ಮನೆಯ ಸಾಕು ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ಸಂಬಂಧ ನಟ ದರ್ಶನ್ ಬುಧವಾರ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಇನ್ನೆಂದೂ ಇಂಥ ಘಟನೆ ಆಗದಂತೆ ನೋಳ್ಳುವೆ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರು (ನ.16): ಮನೆಯ ಸಾಕು ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ಸಂಬಂಧ ನಟ ದರ್ಶನ್ ಬುಧವಾರ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಇನ್ನೆಂದೂ ಇಂಥ ಘಟನೆ ಆಗದಂತೆ ನೋಡಿಕೊಳ್ಳುವೆ ಎಂದು ಭರವಸೆ ನೀಡಿದ್ದಾರೆ. ಸುಮಾರು 20 ನಿಮಿಷಗಳ ಕಾಲ ರಾಜರಾಜೇಶ್ವರಿನಗರ ಠಾಣೆ ಇನ್ಸ್‌ಪೆಕ್ಟರ್ ಅವರು ನಟ ದರ್ಶನ್ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ದರ್ಶನ್ ಅವರು, ‘ಇಂತಹ ಘಟನೆ ನಡೆಯಬಾರದಿತ್ತು. ನಮ್ಮ ಮನೆಯ ಸಹಾಯಕನಿಗೆ ಸೂಕ್ತ ತಿಳಿವಳಿಕೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರದಿಂದ ಇರುವಂತೆ ಸೂಚಿಸಿದ್ದೇನೆ.
ಅನಿರೀಕ್ಷಿತವಾಗಿ ನಡೆದ ಈ ಘಟನೆಗೆ ವಿಷಾದ ವ್ಯಕ್ತಪಡಿಸುವೆ’ ಎಂದು ನಟ ದರ್ಶನ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಅ.28ರಂದು ದರ್ಶನ್ ಪಕ್ಕದ ಮನೆಯ ಖಾಲಿ ಸೈಟ್‌ನಲ್ಲಿ ಅಮಿತಾ ಕಾರು ನಿಲ್ಲಿಸುವಾಗ, ದರ್ಶನ್ ಮನೆಯ ಕೆಲಸಗಾರರು ನಟನ ಸಾಕು ನಾಯಿ ಹಿಡಿದುಕೊಂಡಿದ್ದರು. ಆಗ ಪಾರ್ಕಿಂಗ್ ವಿಚಾರದಲ್ಲಿ ಅಮಿತಾ ಹಾಗೂ ಸಹಾಯಕರ ನಡುವೆ ಕೆಲಸಗಾರರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾಯಿಯು ಬಿಇಎಂಎಲ್ 5ನೇ ಹಂತದ ನಿವಾಸಿಯಾದ ಅಮಿತಾ ಜಿಂದಾಲ್ ಅವರಿಗೆ ಕಚ್ಚಿತ್ತು.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್‌ಗೆ ಪೊಲೀಸರ ನೋಟಿಸ್
ಈ ಘಟನೆ ಸಂಬಂಧ ಅಮಿತಾ ಅವರು ದೂರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ನಟ ದರ್ಶನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಖುದ್ದು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದರು. ದೂರುದಾರೆ ಅಮಿತಾ ಜಿಂದಾಲ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ಬಳಿಕ ದರ್ಶನ್ ಮನೆಯ ಸಹಾಯಕ ಹೇಮಂತ್ ಎಂಬಾತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ನ,11ರಂದು ನಟ ದರ್ಶನ್‌ಗೆ ನೋಟಿಸ್ ಜಾರಿ ಮಾಡಿ ಮೂರು ದಿನಗಳೊಳಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.