ಬೆಳಗಾವಿ: ಕಲುಷಿತ ನೀರು ಕುಡಿದು 2 ಸಾವು, 94 ಮಂದಿ ಅಸ್ವಸ್ಥ

By Kannadaprabha NewsFirst Published Oct 28, 2022, 2:15 AM IST
Highlights

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ. 94 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಮದುರ್ಗ (ಅ.28): ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ. 94 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ 10 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ, ಬಾಗಲಕೋಟೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರು.ಗಳ ಪರಿಹಾರ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಗ್ರಾಮದ ಶಿವಪ್ಪ ಬಸಪ್ಪ ಯಂಡಿಗೇರಿ (70) ಹಾಗೂ ಸರಸ್ವತೆವ್ವ ನಿಂಗಪ್ಪ ಹಾವಳ್ಳಿ (60) ಮೃತರು. ಗ್ರಾಮಕ್ಕೆ ಸರಬರಾಜಾಗುವ ಬೋರ್‌ವೆಲ್‌ ನೀರಿನ ಪೈಪ್‌ಲೈನ್‌ ಅಲ್ಲಲ್ಲಿ ಒಡೆದಿದ್ದು, ಕುಡಿಯುವ ನೀರಿನೊಂದಿಗೆ ತಿಪ್ಪೆಗುಂಡಿ ಮಳೆಯಿಂದ ತಗ್ಗು ಗುಂಡಿಯಲ್ಲಿ ಸಂಗ್ರಹವಾದ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಇದೇ ನೀರನ್ನು ಪ್ರತಿ ಮನೆಗೂ ಸರಬರಾಜು ಮಾಡಲಾಗುತ್ತಿದೆ. ಈ ನೀರು ಕುಡಿದ ಜನ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ವಿಷ ಪ್ರಾಷಣದಿಂದ 2 ದನ, 1 ಎತ್ತು ಸಾವು: 5 ಆಕಳು, 2 ಎತ್ತು ಅಸ್ವಸ್ಥ

ಅ.23 ರಿಂದ ಅ.27ರ ಅವಧಿಯಲ್ಲಿ ಗ್ರಾಮದ ಬಸವಣ್ಣ ದೇವರ ಗುಡಿ ಓಣಿ, ಲಕ್ಕಮ್ಮದೇವಿ ಗುಡಿ ಓಣಿ, ಬೀರದೇವರ ಗುಡಿ ಓಣಿಯ 94 ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ಕಳೆದ 10-12 ದಿನಗಳಿಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಂದ ವಾಂತಿ ಭೇದಿ ಪ್ರಾರಂಭವಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದರೂ ಅದರ ಬಗೆಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಸಚಿವ ಕಾರಜೋಳ, ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರು. ಪರಿಹಾರ ನೀಡಲಾಗುವುದು. ಮುದೇನೂರ ಗ್ರಾಮದಲ್ಲಿ ಆರ್‌ಓ ಪ್ಲಾಂಚ್‌ ಇದೆ. ಜನರು ಆರ್‌ಒ ಪ್ಲಾಂಚ್‌ ನೀರನ್ನೇ ಕುಡಿಯಬೇಕು ಎಂದು ತಿಳಿಸಿದ್ದಾರೆ. ಈ ಮಧ್ಯೆ, ರಾಮದುರ್ಗ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಆಗಸ್ಟ್‌ 23ರಂದು ಕಲುಷಿತ ನೀರು ಸೇವಿಸಿ, ವ್ಯಕ್ತಿಯೊಬ್ಬ ಮೃತಪಟ್ಟಿದ್ದ. 40 ಮಂದಿ ಅಸ್ವಸ್ಥರಾಗಿದ್ದರು.

ಶಹಾಪುರ ಪ್ರಕರಣ; ಮತ್ತೊಬ್ಬ ಮಹಿಳೆ ಸಾವು: ಇದೇ ವೇಳೆ, ಯಾದಗಿರಿ ಜಿಲ್ಲೆ ಶಹಾಪುರದ ಹೋತಪೇಟೆಯಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾಳೆ. ಸಿದ್ಧಮ್ಮ ಹಿರೇಮಠ್‌ (62) ಮೃತರು. ಇದರಿಂದಾಗಿ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಇದೇ ವೇಳೆ, ಅಸ್ವಸ್ಥರಾಗಿರುವ ನಾಲ್ವರು ಮಕ್ಕಳು ಸೇರಿದಂತೆ 38 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ವಿರುದ್ದ ಜಿತೇಂದ್ರ ಕಿಡಿ

ಕಲುಷಿತ ನೀರು ಸೇವನೆಯಿಂದಾಗಿ ಅ.22 ರಂದು ಹೊನ್ನಪ್ಪಗೌಡ (42) ಹಾಗೂ 24 ರಂದು ವೃದ್ಧೆ ಈರಮ್ಮ (80) ಎಂಬುವರು ಮೃತಪಟ್ಟಿದ್ದರು. ಗ್ರಾಮದಲ್ಲಿರುವ ತೆರೆದ ಬಾವಿಯ ಮೂಲಕ ಅಲ್ಲಿನ ಟ್ಯಾಂಕರ್‌ಗೆ ನೀರು ಪೂರೈಕೆಯಾಗುತ್ತಿದೆ. ಟ್ಯಾಂಕರ್‌ ನೀರು ನಲ್ಲಿಗಳ ಮೂಲಕ ಮನೆಗಳಿಗೆ ಸರಬರಾಜಾದಾಗ ವಾಂತಿಭೇದಿ ಕಾಣಿಸಿಕೊಂಡಿದೆ. ತೆರೆದ ಬಾವಿಯಲ್ಲಿ ಹಾಗೂ ಟ್ಯಾಂಕರ್‌ನಲ್ಲಿ ಕಲುಷಿತ ನೀರು ಹಾಗೂ ನಲ್ಲಿಗಳ ಮೂಲಕ ಮನೆಗಳಿಗೆ ಬರುವಾಗ ಚರಂಡಿ ನೀರು ಮಿಶ್ರಣವಾಗಿರವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು.

click me!