
ಶಿವಮೊಗ್ಗ(ಜ.22): ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾ ದುರಂತವೊಂದು ಸಂಭವಿಸಿದೆ. ಗಣಿಗಾರಿಕೆ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಶಂಕೆ ಇದೆ.
ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ಕಾರಣ ರೈಲ್ವೆ ಕ್ರಶರ್ ಸ್ಫೋಟ
ಸ್ಫೋಟದ ತೀವ್ರತೆಗೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ನಾಲ್ಕು ಜಿಲ್ಲೆಗಳು ಬೆಚ್ಚಿಬಿದ್ದಿವೆ. ಭೂಮಿ ಕಂಪಿಸಿದ ಅನುಭವವೂ ಆಗಿದ್ದು, ಹಲವು ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಭಯಭೀತರಾದ ಜನ ಮನೆಯಿಂದ ದಿಕ್ಕಾಪಾಲಾಗಿ ಹೊರಗೆ ಓಡಿದ ಘಟನೆ ನಡೆದಿದೆ.
ರಾತ್ರಿ ಸುಮಾರು 10.21ರಿಂದ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೃತ ಕಾರ್ಮಿಕರ ಮೃತದೇಹ ಛಿದ್ರಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಭಾರೀ ಪ್ರಮಾಣದ ಸ್ಫೋಟಕ ಒಟ್ಟಿಗೆ ಸ್ಫೋಟಿಸಿದ ಪರಿಣಾಮ ಶಿವಮೊಗ್ಗ, ಚಿಕ್ಕಮಗಳೂರಿನ ಹೆಚ್ಚಿನ ಕಡೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಉತ್ತರ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹಲವೆಡೆಯೂ ಇದೇ ರೀತಿಯ ಅನುಭವ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಂತೂ ಹಲವು ಮನೆ, ಕಚೇರಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಹಲವು ಕಟ್ಟಡಗಳಿಗೆ ಸಣ್ಣಪುಟ್ಟಹಾನಿಯಾಗಿದೆ. ರಸ್ತೆಗಳೂ ಬಿರುಕು ಬಿಟ್ಟಿವೆ ಎಂದು ಹೇಳಲಾಗುತ್ತಿದೆಯಾದರೂ ಅದನ್ನು ಯಾರೂ ಖಚಿತಪಡಿಸಿಲ್ಲ.
ಆಗಿದ್ದೇನು?:
ಶಿವಮೊಗ್ಗ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಹುಣಸೋಡು ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಗಣಿಗಾರಿಕೆಗೆಂದು ಲಾರಿಯೊಂದರಲ್ಲಿ ಹತ್ತಾರು ಪೆಟ್ಟಿಗೆಯಷ್ಟುಜಿಲೆಟಿನ್ ಸಂಗ್ರಹಿಸಿಡಲಾಗಿತ್ತು. ದಿಢೀರ್ ಈ ಜಿಲೆಟಿನ್ ಸ್ಫೋಟಿಸಿ ದುರಂತ ಸಂಭವಿಸಿದೆ. ಈ ಗಣಿಗಾರಿಕೆಯಲ್ಲಿ ಬಹುತೇಕ ಬಿಹಾರಿ ಕಾರ್ಮಿಕರೇ ಕೆಲಸ ಮಾಡುತ್ತಿದ್ದು, ಕನಿಷ್ಠ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ಚೂರು ಚೂರಾಗಿದ್ದು, ಮೃತಕಾರ್ಮಿಕರ ಮೃತದೇಹಗಳು ಗುರುತಿಸಲಾಗದಷ್ಟುಛಿದ್ರವಾಗಿವೆ. ಜಿಲೆಟಿನ್ ಹೇಗೆ ಸ್ಫೋಟಿಸಿತು ಎಂಬ ಕುರಿತು ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಜಿಲ್ಲಾಧಿಕಾರಿಗಳು ಸೇರಿ ಹಲವು ಅಧಿಕಾರಿಗಳು ಅಧಿಕಾರಿಗಳು ಸ್ಥಳಕ್ಕೆ ತೆರಳಿಸಿದ್ದಾರೆ.
ಶಿವಮೊಗ್ಗದ ಶಾಲೆಗಳ ಸ್ಮಾರ್ಟ್ ಕ್ಲಾಸ್ ರಾಜ್ಯಕ್ಕೆ ಮಾದರಿ : ಸುರೇಶ್ ಕುಮಾರ್
ಸ್ಥಳೀಯರು ಕಂಗಾಲು:
ಸ್ಫೋಟದ ತೀವ್ರತೆಗೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಭೂಕಂಪನವೇ ಸಂಭವಿಸಿತು ಎಂದು ಭಾವಿಸಿದ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಏನಾಗಿದೆ ಎಂದು ಅರಿವಿಲ್ಲದೆ ತಡರಾತ್ರಿವರೆಗೂ ಜನ ಬಯಲಲ್ಲೇ ಉಳಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ