'ಈವರೆಗೆ ರಾಜ್ಯದ 73% ಜನಕ್ಕೆ ಕೋವಿಡ್‌ ಲಸಿಕೆ'

By Kannadaprabha News  |  First Published Sep 19, 2021, 7:13 AM IST

*   5.11 ಕೋಟಿ ಪೈಕಿ 3.73 ಕೋಟಿ ಜನರಿಗೆ ಮೊದಲ ಡೋಸ್‌
*  28% ಜನರಿಗೆ ಎರಡೂ ಡೋಸ್‌ ಲಸಿಕೆ ವಿತರಣೆ
*  ಸರಾಸರಿ ಲಸಿಕೆ ವಿತರಣೆಯಲ್ಲಿ ದೇಶಕ್ಕೇ ಪ್ರಥಮ: ಡಾ. ಸುಧಾಕರ್‌
 


ಬೆಂಗಳೂರು(ಸೆ.19):  ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಲಸಿಕೆ ಹಾಕಲು ಗುರುತಿಸಿರುವ ಒಟ್ಟು ಜನರ ಪೈಕಿ ಶೇ.72.99ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ ಪೂರೈಸಲಾಗಿದೆ.

ಶುಕ್ರವಾರ ಒಂದೇ ದಿನ ಬರೋಬ್ಬರಿ 31 ಲಕ್ಷ ಮಂದಿಗೆ ಲಸಿಕೆ ನೀಡುವ ಮೂಲಕ ಶನಿವಾರದ ವೇಳೆಗೆ ರಾಜ್ಯದಲ್ಲಿ ಒಟ್ಟಾರೆ 5.17 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ 18 ವರ್ಷ ದಾಟಿದ 5.11 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 3.73 ಕೋಟಿ ಜನರಿಗೆ ಮೊದಲ ಡೋಸ್‌ ನೀಡಲಾಗಿದೆ. ಈ ಮೂಲಕ ಉದ್ದೇಶಿತ ಜನಸಂಖ್ಯೆಯ ಶೇ.72.99 ರಷ್ಟುಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಿದಂತಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

ಶೇ.28 ಮಂದಿಗೆ 2ನೇ ಡೋಸ್‌:

ಉಳಿದಂತೆ 1.44 ಕೋಟಿ ಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ 5.11 ಕೋಟಿ ಜನರಲ್ಲಿ 1.44 ಕೋಟಿ ಮಂದಿ ಎರಡೂ ಡೋಸ್‌ ಲಸಿಕೆ ಪಡೆದಂತಾಗಿದ್ದು, ಒಟ್ಟು ಉದ್ದೇಶಿತ ಜನಸಂಖ್ಯೆಯ ಶೇ.28 ರಷ್ಟು ಮಂದಿಗೆ ಎರಡೂ ಡೋಸ್‌ ನೀಡಿದಂತಾಗಿದೆ. ಒಟ್ಟಾರೆ 18-44 ವರ್ಷದವರೆಗಿನ 2.01 ಕೋಟಿ ಮಂದಿಗೆ ಮೊದಲ ಡೋಸ್‌, 45.58 ಲಕ್ಷ ಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 1.54 ಕೋಟಿ ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. 86 ಲಕ್ಷ ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

ಉಳಿದಂತೆ 7.63 ಲಕ್ಷ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಮೊದಲ ಡೋಸ್‌, 6.35 ಲಕ್ಷ ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತರ ಪೈಕಿ 9.39 ಲಕ್ಷ ಮಂದಿಗೆ ಮೊದಲ ಡೋಸ್‌, 65.83 ಲಕ್ಷ ಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆಯಲ್ಲಿ ಕರ್ನಾಟಕ ದಾಖಲೆ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಲಸಿಕಾ ಉತ್ಸವದ ವೇಳೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 31 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಸರಾಸರಿ ಲಸಿಕೆ ನೀಡಿದ ಸಾಧನೆ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಅಲ್ಲದೆ, ಶುಕ್ರವಾರ ದೇಶದಲ್ಲಿ ಅತಿ ಹೆಚ್ಚು ಲಸಿಕೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ (4.09 ಲಕ್ಷ) ನೀಡಲಾಗಿದೆ. ಬೆಳಗಾವಿಯಲ್ಲಿ 2.57 ಲಕ್ಷ ಲಸಿಕೆ ನೀಡಲಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳು ರಾಜ್ಯಕ್ಕೆ ಬಂದಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶುಕ್ರವಾರ ದೇಶಾದ್ಯಂತ ನೀಡಿದ ಒಟ್ಟು ಲಸಿಕೆಯ ಶೇ.11ರಷ್ಟನ್ನು ರಾಜ್ಯದಲ್ಲೇ ನೀಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಪ್ರೋತ್ಸಾಹ ಮಹತ್ವದ್ದು. ಶುಕ್ರವಾರ 30 ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಶನಿವಾರ ಬೆಳಗ್ಗೆ 8.30ರ ವೇಳೆಗೆ 29,50,093 ಲಸಿಕೆ ನೀಡಿರುವುದಾಗಿ ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಾಗಿದೆ. ಇನ್ನೂ 1.68 ಲಕ್ಷ ಡೋಸ್‌ ಲಸಿಕೆ ನೀಡಿರುವುದು ದಾಖಲಾಗಬೇಕಿದ್ದು, ಒಟ್ಟು 31 ಲಕ್ಷ ಡೋಸ್‌ ಲಸಿಕೆ ನೀಡಿದಂತಾಗಿದೆ ಎಂದು ಹೇಳಿದರು.

ದೇಶದಲ್ಲೇ ಅತಿ ಹೆಚ್ಚು ಸರಾಸರಿ:

ಲಸಿಕೆಗೆ ಅರ್ಹರಾದ ಪ್ರತಿ 10 ಲಕ್ಷ ಜನಸಂಖ್ಯೆಗೆ ಹೆಚ್ಚು ಸರಾಸರಿ ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ 6,20,003 ಲಸಿಕೆ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. 14,401 ಲಸಿಕೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು, ಸರಾಸರಿ 205 ಲಸಿಕೆ ನೀಡಲಾಗಿದೆ. 14 ಜಿಲ್ಲೆಗಳು ಗುರಿಗಿಂತ ಅಧಿಕ ಸಾಧನೆ ಮಾಡಿವೆ. 4 ಜಿಲ್ಲೆಗಳು ಮಾತ್ರ ಗುರಿಯ ಶೇ.75ರಷ್ಟು ಸಾಧನೆ ಮಾಡಿವೆ ಎಂದರು.
ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ (4.09 ಲಕ್ಷ) ನೀಡಲಾಗಿದೆ. ಬೆಳಗಾವಿಯಲ್ಲಿ 2.57 ಲಕ್ಷ ಲಸಿಕೆ ನೀಡಲಾಗಿದೆ. ಜಿಲ್ಲಾಮಟ್ಟದ ಸಾಧನೆಯಲ್ಲಿ ಎರಡು ಸ್ಥಾನಗಳು ರಾಜ್ಯಕ್ಕೆ ಬಂದಿವೆ. ರಾಜ್ಯದಲ್ಲಿ ಒಟ್ಟು 14.96 ಲಕ್ಷ ಡೋಸ್‌ ಲಸಿಕೆಯನ್ನು ಮಹಿಳೆಯರು ಪಡೆದಿದ್ದು, ಪುರುಷರಿಗಿಂತ (14.53 ಲಕ್ಷ) ಮುಂದೆ ಇದ್ದಾರೆ ಎಂದು ಹೇಳಿದರು.

20 ದಿನದಲ್ಲಿ 1 ಕೋಟಿ ಲಸಿಕೆ:

ಎಲ್ಲಾ ಡೋಸ್‌ ಲಸಿಕೆ ಸೇರಿ ಈವರೆಗೆ ಒಟ್ಟು 5.17 ಕೋಟಿ ಲಸಿಕೆ ನೀಡಿದ್ದು, ಕಳೆದ 20 ದಿನಗಳಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. 1 ಕೋಟಿಗೂ ಹೆಚ್ಚು ಜನರಿಗೆ ಎರಡೂ ಡೋಸ್‌ ನೀಡಲಾಗಿದೆ ಎಂಬ ಹೆಗ್ಗಳಿಕೆ ಬಂದಿದೆ. ಕಲಬುರಗಿಯಲ್ಲಿ ಗುರಿಯಲ್ಲಿ ಕೇವಲ 41%, ಕೊಪ್ಪಳದಲ್ಲಿ 62%, ಉಡುಪಿಯಲ್ಲಿ 63% ಸಾಧನೆ ಆಗಿದೆ. ಬೆಂಗಳೂರು ನಗರದಲ್ಲಿ 143%, ಶಿವಮೊಗ್ಗದಲ್ಲಿ 134%, ಧಾರವಾಡ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ ಜಿಲ್ಲೆ 120% ಸಾಧನೆ ಮಾಡಿವೆ. ಗುರಿಗಿಂತ ಕಡಿಮೆ ಲಸಿಕೆಯಾಗಿರುವ ಕಡೆ ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ಕಡಿಮೆಯಾಗಿಲ್ಲ. ಲಸಿಕೆ ಕುರಿತು ಇರುವ ಗೊಂದಲ, ಭಯದಿಂದ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಅದನ್ನು ನಿವಾರಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೋವಿಡ್‌ ಲಸಿಕೆ ಪಡೆದ 4 ತಿಂಗಳಲ್ಲೇ ಪ್ರತಿಕಾಯ ಶಕ್ತಿ ಇಳಿಕೆ: ಅಧ್ಯಯನ!

ರಕ್ತ ಸಂಗ್ರಹ, ಅಂಗಾಂಗ ದಾನ:

ಶುಕ್ರವಾರ ರಾಜ್ಯದಲ್ಲಿಶಿಬಿರ ನಡೆದಿದ್ದು, ಒಟ್ಟು 5,201 ಯುನಿಟ್‌ ರಕ್ತ ಸಂಗ್ರಹವಾಗಿದೆ. ಬಿಬಿಎಂಪಿಯಲ್ಲಿ 1,240 ಯುನಿಟ್‌, ಬಳ್ಳಾರಿಯಲ್ಲಿ 298, ದಕ್ಷಿಣ ಕನ್ನಡದಲ್ಲಿ 295 ಯುನಿಟ್‌ ಸಂಗ್ರಹವಾಗಿದೆ. ಎರಡು ವಾರಗಳಲ್ಲಿ ಒಂದು ಲಕ್ಷ ಯುನಿಟ್‌ ರಕ್ತ ಸಂಗ್ರಹಿಸಬೇಕೆಂಬ ಗುರಿ ಇದ್ದು, ಇದಕ್ಕಾಗಿ ಸೂಚನೆ ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ಜನರಿಗೆ ರಕ್ತ ಬೇಕಿದೆ ಎಂದರು.

ವಿಷನ್‌ ವರದಿ:

ಆರೋಗ್ಯ ಕ್ಷೇತ್ರ ಸುಧಾರಣೆ ಕುರಿತು 250 ತಜ್ಞರು ಸೇರಿ ರೂಪಿಸಿದ ವಿಷನ್‌ ವರದಿಯನ್ನು ಮುಖ್ಯಮಂತ್ರಿಗಳ ಜತೆ ಪ್ರಧಾನಿಗಳಿಗೆ ನೀಡಿ ಅವರಿಂದ ಚಾಲನೆ ನೀಡಲಾಗುವುದು ಎಂದು ಹೇಳಿದರು.

3 ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ ಎಬಿ-ಎಕೆ ಕಾರ್ಡ್‌:

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ ಅನ್ನು ಪ್ರತಿ ಕುಟುಂಬಕ್ಕೆ ನೀಡಲು ಮುಂದಾಗಿದ್ದೇವೆ. ಮುಂದಿನ ಮೂರು ತಿಂಗಳಲ್ಲಿ ಎರಡೂವರೆ ಕೋಟಿ ಕುಟುಂಬಕ್ಕೆ ನೀಡುವ ಮೂಲಕ ಪ್ರತಿಯೊಂದು ಕುಟುಂಬಕ್ಕೂ ಕಾರ್ಡ್‌ ಒದಗಿಸಲಾಗುವುದು ಎಂದು ತಿಳಿಸಿದರು.

ಅಂಗಾಂಗ ದಾನವೂ ಹೆಚ್ಚಾಗಬೇಕಿದೆ. ಇದಕ್ಕಾಗಿ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ದಾನ ವಿಭಾಗ ಪ್ರಾರಂಭಿಸಲಾಗುವುದು. ಜೊತೆಗೆ ಮುಖ್ಯಮಂತ್ರಿಗಳಿಂದ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಿ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಹೇಳಿದರು.
 

click me!