ಸಮಾಧಿ, ಪ್ರತಿಮೆ ಬೇಡ, 8 ವರ್ಷದ ಹಿಂದೆ ಶ್ರೀಗಳು ಬರೆದಿದ್ದ ಪತ್ರದಂತೆ ಅಂತ್ಯಕ್ರಿಯೆ!

By Govindaraj SFirst Published Jan 3, 2023, 12:23 AM IST
Highlights

ಸಮಾಧಿ ಆಗಬಾರದು, ಗುಡಿ ಆಗಬಾರದು, ಪ್ರತಿಮೆ ನಿರ್ಮಾಣ ಬೇಡ, ಪೂಜೆ, ಪುನಸ್ಕಾರಗಳು ಆಗಬಾರದು, ಚಿತಾಭಸ್ಮವನ್ನು ಸಾಗರ ಅಥವಾ ನದಿಯಲ್ಲಿ ವಿಸರ್ಜಿಸಬೇಕು, ಅಂತ್ಯಕ್ರಿಯೆಯಲ್ಲಿ ಯಾವುದೇ ವಿಧಿವಿಧಾನಗಳು ಬೇಡ ಎಂದು 2014ರಲ್ಲಿ ಸಿದ್ದೇಶ್ವರ ಶ್ರೀಗಳು ವಿಲ್‌ನಲ್ಲಿ ಬರೆದಿದ್ದಾರೆ. 

ವಿಜಯಪುರ (ಜ.03): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಜ್ಞಾನ‌ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಸೋಮವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಸಮಾಧಿ ಆಗಬಾರದು, ಗುಡಿ ಆಗಬಾರದು, ಪ್ರತಿಮೆ ನಿರ್ಮಾಣ ಬೇಡ, ಪೂಜೆ, ಪುನಸ್ಕಾರಗಳು ಆಗಬಾರದು, ಚಿತಾಭಸ್ಮವನ್ನು ಸಾಗರ ಅಥವಾ ನದಿಯಲ್ಲಿ ವಿಸರ್ಜಿಸಬೇಕು, ಅಂತ್ಯಕ್ರಿಯೆಯಲ್ಲಿ ಯಾವುದೇ ವಿಧಿವಿಧಾನಗಳು ಬೇಡ ಎಂದು 2014ರಲ್ಲಿ ಸಿದ್ದೇಶ್ವರ ಶ್ರೀಗಳು ವಿಲ್‌ನಲ್ಲಿ ಬರೆದಿದ್ದಾರೆ. ಹೀಗಾಗಿ ಶ್ರೀಗಳ ಆಶಯದಂತೆ ಅಂತ್ಯ ಸಂಸ್ಕಾರ ನಡೆಯಲಿದ್ದು, 'ನಿಸರ್ಗದಿಂದ ಬಂದವನು, ನಿಸರ್ಗದಲ್ಲೇ ಲೀನವಾಗಬೇಕು' ಎಂಬುದು ಅವರ ಆಶಯವಾಗಿತ್ತು. 

ಮೃತರ ಅಂತ್ಯಕ್ರಿಯೆ ನಾಳೆ (ಮಂಗಳವಾರ) ಸಂಜೆ ಸರ್ಕಾರಿ ಗೌರವಧಾರಗಳೊಂದಿಗೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿನಯ್ ಮಹೇಂತೇಶ್ ದಾನಮ್ಮನವರ್ ತಿಳಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುಹಿತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ವೈದ್ಯರು ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಚಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು.

Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವಿಜಯಪುರದ ಜ್ಞಾನಯೋಗಾಶ್ರಮ ಮಠಕ್ಕೆ ಸುತ್ತೂರು ಶ್ರೀಗಳೂ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಡಿ.31ರಂದು ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಶ್ರೀಗಳ ದರ್ಶನ ಪಡೆದಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ಪ್ರಧಾನಿ ಮೋದಿ ಅವರ ಜತೆ ಫೋನಿನಲ್ಲಿ ಮಾತನಾಡಿಸಿದ್ದರು. ಉನ್ನತ ಚಿಕಿತ್ಸೆ ನೀಡುವುದರ ಬಗ್ಗೆ ಪ್ರಧಾನಿಯವರು ಚರ್ಚಿಸಿದಾಗ ಕೈ ಮುಗಿದು ಧನ್ಯವಾದ ಅರ್ಪಿಸಿದ್ದರು. ಅಲ್ಲದೆ ಗುರುಗಳ ಕಿಡ್ನಿ, ಹೃದಯ, ಶ್ವಾಸಕೋಶ ಪ್ಯಾರಾಮೀಟರ್ಸ್ ಸಾಮಾನ್ಯವಾಗಿದೆ ಎಂಬುದಾಗಿ ಸಿಎಂ ತಿಳಿಸಿದ್ದರು. 

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರಾಗಿರುವ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಕಳೆದೆರಡು ದಿನ ಚೇತರಿಕೆ ಕಂಡಿತ್ತು, ಆದರೆ, ಮಂಗಳವಾರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಶ್ರೀಗಳ ಅಗಲಿಕೆಗೆ ಇಡೀ ರಾಜ್ಯವೇ ದುಖಃದ ಮಡಿಲಲ್ಲಿದೆ. ಮಠದ ಆವರಣದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಮಠದತ್ತ ಭಕ್ತರು ಧಾವಿಸುತ್ತಿದ್ದು, ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

click me!