ಬೆಂಗಳೂರು (ನ.26): ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ (Rain) ರೈತರು ಅಕ್ಷರಶಃ ಹೈರಾಣಾಗಿದ್ದು, ಕಣ್ಣೆದುರೇ ಬೆಳೆ ನಷ್ಟವಾಗಿದ್ದನ್ನು ಕಂಡು ದಿಕ್ಕು ತೋಚದೆ ಈವರೆಗೆ ಒಟ್ಟು 7 ಮಂದಿ ಆತ್ಮಹತ್ಯೆಗೆ (Farmers Suicide) ಶರಣಾಗಿದ್ದಾರೆ. ಬುಧವಾರ ಮಧ್ಯರಾತ್ರಿ ದಾವಣಗೆರೆ (Davanagere) ಜಿಲ್ಲೆಯಲ್ಲಿ ಇಬ್ಬರು ರೈತರು ನೇಣಿಗೆ ಕೊರಳೊಡ್ಡಿದ್ದಾರೆ. ಬೇಸಿಗೆಯಲ್ಲಿ ಬರ (Deought), ಬಳಿಕ ಸುರಿದ ಮುಂಗಾರು ಮಳೆ (Monsoon), ನಂತರ ನೆರೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದ ರೈತರು ಈಗಲಾದರೂ ಬೆಳೆ (Crops) ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅಕಾಲಿಕವಾಗಿ ಸುರಿದ ಮಳೆ ವಿವಿಧೆಡೆ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ. ಕಷ್ಟ ಪಟ್ಟು ಬೆಳೆದ ಭತ್ತ, ತೊಗರಿ, ಶುಂಠಿ, ಗೋವಿನ ಜೋಳ, ಈರುಳ್ಳಿ (onion) ಮೊದಲಾದ ಬೆಳೆಗಳು ನೀರುಪಾಲಾಗಿವೆ.
ಈ ಹಿನ್ನೆಲೆಯಲ್ಲಿ ನ.19ರಿಂದ ಮಂಗಳವಾರದವರೆಗೆ ವಿವಿಧೆಡೆ 5 ಮಂದಿ ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಬುಧವಾರ ಮಧ್ಯರಾತ್ರಿ ದಾವಣಗೆರೆ (Davanagere) ಜಿಲ್ಲೆಯಲ್ಲಿ ಮತ್ತೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಸಿದ್ದಪ್ಪ (60) ಹಾಗೂ ನ್ಯಾಮತಿ ತಾಲೂಕಿನ ಅರುಂಡಿ ಗ್ರಾಮದ ಷಣ್ಮುಖಪ್ಪ(47) ಆತ್ಮಹತ್ಯೆ ಮಾಡಿಕೊಂಡವರು. ಭತ್ತದ (Paddy) ಬೆಳೆ ಬೆಳೆದಿದ್ದ ಸಿದ್ದಪ್ಪ ಅದಕ್ಕಾಗಿ ಖಾಸಗಿ ಸಾಲ ಮಾಡಿಕೊಂಡಿದ್ದರು. ಈರುಳ್ಳಿ, ಟೊಮೆಟೋ (Tomato), ಹೂಕೋಸು, ಮೆಕ್ಕೆಜೋಳ ಬೆಳೆದ ಷಣ್ಮುಗಪ್ಪ ಎಸ್‌ಬಿಐನ (SBI) ನ್ಯಾಮತಿ ಶಾಖೆಯಲ್ಲಿ 5 ಲಕ್ಷ ರು. ಸಾಲ ಮಾಡಿದ್ದರು. ತೀವ್ರ ನೊಂದಿದ್ದ ಇಬ್ಬರೂ ರಾತ್ರಿ ಮನೆಯವರೆಲ್ಲ ಮಲಗಿದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹೊನ್ನಾಳಿ ಹಾಗೂ ನ್ಯಾಮತಿ ಪೊಲೀಸ್ ಠಾಣೆಗಳಲ್ಲಿ (Police Station) ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದಕ್ಕೂ ಮೊದಲು ನ.19ರಂದು ಉತ್ತರ ಕನ್ನಡ (Uttara kannada) ಜಿಲ್ಲೆಯ ಶಿರಸಿ ತಾಲೂಕು ನರೂರು ಗ್ರಾಮದ ಗಂಗಾಧರ ಫಕೀರಪ್ಪ ಶೇಷಣ್ಣನವರ (58), ನ.22ರಂದು ರಾಯಚೂರು ಜಿಲ್ಲೆಯ ಮುದಗಲ್‌ನ ಸಮೀಪದ ಭೋಗಾಪೂರ (ಬಯ್ಯಾಪುರದ ವೀರನಗೌಡ ಶೇಖರಗೌಡ ಮಾಲಿಪಾಟೀಲ್ (50), ಸಮೀಪದ ತುರಡಗಿ ಗ್ರಾಮದ ಸಿದ್ದಪ್ಪ ಗೋವಿಂದಪ್ಪ ಹರಿಜನ(50), ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಗೋವಿಂದ ಯಲ್ಲಪ್ಪ ಬಸರಿಕಟ್ಟಿ(38), ನ.24ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಈರಪ್ಪ ಬಸಪ್ಪ ಸಾದರ (37) ಆತ್ಮಹತ್ಯೆಗೆ ಶರಣಾಗಿದ್ದರು.
ನೀರು ನುಗ್ಗಿದ ಮನೆಗಳಿಗೆ 10 ಸಾವಿರ :
ಅಕಾಲಿಕ ಮಳೆಯಿಂದ (Rain) ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾಗಿರುವ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೋಮವಾರ ಬೆಳೆ ಹಾನಿ ಪರಿಶೀಲಿಸಿದರು. ರೈತರ (Farmers) ಜಮೀನುಗಳಿಗೆ (Farm land) ತೆರಳಿ ಪರಿಶೀಲನೆ ನಡೆಸಿದ ಅವರು ಮಳೆಯಿಂದಾಗಿ ತುಂಬಿದ, ಕಟ್ಟೆಯೊಡೆದ ಕೆರೆಗಳನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಹಾಳಾದ ಕೆರೆ ಏರಿ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ರುಪಾಯಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು. ಮಳೆಯಿಂದಾಗಿ ತೀವ್ರ ಹಾನಿಗೊಳಗಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಭಾನುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಈಗ ಕೋಲಾರ (Kolar) ತಾಲೂಕಿನ ನರಸಾಪುರ ಸುತ್ತಮುತ್ತ ಹಾಗೂ ಮುದುವಾಡಿ ಸಮೀಪ ಪರಿಶೀಲನೆ ನಡೆಸಿದರು.
ರೈತರ ಹೊಲಕ್ಕೆ ಬಳಿ ತೆರಳಿ ಹಾನಿ ಕುರಿತು ಮಾಹಿತಿ ವಿವರಣೆ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆರೆ ಏರಿ ದುರಸ್ತಿ, ಕಡಿತಗೊಂಡ ವಿದ್ಯುತ್ ದುರಸ್ತಿಗೆ ಸಂಬಂಧಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಹಾನಿ ಪ್ರದೇಶಗಳ ಸಂಪೂರ್ಣ ವೀಕ್ಷಣೆ ಬಳಿಕ ಪರಿಹಾರ ಮೊತ್ತದ ಬಗ್ಗೆ ತಿಳಿಸಿ ಭರವಸೆ ನೀಡಿದರು.
709 ಮನೆಗಳಿಗೆ ಹಾನಿ: ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ (Kolar District) ಒಬ್ಬರು ಮೃತಪಟ್ಟಿದ್ದು, 709 ಮನೆಗಳು ನೆಲಕ್ಕುರುಳಿವೆ. ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಭಾಗಶಃ ಮನೆ ಹಾನಿಯಾಗಿದ್ದರೆ .3 ಲಕ್ಷ ರು. ಪರಿಹಾರ ನೀಡಲು ಸೂಚಿಸಿದ್ದು,ಇಂದು ಸಂಜೆಯೊಳಗೆ ಮೊದಲ ಕಂತಾಗಿ ತಲಾ 1 ಲಕ್ಷ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮಳೆ ಹಾನಿ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ನಿಧಿಯಲ್ಲಿ 685 ಕೋಟಿ ಇದೆ ಎಂದು ತಿಳಿಸಿದರು.