ಮೊದಲ ದಿನ ಶೇ.98.3 ಮಕ್ಕಳು ಪರೀಕ್ಷೆಗೆ ಹಾಜರ್, 13 ಸಾವಿರ ಗೈರು

Kannadaprabha News   | Asianet News
Published : Jun 26, 2020, 09:37 AM ISTUpdated : Jun 26, 2020, 10:18 AM IST
ಮೊದಲ ದಿನ ಶೇ.98.3 ಮಕ್ಕಳು ಪರೀಕ್ಷೆಗೆ ಹಾಜರ್, 13 ಸಾವಿರ ಗೈರು

ಸಾರಾಂಶ

ಕೊರೋನಾ ಸೋಂಕು ಹರಡುವ ಆತಂಕ, ಭೀತಿಯ ನಡುವೆ ಗುರುವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರೀಕ್ಷೆಗೂ ಮೀರಿ ಶೇ.98.3ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದು, ಮಾಸ್ಕ್‌ ಧರಿಸುವಿಕೆಯ ಸಣ್ಣ ಕಿರಿ-ಕಿರಿಯ ನಡುವೆ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ.

ಬೆಂಗಳೂರು(ಜೂ.26): ಕೊರೋನಾ ಸೋಂಕು ಹರಡುವ ಆತಂಕ, ಭೀತಿಯ ನಡುವೆ ಗುರುವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರೀಕ್ಷೆಗೂ ಮೀರಿ ಶೇ.98.3ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದು, ಮಾಸ್ಕ್‌ ಧರಿಸುವಿಕೆಯ ಸಣ್ಣ ಕಿರಿ-ಕಿರಿಯ ನಡುವೆ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ.

ಕೊರೋನಾ ಭೀತಿಯ ನಡುವೆಯೂ ಇಷ್ಟುವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರೊಂದಿಗೆ ಮೊದಲ ದಿನದ ಪರೀಕ್ಷೆಯಲ್ಲಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಭರ್ಜರಿ ಯಶಸ್ಸು ಕಂಡಂತಾಗಿದೆ.

ಫೇಲ್ ಆಗುತ್ತೇನೆಂದು ವಿದ್ಯಾರ್ಥಿನಿ ಆತ್ಮಹತ್ಯೆ..!

ರಾಜ್ಯಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಕೊಠಡಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್‌ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕಾ್ಯನಿಂಗ್‌ ಮಾಡಿ, ಮಾಸ್ಕ್‌ ಧರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸಲಾಗಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಶಿಕ್ಷಕರು ಸ್ವಾಗತ ಕೋರಿದ್ದೂ ಸೇರಿದಂತೆ ಹಲವು ಕಡೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಘಟನೆಗಳು ಜರುಗಿದವು.

ಪರೀಕ್ಷೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ರಾಜ್ಯಾದ್ಯಂತ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಪರೀಕ್ಷಾ ಸಿಬ್ಬಂದಿ ನೀಡಿದ ಸಹಕಾರದಿಂದ ಸರ್ಕಾರ ಮತ್ತಷ್ಟುಉತ್ಸಾಹಗೊಂಡಿದೆ. ಮೊದಲ ದಿನದಂತೆ ಮುಂದಿನ ಪರೀಕ್ಷೆಗಳನ್ನು ಸಹ ಯಶಸ್ವಿಯಾಗಿ ನಡೆಸಲಿದ್ದೇವೆ ಎಂದು ಭರವಸೆ ನೀಡಿದರು.

ಅಬ್ಬಬ್ಬಾ..! ಶಿಕ್ಷಕಿ ಮನೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

ದ್ವಿತೀಯ ಭಾಷೆ ಇಂಗ್ಲಿಷ್‌ ಮತ್ತು ಕನ್ನಡ ಸೇರಿ ರಾಜ್ಯಾದ್ಯಂತ ಒಟ್ಟಾರೆ 7,85,140 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 7,71,878 (ಶೇ.98.3) ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯಾದ್ಯಂತ ಕೊರೋನಾ ಸೋಂಕಿತ 13 ವಿದ್ಯಾರ್ಥಿಗಳು ಸೇರಿ 13,262 ಮಂದಿ ಗೈರು ಹಾಜರಾಗಿದ್ದರು. ಇಡೀ ರಾಜ್ಯದಲ್ಲಿ ಯಾವುದೇ ವಿದ್ಯಾರ್ಥಿ ನಕಲು/ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದರು.

ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿದ್ದ 1,438 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೆರೆ ರಾಜ್ಯಗಳಿಂದ ನೋಂದಾಯಿತ 614 ವಿದ್ಯಾರ್ಥಿಗಳಲ್ಲಿ 555 ಮಂದಿ ಹಾಜರಾಗಿದ್ದರು. ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದಕ್ಕಾಗಿ 3,212 ಬಸ್‌ಗಳು ಹಾಗೂ ಇತರ ವಾಹನ ವ್ಯವಸ್ಥೆ ಮಾಡಲಾಗಿತ್ತು. ಕೇರಳದಿಂದ ಪರೀಕ್ಷೆ ಬರೆಯಲು ತಲಪ್ಪಾಡಿ ಚೆಕ್‌ಪೋಸ್ಟ್‌ನಿಂದ 92 ಬಸ್‌ಗಳಲ್ಲಿ 367 ವಿದ್ಯಾರ್ಥಿಗಳನ್ನು ಕರೆತಂದು ಉಡುಪಿ ಮತ್ತು ಮಂಗಳೂರಿನಲ್ಲಿ ಪರೀಕ್ಷೆ ಬರೆಸಲಾಯಿತು. ಲಾಕ್‌ಡೌನ್‌ ವೇಳೆ ತಮ್ಮ ಊರುಗಳಿಗೆ ತೆರಳಿರುವ ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದ ವಲಸೆ ಕಾರ್ಮಿಕರು ಸೇರಿದಂತೆ 12,644 ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 12,548 ವಿದ್ಯಾರ್ಥಿಗಳು ಹಾಜರಾಗಿದ್ದರು. 96 ಮಂದಿ ಗೈರು ಹಾಜರಾಗಿದ್ದರು ಎಂದರು.

1,200 ಪ್ರತ್ಯೇಕ ಕೊಠಡಿ:

ಕಂಟೇನ್ಮೆಂಟ್‌ ವಲಯದಲ್ಲಿದ್ದ 28 ಪರೀಕ್ಷಾ ಕೇಂದ್ರಗಳ 8,128 ವಿದ್ಯಾರ್ಥಿಗಳನ್ನು ಬೇರೊಂದು ಕೇಂದ್ರಕ್ಕೆ ಬದಲಾಯಿಸಿ ಪರೀಕ್ಷೆ ಬರೆಸಲಾಯಿತು. ಕಂಟೇನ್ಮೆಂಟ್‌ ಪ್ರದೇಶದಲ್ಲಿದ್ದ ಹಾಗೂ ಥರ್ಮಲ್‌ ಸ್ಕಾ್ಯನಿಂಗ್‌ ವೇಳೆ ತಾಪಮಾನ ಹೆಚ್ಚಳ ಕಂಡುಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಲಾಯಿತು. ಕಂಟೇನ್ಮೆಂಟ್‌ ವಲಯದಲ್ಲಿದ್ದ 998 ವಿದ್ಯಾರ್ಥಿಗಳು ಹಾಗೂ ಸ್ಕಾ್ಯನಿಂಗ್‌ ವೇಳೆ ಹೆಚ್ಚಿನ ತಾಪಮಾನ ಕಂಡು ಬಂದ 201 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು ಎಂದು ಮಾಹಿತಿ ನೀಡಿದರು.

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ: ಕೇಸ್‌

ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಇಂಗ್ಲಿಷ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹಬ್ಬಿಸಿದ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಅಸಲಿ ಪ್ರಶ್ನೆಪತ್ರಿಕೆ ಎಂದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿದ್ದ ವ್ಯಕ್ತಿ ಮೇಲೆ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಬಳಿಕ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಸುರೇಶಕುಮಾರ್‌ ತಿಳಿಸಿದರು.

ಇಂದು ಅರ್ಥಶಾಸ್ತ್ರ ಪರೀಕ್ಷೆ

ರಾಜ್ಯಾದ್ಯಂತ ಶುಕ್ರವಾರ (ಜೂ.26) ಎಸ್‌ಎಸ್‌ಎಲ್‌ಸಿ ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ