* ಕೈದಿಗಳಿಗೆ ಲಸಿಕೆ ಅಭಿಯಾನ ಆರಂಭಿಸಿದ ಬಂದೀಖಾನೆ ಇಲಾಖೆ
* ಮೊದಲ ಡೋಸ್ ಲಸಿಕೆ ಪಡೆದ 45 ವರ್ಷ ಮೇಲ್ಪಟ್ಟ ಸುಮಾರು 2500 ಕೈದಿಗಳು
* 18 ವರ್ಷ ಮೇಲ್ಪಟ್ಟ ಸಜಾ ಬಂಧಿಗಳಿಗೆ ಲಸಿಕೆ
ಬೆಂಗಳೂರು(ಮೇ.31): ಸೆರೆಮನೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳಿಗೆ ಲಸಿಕೆ ಅಭಿಯಾನವನ್ನು ರಾಜ್ಯ ಬಂದೀಖಾನೆ ಇಲಾಖೆ ಕೈಗೊಂಡಿದ್ದು, ಸುಮಾರು 50 ಸಾವಿಕ್ಕೂ ಹೆಚ್ಚು ಕೈದಿಗಳು ಲಸಿಕೆ ಪಡೆಯಲಿದ್ದಾರೆ.
ಈ ಸಂಬಂಧ ಭಾನುವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ಬಂದೀಖಾನೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು, ಜೈಲುಗಳಲ್ಲಿ ಸಜಾ ಮತ್ತು ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
undefined
ಲಸಿಕೆ ನೀಡಲು ಸರ್ಕಾರಿ ಕ್ಲಿನಿಕ್‌ಗಳು, ಖಾಸಗಿ ವೆಚ್ಚವೂ ಸರ್ಕಾರದ್ದೇ!
ಕೇಂದ್ರ ಕಾರಾಗೃಹ ಸೇರಿದಂತೆ ಎಲ್ಲ ಕಾರಾಗೃಹಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜೈಲುಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಬಂಧಿಗಳಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ 45 ವರ್ಷ ಮೇಲ್ಪಟ್ಟ ಸುಮಾರು 2500 ಕೈದಿಗಳು ಮೊದಲ ಡೋಸ್ ಪಡೆದಿದ್ದಾರೆ. ಈಗ 18 ವರ್ಷ ಮೇಲ್ಪಟ್ಟ ಸಜಾ ಬಂಧಿಗಳಿಗೆ ಲಸಿಕೆ ಹಾಕಿಸಲಾಗುತ್ತಿದೆ. ಈ ಅಭಿಯಾನವನ್ನು ಸ್ಥಳೀಯ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸಹಕಾರದಲ್ಲಿ ನಡೆಸಲಾಗುತ್ತಿದೆ ಎಂದು ಅಲೋಕ್ ಮೋಹನ್ ಮಾಹಿತಿ ನೀಡಿದರು.
ಲಸಿಕೆ ಲಭ್ಯತೆ ಮೇರೆಗೆ ಪ್ರತಿ ದಿನ ಇಂತಿಷ್ಟು ಕೈದಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ 50 ಸಾವಿರ ಕೈದಿಗಳಿಗೆ ಲಸಿಕೆ ಸಿಗಲಿದೆ ಎಂದು ಡಿಜಿಪಿ ತಿಳಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona