
ಬೆಂಗಳೂರು(ಜೂ.13): ಹೊಸ ಬಾಡಿಗೆದಾರರು ಮತ್ತು ಹೊಸ ಮನೆ ಕಟ್ಟಿದವರಿಗೂ ಗೃಹಜ್ಯೋತಿ ಯೋಜನೆ ದೊರಕಲಿದ್ದು, ಮಾಸಿಕ 53 ಯುನಿಟ್ ಜತೆಗೆ ಶೇ.10ರಷ್ಟು ಉಚಿತ ವಿದ್ಯುತ್ ಲಭ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಜತೆ ಹೊಸ ಬಾಡಿಗೆದಾರರು ಮತ್ತು ಹೊಸಮನೆ ಕಟ್ಟಿದವರಿಗೆ ಯೋಜನೆಯ ಪ್ರಯೋಜನ ಕಲ್ಪಿಸುವ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸದಾಗಿ ಮನೆ ನಿರ್ಮಿಸಿದವರಿಗೆ, ಹೊಸ ಬಾಡಿಗೆದಾರರಿಗೆ ಸರಾಸರಿ 53 ಯುನಿಟ್ ಜತೆಗೆ ಹೆಚ್ಚುವರಿಯಾಗಿ ಶೇ.10ರಷ್ಟು ಯುನಿಟ್ ಬಳಕೆಯ ಮಿತಿಯನ್ನು ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಒಟ್ಟು 58 ಯುನಿಟ್‌ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವರ್ಷದವರೆಗೆ ಲೆಕ್ಕ ಸಿಗದವರಿಗೆ ಇದು ಅನ್ವಯವಾಗಲಿದೆ. 12 ತಿಂಗಳ ನಂತರ ಸರಾಸರಿಯನ್ನು ತೆಗೆದುಕೊಂಡು ಹೊಸ ಸರಾಸರಿ ನಿಗದಿ ಮಾಡಲಾಗುವುದು. ಅಲ್ಲಿಯವರೆಗೆ 53 ಯುನಿಟ್ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ಬಳಕೆಯ ಮಿತಿ ಇರಲಿದೆ. ವರ್ಷದ ಬಳಿಕ ಸರಾಸರಿಯನ್ನು ಗಮನಿಸಿ ಅವರಿಗೂ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.
ಬಾಡಿಗೆ ಮನೆಯವರಿಗಿಲ್ಲ ಉಚಿತ ವಿದ್ಯುತ್?: ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಪ್ರಕಟ
200 ಯುನಿಟ್ ಉಚಿತ ವಿದ್ಯುತ್ ಷರತ್ತು ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ನಮ್ಮ ಉಚಿತ ಕೊಡುಗೆ ವಿರುದ್ಧ ಇದ್ದಾರೆ. ಅವರಿಗೆ ಪ್ರಶ್ನಿಸುವ ಹಕ್ಕಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ರಾಜ್ಯದಲ್ಲಿ ಮುಂಗಾರು ತಡವಾಗಿದ್ದರೂ, ಆಗಸ್ಟ್ ತಿಂಗಳವರೆಗೆ ಕಾಲಾವಕಾಶ ಇದೆ. ಮಳೆ ಪೂರ್ಣ ಪ್ರಮಾಣದಲ್ಲಿ ಸುರಿಯಲಿದೆ ಎಂಬ ವಿಶ್ವಾಸ ಇದೆ. ಇನ್ನು, ಸೌರಶಕ್ತಿ ಮತ್ತು ಪವನಶಕ್ತಿ ಬಳಕೆಯಾಗುತ್ತಿದೆ ಎಂದರು.
ದರ ಏರಿಕೆ ಕಾಂಗ್ರೆಸ್ ಸರ್ಕಾರದ್ದಲ್ಲ:
ವಿದ್ಯುತ್ ದರ ಏರಿಕೆ ತೀರ್ಮಾನವು ಕಾಂಗ್ರೆಸ್ ಸರ್ಕಾರದ್ದಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಾಗಿದ್ದು, ಈಗ ನಾವು ಜಾರಿ ಮಾಡುತ್ತಿದ್ದೇವೆ ಎಂದು ಸಚಿವ ಜಾರ್ಜ್ ಸ್ಪಷ್ಟನೆ ನೀಡಿದರು.
ಕೆಇಆರ್‌ಸಿ ದರ ಏರಿಕೆ ಮಾಡಿರುವುದನ್ನು ಜಾರಿ ಮಾಡಲೇಬೇಕಾಗುತ್ತದೆ. ವಿದ್ಯುತ್ ದರವನ್ನು ಕೆಇಆರ್‌ಸಿ ಯುನಿಟ್‌ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿದೆ. ಜತೆಗೆ ಸ್ಲಾ್ಯಬ್‌ಗಳಲ್ಲೂ ಬದಲಾವಣೆ ಮಾಡಿದೆ. ಮೊದಲು ಮೂರು ಹಂತದಲ್ಲಿ ಸ್ಲಾ್ಯಬ್ ಇತ್ತು. ಈಗ ಎರಡು ಹಂತದಲ್ಲಿ ಸ್ಲಾ್ಯಬ್ ಮಾಡಲಾಗಿದೆ. 100 ಯುನಿಟ್ ಬಳಕೆ ನಂತರ ಏಳು ರು. ದರ ವಿಧಿಸಲಾಗುತ್ತಿದ್ದು, 200 ಯುನಿಟ್ ದಾಟಿದ ಬಳಿಕ 8.20 ರು. ವಿಧಿಸಲಾಗುತ್ತಿದೆ. ದರ ಏರಿಕೆಯಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಕೆಇಆರ್‌ಸಿ ಮುಂದೆ ಪರಿಶೀಲನೆ ಬಗ್ಗೆ ಅರ್ಜಿ ಸಲ್ಲಿಸುವ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ವರ್ಗಾವಣೆಗೆ ಹಣ ಕೇಳಿದರೆ ದೂರು ನೀಡಿ
ಇಂಧನ ಇಲಾಖೆಗೆ ಸಂಬಂಧಿಸಿದಂತೆ ನೌಕರರ ವರ್ಗಾವಣೆಗೆ ಹಣ ಕೇಳಿದರೆ ನನಗೆ ದೂರು ನೀಡಿ ಎಂದು ಖುದ್ದು ಸಚಿವರೇ ತಿಳಿಸಿದ್ದಾರೆ.
ಫ್ರೀ ವಿದ್ಯುತ್ ತಲೆಬಿಸಿ ಮಧ್ಯೆ ದರ ಏರಿಸಿ ಮೆಸ್ಕಾಂ ಶಾಕ್!
ವರ್ಗಾವಣೆಗೆ ದರ ನಿಗದಿ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವು ಸತ್ಯಕ್ಕೆ ದೂರವಾದುದು. ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ. ಕೆಲವರು ನನ್ನ ಅಥವಾ ಅಧಿಕಾರಿಗಳ ಹೆಸರು ಹೇಳಿ ವರ್ಗಾವಣೆಗೆ ಹಣ ಕೇಳಿದರೆ ಆ ಬಗ್ಗೆ ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಲವೊಮ್ಮೆ ಹೊರಗಡೆ ಏನಾಗುತ್ತದೆ ಎಂಬುದು ನನಗೆ ಗೊತ್ತಾಗಲ್ಲ. ಹೀಗಾಗಿ ಯಾರೇ ವರ್ಗಾವಣೆಗೆ ಹಣ ಕೇಳಿದರೂ ಅದನ್ನು ನನ್ನ ಗಮನಕ್ಕೆ ತಂದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮಾಸಿಕ 53 ಯುನಿಟ್ ಜತೆ 10% ಹೆಚ್ಚುವರಿ
ಹೊಸ ಬಾಡಿಗೆದಾರರು ಮತ್ತು ಹೊಸ ಮನೆ ಕಟ್ಟಿದವರಿಗೂ ಗೃಹಜ್ಯೋತಿ ಯೋಜನೆಯ ಲಾಭ ದೊರೆಯಲಿದೆ. ಮಾಸಿಕ 53 ಯುನಿಟ್ ಜತೆಗೆ ಶೇ.10ರಷ್ಟು ಉಚಿತ ವಿದ್ಯುತ್ ಲಭ್ಯವಾಗಲಿದೆ ಅಂತ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ