ನ.11ಕ್ಕೆ ಹಾವೇರಿ ಸಾಹಿತ್ಯ ಸಮ್ಮೇಳನ ಅಸಾಧ್ಯ: ಮಹೇಶ್‌ ಜೋಶಿ

By Govindaraj SFirst Published Oct 4, 2022, 2:00 AM IST
Highlights

ಅಸಹಕಾರ, ಯಾವುದೇ ಪೂರ್ವ ಸಿದ್ಧತೆ ನಡೆಯದಿರುವುದರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ. 11ರಿಂದ ನಡೆಸುವುದು ಸಾಧ್ಯವಿಲ್ಲ. ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅಸಮಾಧಾನ ಹೊರಹಾಕಿದ್ದಾರೆ. 

ಹಾವೇರಿ (ಅ.04): ಅಸಹಕಾರ, ಯಾವುದೇ ಪೂರ್ವ ಸಿದ್ಧತೆ ನಡೆಯದಿರುವುದರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ. 11ರಿಂದ ನಡೆಸುವುದು ಸಾಧ್ಯವಿಲ್ಲ. ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅಸಮಾಧಾನ ಹೊರಹಾಕಿದ್ದಾರೆ. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಈ ಹಿಂದೆ ಸಮ್ಮೇಳನವನ್ನು ನವೆಂಬರ್‌ 11, 12 ಮತ್ತು 13ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪೂರ್ವಸಿದ್ಧತೆಯಾಗಿಲ್ಲ. ಆದ್ದರಿಂದ ನಿಗದಿತ ದಿನಾಂಕದಂದು ಸಮ್ಮೇಳನ ನಡೆಸುವುದು ಅಸಾಧ್ಯ. 

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸಿದ್ಧತೆ ಸಮಾಧಾನಕರವಾಗಿಲ್ಲ, ಅದಕ್ಕಾಗಿ ಸಿಎಂ ಜತೆ ಚರ್ಚಿಸಿ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದ್ದರು. ಬಳಿಕ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನವೆಂಬರ್‌ನಲ್ಲೇ ಸಮ್ಮೇಳನ ನಡೆಯಲಿದೆ ಎಂದು ಹೇಳಿದ್ದಾರೆ. ಪೂರ್ವಸಿದ್ಧತೆ, ಸಮಿತಿ ರಚನೆ ಬಗ್ಗೆ ಕರೆಯಲಾಗಿದ್ದ ಸಭೆಯನ್ನು ನಾಲ್ಕು ಸಲ ಮುಂದೂಡಲಾಗಿದೆ. ಸಮ್ಮೇಳನದ ದಿನಾಂಕ ಘೋಷಣೆ ಕಸಾಪ ಅಧ್ಯಕ್ಷರೇ ಮಾಡುತ್ತಾರೆ. ಆದರೆ, ಮುಖ್ಯಮಂತ್ರಿಗಳು ಮತ್ತು ನಾನು ಇಬ್ಬರೂ ಇದೇ ಜಿಲ್ಲೆಯವರಾಗಿರುವುದರಿಂದ ಸಮನ್ವಯ, ಸರ್ಕಾರದ ಸಹಕಾರದ ದೃಷ್ಟಿಯಿಂದ ಸಿಎಂ ಅವರನ್ನು ಕೇಳಿಯೇ ದಿನಾಂಕ ನಿಗದಿ ಮಾಡುತ್ತಿದ್ದೇವೆ. 

ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ

ಆದರೆ, ಈ ಗೊಂದಲದಿಂದ ಸಾಕಷ್ಟುನೋವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಕೋವಿಡ್‌ ಹಿನ್ನೆಲೆಯಲ್ಲಿ 2021ರಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನು ಮುಂದೂಡುತ್ತ ಬರಲಾಯಿತು. ಏ. 23ರಂದು ಮುಖ್ಯಮಂತ್ರಿಗಳು ಸಭೆ ಕರೆದು ಸೆಪ್ಟೆಂಬರ್‌ 23ರಿಂದ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಆ ದಿನಾಂಕಗಳಂದು ಲಿಂ.ಶಿವಕುಮಾರ ಶಿವಾಚಾರ್ಯರ ಶ್ರದ್ಧಾಂಜಲಿ ಇರುವುದರಿಂದ ಸಮ್ಮೇಳನ ಮುಂದೂಡುವಂತೆ ತರಳಬಾಳು ಸ್ವಾಮೀಜಿಗಳು ಮನವಿ ಮಾಡಿದ್ದರು. ಅದರಂತೆ ಆ ದಿನಾಂಕ ಮುಂದೂಡಿ ನ. 11ರಿಂದ ನಡೆಸಲು ಅನುಕೂಲವಾಗುತ್ತದೆ ಎಂದು ಸಿಎಂಗೆ ಪತ್ರ ಬರೆದು ತಿಳಿಸಲಾಗಿತ್ತು. 

ಈ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸುವಂತೆ ಕೋರಿ ಸಿಎಂಗೆ ಪತ್ರ ಬರೆದಿದ್ದೆ. ದಿನಾಂಕ ಘೋಷಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕರೆದಿದ್ದ ಸುದ್ದಿಗೋಷ್ಠಿಯನ್ನು ಮುಂದೂಡಿದರು. ಮುಖ್ಯಮಂತ್ರಿಗಳು ಸಮ್ಮೇಳನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿದ್ದ .20 ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವಂತೆ ಕೋರಿದ್ದೆ. ಆದರೆ, ಇದುವರೆಗೆ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳೇ ಸಮ್ಮೇಳನದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲು ಸೂಕ್ತ ಏರ್ಪಾಟು ಮಾಡುವಂತೆ ಸಿಎಂ ವಿಶೇಷ ಕರ್ತವ್ಯಾಧಿಕಾರಿಗೆ ಪತ್ರ ಬರೆದಿದ್ದೆ. 

ಆದರೆ, ಅದು ನೆರವೇರಲಿಲ್ಲ. ಆ. 26ರಂದು ಕೃಷ್ಣರಾಜ ಪರಿಷತ್ತಿನ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನ. 11ರಿಂದ ಸಮ್ಮೇಳನ ನಡೆಯಲಿದೆ ಎಂದು ಸಿಎಂ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸಮೇಳನದ ಕಾರ್ಯಚಟುವಟಿಕೆ ಅಧಿಕೃತವಾಗಿ ಪ್ರಾರಂಭಿಸಲು ಅನುಕೂಲವಾಗುವಂತೆ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸುವಂತೆ ಕೋರಿದ್ದೆ. ಆದರೆ, ಇದುವರೆಗೆ ಲೋಗೋ ಬಿಡುಗಡೆಯಾಗಿಲ್ಲ. ಸಮ್ಮೇಳನದ ಪೂರ್ವಸಿದ್ಧತೆ ಕೈಗೊಳ್ಳುವ ಸಂಬಂಧವಾಗಿ ಸೆ. 14ರಂದು ಸಭೆ ಕರೆದಿದ್ದರು. ಆ ಸಭೆಯನ್ನೂ ಮುಂದೂಡಲಾಯಿತು. ಹೀಗೆ ನಾಲ್ಕು ಸಲ ಸಭೆ ಕರೆದು ಮುಂದೂಡಲಾಗಿದೆ ಎಂದು ಆರೋಪಿಸಿದರು.

ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ: ಈ ಬಗ್ಗೆ ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಆದರೆ, ಅದ್ಧೂರಿಯಾಗಿ ಸಮ್ಮೇಳನ ನಡೆಸಬೇಕೆಂಬ ನಮ್ಮ ಆಶಯಕ್ಕೆ ಸಹಕಾರ ಸಿಗದಿರುವುದರಿಂದ ಬೇಸರವಾಗುತ್ತಿದೆ. ಇದು ನಮ್ಮ ದೌರ್ಭಾಗ್ಯ. ಇದು ಒಳ್ಳೆಯ ಸಂಕೇತವಲ್ಲ. ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ. ಸ್ವಾಭಿಮಾನ ಬಿಟ್ಟು ನಾನು ಹೋಗುವುದಿಲ್ಲ. ಸಮ್ಮೇಳನ ನಡೆಯುತ್ತೋ ಇಲ್ಲವೋ ಎಂಬುದನ್ನು ಮೂಕನಾಗಿ ನೋಡುವಂತಾಗಿದೆ. ಈ ಬಗ್ಗೆ ನನಗೇ ನಿಶ್ಚಿತತೆ ಇಲ್ಲ ಎಂದು ನೋವು ಹೇಳಿಕೊಂಡ ಅವರು, ಆದಷ್ಟುಬೇಗ ಗೊಂದಲ ನಿವಾರಿಸಬೇಕು ಎಂದು ಮನವಿ ಮಾಡಿದರು. ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ನೋಂದಣಿಗೆ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಜತೆಗೆ ಸಮ್ಮೇಳನಕ್ಕೆ ನಿಗದಿಯಾಗಿದ್ದ ಜಾಗ 128 ಜನರಿಗೆ ಸೇರಿದ್ದಾಗಿದೆ ಎಂದು ಕೆಲವರು ಹೇಳಿದ್ದಾರೆ. 

Mandya: ಕಸಾಪ ಕಾರ್ಯ​ಕ್ರ​ಮ ಕ​ಡೆ​ಗ​ಣಿ​ಸ​ಬೇ​ಡಿ: ಮ​ಹೇಶ್‌ ಜೋ​ಶಿ ಎ​ಚ್ಚ​ರಿ​ಕೆ

ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇನ್ನೂ ಮಳೆಯಾಗುವ ಸಾಧ್ಯತೆ ಇರುವುದರಿಂದ ತಯಾರಿಗೆ ಸಮಯಾವಕಾಶ ಬೇಕಾಗಲಿದೆ ಎಂದು ಮಹೇಶ ಜೋಶಿ ಹೇಳಿದರು. ಜಿಲ್ಲಾ ಸಾಹಿತ್ಯ ಭವನ ನಿರ್ಮಾಣಕ್ಕೆ ದಿ.ಗಂಗಾಧರ ನಂದಿ ಕುಟುಂಬದವರು 4 ಗುಂಟೆ ಜಾಗ ನೀಡಿದ್ದಾರೆ. ಅದರ ನೋಂದಣಿ ಮಾಡಿಸಿದ್ದೇವೆ. ಅದನ್ನು ಜನಸಾಮಾನ್ಯರ ಸಹಕಾರ ಪಡೆದು ನಿರ್ಮಾಣ ಮಾಡುವ ಉದ್ದೇಶದಿಂದ ಸಮ್ಮೇಳನದ ಬಳಿಕ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹಿಸುತ್ತೇನೆ ಎಂದು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ದೊಡ್ಡಗೌಡರ, ಶಂಕರ ಸುತಾರ, ಎಸ್‌.ಎಸ್‌.ಬೇವಿನಮರದ, ಪ್ರಭು ಅರಗೋಳ ಇತರರು ಇದ್ದರು.

click me!