ಹಾಸನದ ಹಾಸನಾಂಬ ದೇವರ ದರ್ಶನ ಹಾಗೂ ಟಿಕೆಟ್ ಮಾರಾಟದಿಂದ 6 ಕೋಟಿ ರೂ. ಹಣ ಸಂಗ್ರಹವಾಗಿದ್ದು, ಹುಂಡಿ ಎಣಿಕೆ ಕಾರ್ಯ ಈಗಷ್ಟೇ ಆರಂಭವಾಗಿದೆ.
ಹಾಸನ (ನ.16): ರಾಜ್ಯದ ಪವಾಡ ಸದೃಶ ದೇವರು ಎಂದೇ ಹೇಳುವ ಹಾಸನದ ಹಾಸನಾಂಬ ದೇವರ 2023ರ ಜಾತ್ರಾ ಮಹೋತ್ಸವದಲ್ಲಿ ಕೇವಲ 12 ದಿನಗಳಲ್ಲಿ ಹಾಸನಾಂಬ ದೇವರ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಬರೀಬ್ಬರಿ 6.15 ಕೋಟಿ ರೂ. ಆದಾಯ ಬಂದಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಈಗಷ್ಟೇ ಆರಂಭವಾಗಿದ್ದು, ಇಲ್ಲಿಯೂ ಕೋಟಿ ಕೋಟಿ ಹಣ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಡಳಿವು ಮಾಹಿತಿ ನೀಡಿದೆ.
ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಷ್ಟೇ ವಿದ್ಯುಕ್ತ ತೆರೆ ಬಿದ್ದಿದೆ. ಇದರ ಬೆನ್ನಲ್ಲಿಯೇ ಹಾಸನಾಂಬೆ ದೇವಾಲಯ ಆವರಣದಲ್ಲಿ ಗುರುವಾರ ಬೆಳಗ್ಗೆ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ 150ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಹಾಸನಾಂಬ ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಸನಾಂಬೆ, ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹುಂಡಿಯಲ್ಲಿರುವ ಹಣ ಎಣಿಕೆ ಕಾರ್ಯ ನಡೆಯುತ್ತಿದೆ.
2023ರ ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನ: ದೀಪ ಹಚ್ಚಿ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು
ಕಳೆದ 12 ದಿನಗಳ ಕಾಲ ನಡೆದ ಹಾಸನಾಂಬ ದೇವಿ ದರ್ಶನದಿಂದ ಸಂಗ್ರಹವಾಗಿದ್ದ ಹುಂಡಿ ಹಣವನ್ನು ಒಂದೊಂದೇ ಹುಂಡಿಗಳನ್ನು ಸುರಿದು ಎಣಿಕೆ ಕಾರ್ಯ ಮಾಡಲಾಗುತ್ತಿದೆ. ಇನ್ನು ಹುಂಡಿ ಎಣಿಕೆಗೂ ಮೊದಲೇ ಹಾಸನಾಂಬ ದೇವರ ದರ್ಶನ ಹಾಗೂ ಇತರೆ ವ್ಯವಸ್ಥೆಗಳಿಗೆ ಮಾಡಲಾಗಿದ್ದ ಟಿಕೆಟ್‌ಗಳ ಮಾರಾಟ ಮತ್ತು ಲಾಡು ಮಾರಾಟದಿಂದಲೇ ಹಾಸನಾಂಬ ದೇವಾಲಯಕ್ಕೆ ಬರೋಬ್ಬರು 6 ಕೋಟಿ 15ಲಕ್ಷ ರೂ. ಹಣ ಸಂಗ್ರಹವಾಗಿದೆ. ಇನ್ನು ಹುಂಡಿಯಿಂದಲೂ ಕೋಟ್ಯಾಂತರ ರೂ ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಬಾರಿ ಹಾಸನಾಂಬೆ ಇತಿಹಾಸದಲ್ಲೇ ದಾಖಲೆಯ ಆದಾಯ ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಬಾಗಿಲು ಮುಚ್ಚಿದ ಹಾಸನಾಂಬ ದೇಗುಲ: ಕಳೆದ 14 ದಿನಗಳಿಂದ (ನ.2ರಿಂದ ನ.15ರವರೆಗೆ) ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಪವಾಡ ಸದೃಶ ಹಾಸನಾಂಬ ದೇವಿಯ ಗರ್ಭಗುಡಿಯನ್ನು ಬುಧವಾರ ಮಧ್ಯಾಹ್ನ 12.23ಕ್ಕೆ ಗಣ್ಯರ ಸಮ್ಮುಖದಲ್ಲಿ ಮುಚ್ಚಲಾಯಿತು. ಈ ಮೂಲಕ 2023ರ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಹಾಸನಾಂಬ ದೇವಾಲಯಕ್ಕೆ ವಿವಿಐಪಿ ಶಿಷ್ಟಾಚಾರ ದರ್ಶನ ರದ್ದುಗೊಳಿಸಿದ ಜಿಲ್ಲಾಡಳಿತ
ರಾಜ್ಯದಲ್ಲಿ ಒಮ್ಮೆ ಹಚ್ಚಿದ ದೀಪ ಒಂದು ವರ್ಷದವರೆಗೆ ಪ್ರಜ್ವಲಿಸುತ್ತಾ ಉರಿಯುವಂತಹ ಪವಾಡಕ್ಕೆ ಪ್ರಸಿದ್ಧಿಯಾಗಿರುವ ಹಾಸನ ನಗರದ ಹಾಸನಾಂಬೆ ದೇವಸ್ಥಾನ ವರ್ಷಕ್ಕೆ ಕೇವಲ 15 ದಿನ ಮಾತ್ರ ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. ಇದೇ ವೇಳೆ ಹಾಸನಾಂಬ ಜಾತ್ರಾ ಮಹೋತ್ಸವವನ್ನೂ ನಡೆಸಲಾಗುತ್ತದೆ. ಇನ್ನು 2023ರ ಹಾಸನಾಂಬ ದೇವಿಯ ದರ್ಶನವು ನವೆಂಬರ್ 2ರಿಂದ ಆರಂಭವಾಗಿ ನವೆಂಬರ್ 15ರ ಮಧ್ಯಾಹ್ನ 12.23ಕ್ಕೆ ಮುಕ್ತಾಯವಾಗಿದೆ. ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ನೇತೃತ್ವದಲ್ಲಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು.