ಕ್ಷುಲ್ಲಕ ಕಾರಣಕ್ಕೆ ಬಸ್ ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿನಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದ್ದು, ಕಂಡಕ್ಟರ್ ವರ್ತನೆ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡ (ಜ.7): ಕ್ಷುಲ್ಲಕ ಕಾರಣಕ್ಕೆ ಬಸ್ ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿನಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದ್ದು, ಕಂಡಕ್ಟರ್ ವರ್ತನೆ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಧಾರವಾಡದ ಕೆಲಗೇರಿ ಬಡಾವಣೆ ಬಳಿ ಈ ಘಟನೆ ನಡೆದಿದ್ದು, ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್ ಬರುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆ ಹಿನ್ನೆಲೆ:
ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್‌ವೊಂದು ತೆರಳುತಿತ್ತು. ರಶ್ ಇದ್ದ ಬಸ್ಸಿನಲ್ಲಿ ಕಂಡಕ್ಟರ್ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್ ಆಗಿ ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬ ವಿದ್ಯಾರ್ಥಿನಿಯ ಬ್ಯಾಗ್ ಕಂಡಕ್ಟರ್‌ಗೆ ಟಚ್ ಆಗಿದೆ. ಆಗ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಹಣವು ಕೆಳಗೆ ಬಿದ್ದಿದ್ದು, ಇದರಿಂದ ಕೋಪಗೊಂಡ ಕಂಡಕ್ಟರ್ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದಾರೆ. ಕಂಡಕ್ಟರ್ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿದ್ದು, ನೋವಿನಿಂದ ಬಸ್ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಮುಂದುವರಿದ ಮಹಿಳೆಯರ 'ಶಕ್ತಿ' ಪ್ರದರ್ಶನ; ಕಂಡಕ್ಟರ್, ಡ್ರೈವರ್ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!
ಪಾಲಕರ ಪ್ರತಿಭಟನೆ, ಕ್ಷಮೆ ಕೋರಿದ ಕಂಡಕ್ಟರ್
ಈ ವಿಚಾರ ತಿಳಿದ ಕೂಡಲೇ ಪಾಲಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ದಿಢೀರ್ ಪ್ರತಿಭಟನೆ ನಡೆಸಿದ್ದು, ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿದೆ.