಿಗಳಿಗೆ ಉಣಬಡಿಸಿದ್ದರು. ಸುತ್ತೂರ ಶ್ರೀಗಳ ಕೋರಿಕೆಯ ಮೇರೆಗೆ ಅಮೆರಿಕಗೆ ತೆರಳಿ ಅಧ್ಯಾತ್ಮದ ಸುಗಂಧ, ಭಾರತೀಯ ಸಂಸ್ಕೃತಿಯ ದಿವ್ಯತೆಯನ್ನು ಪ್ರವಚನದ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಚಯಿಸಿದ ಮಹನೀಯರಾಗಿದ್ದರು.

ಸರಳ ಸಜ್ಜನಿಕೆ, ಹಣದ ವೈರಾಗಿ:

ಶುಭ್ರ ಬಿಳಿ ಬಣ್ಣದ ಉಡುಪು ಧರಿಸುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬಟ್ಟೆಗೆ ಜೇಬು ಇರಲಿಲ್ಲ, ಹಣವನ್ನೇ ಅವರು ಮುಟ್ಟುತ್ತಿರಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜ್ಞಾನಯೋಗಾಶ್ರಮಕ್ಕೆ ನೀಡಿದ ಅನುದಾನವನ್ನು ನಿರಾಕರಿಸಿ ಆಶ್ರಮಕ್ಕೆ ಹಣ ಬೇಕಾಗಿಲ್ಲ, ಇಲ್ಲಿ ಜ್ಞಾನ ಪ್ರಸಾರ ಮಾಡುವ ಕಾರ್ಯ ನಡೆಯುತ್ತಿದೆ ಎಂದಿದ್ದರು. ದೇಶ, ವಿದೇಶದ ದಾನಿಗಳು ಆಶ್ರಮಕ್ಕೆ ನೆರವು ನೀಡಲು ಮುಂದೆ ಬಂದರೂ ಅದನ್ನು ಸ್ವೀಕರಿಸಲಿಲ್ಲ. ಭಕ್ತರೊಬ್ಬರು ಕಾರು ತಂದು ಆಶ್ರಮದಲ್ಲಿ ನಿಲ್ಲಿಸಿ, ಕೀಲಿ ಕೊಟ್ಟರು. ಶ್ರೀಗಳು ನಗುತ್ತಲೇ ಅದನ್ನು ವಾಪಸ್‌ ಮಾಡಿದರು. ಹಾರವನ್ನು ಹಾಕಿಸಿಕೊಳ್ಳದೇ ಮುಗುಳ್ನಗೆಯಿಂದಲೇ ಅದನ್ನು ಸ್ಪರ್ಶಿಸುವುದು ವಾಡಿಕೆ. ಸನ್ಮಾನಗಳಿಂದಲೂ ಶ್ರೀಗಳು ದೂರವೇ ಇದ್ದರು.

ಪೂರ್ವಾಶ್ರಮದ ಜೊತೆ ಬಾಂಧವ್ಯವಿಲ್ಲ!

ಪ್ರಖರ ಆಧ್ಯಾತ್ಮಿಕ, ಸನ್ಯಾಸ ಜೀವಿಯಾಗಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಪೂರ್ವಾಶ್ರಮದ ಜೊತೆ ಯಾವ ಬಾಂಧವ್ಯವನ್ನೂ ಹೊಂದಿರಲಿಲ್ಲ. ‘ಕೂಡಲಸಂಗಮನ ಶರಣರು ಕರುಳಿಲ್ಲದ ಕಲಿಗಳು’ ಎಂಬ ಸಾಕಾರ ರೂಪದಂತಿದ್ದರು. ತಂದೆ, ತಾಯಿ ದೈವಾಧೀನರಾಗಿದ್ದಾಗಲೂ ಅವರು ಬಿಜ್ಜರಗಿಗೆ ಹೋಗಲಿಲ್ಲ, ‘ಸನ್ಯಾಸತ್ವ’ದ ತತ್ವ ಮೀರಲಿಲ್ಲ.

ವೈಕುಂಠ ಏಕಾದಶಿ ದಿನವೇ ವೈಕುಂಠ ಸೇರಿದ ಸಿದ್ದೇಶ್ವರ ಸ್ವಾಮಿಜಿ, ಸಿಎಂ ಸೇರಿ ಗಣ್ಯರ ಸಂತಾಪ!

ಪ್ರಶಸ್ತಿಗಳಿಗೆ ಆಸೆ ಪಡಲಿಲ್ಲ

2018ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಶ್ರೀಗಳನ್ನು ಅರಸಿ ಬಂದರೂ ಅದನ್ನು ವಿನಮ್ರವಾಗಿ ನಿರಾಕರಿಸಿದರು. ನಾನು ಸನ್ಯಾಸಿ, ನನಗೇಕೆ ಪ್ರಶಸ್ತಿ ಎಂದು ಅದನ್ನು ನಯವಾಗಿಯೇ ನಿರಾಕರಿಸಿದರು. ಅಷ್ಟೊಂದು ಸರಳತೆ, ವಿಚಾರ ಬದ್ಧತೆಯ ಪ್ರತಿರೂಪವಾಗಿ ಸಿದ್ದೇಶ್ವರರು ಬದುಕಿದ್ದರು.

Follow Us:
Download App:
  • android
  • ios