ಕರ್ನಾಟಕದಲ್ಲಿ ಕೊರೋನಾ ಮಾಹಾಮಾರಿಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 7ಕ್ಕೇರಿಕೆ

By Suvarna News  |  First Published Apr 13, 2020, 9:50 PM IST
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯದ ಜನತೆಯನ್ನು ಆತಂಕಕ್ಕೀಡುಮಾಡಿದೆ. ಈ ನಡುವೆ ಈ ಮಾಹಾಮಾರಿ ಮತ್ತೊಂದು ಬಲಿ ಪಡೆದುಕೊಂಡಿದೆ.

ಕಲಬುರಗಿ, (ಏ.13): ಕರ್ನಾಟಕದಲ್ಲಿ ಮಾಹಾಮಾರಿ ಕೊರೋನಾಗೆ ಮತ್ತೊಂದು ಬಲಿಯಾಗಿದೆ. ಕಲಬುರಗಿಯಲ್ಲಿ 50 ವರ್ಷದ ವ್ಯಕ್ತಿಯ ಪ್ರಾಣವನ್ನು ನುಂಗಿದೆ.

ಕಲಬುರಗಿಯ ESI ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಇಂದು (ಸೋಮವಾರ) ಸಾವನ್ನಪ್ಪಿದ್ದಾರೆ. ಈ ಮೂಲಕ ಕಲಬುರಗಿಯಲ್ಲಿ ಮಾರಕ ಕೊರೋನಾ ಕಾಯಿಲೆಗೆ 3ನೇ ಸಾವಾಗಿದೆ.  

ಜನ ಮಾತು ಕೇಳದಿದ್ರೆ ಇನ್ನೇನು ಮಾಡೋಕಾಗುತ್ತೆ? ಕಲಬುರಗಿಯಲ್ಲಿ ಹೀಗೆ ಮಾಡೋದೆ!

ಜಮಾತ್‌ಗೆ ಹೋದವರ ಸಂಪರ್ಕದಲ್ಲಿದ್ದ ವ್ಯಕ್ತಿ ಏಪ್ರಿಲ್ 10 ರಂದು ಆಸ್ಪತ್ರೆಗೆ ದಾಖಲಾಗಿದ್ದನು. ಇನ್ನೂ ಈ ಸಾವಿನಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ ಮತ್ತಷ್ಟು ಹೈಅಲರ್ಟ್
ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೇ ಕಲಬುರಗಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ನಿಷೇಧಾಜ್ಞೆ ಯನ್ನು 2020ರ ಏಪ್ರಿಲ್ 30ರವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಕಲಬುರಗಿ ಜಿಲ್ಲೆಯಾದ್ಯಂತ 2020ರ ಮಾರ್ಚ್ 19ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 14ರ ರಾತ್ರಿ 8 ಗಂಟೆಯವರೆಗೆ ಒಟ್ಟು 26 ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಪರಿಸ್ಥಿತಿಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿಗಳು 2020ರ ಏಪ್ರಿಲ್ 30ರ ವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿದ್ದಾರೆ.

ನಿಷೇಧಾಜ್ಞೆ ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಚಲಿಸುವುದು ಮತ್ತು ಅನಾವಶ್ಯಕವಾಗಿ ಸಂಚರಿಸುವಂತಿಲ್ಲ ಮತ್ತು ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದು, ಈ ಆದೇಶ ಅಗತ್ಯ ಸೇವೆಗಳಿಗೆ ಅನ್ವಯವಾಗುವುದಿಲ್ಲ ಎಂದು ಡಿ.ಸಿ. ಶರತ್ ಬಿ. ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
click me!