
ಬೆಂಗಳೂರು (ಜೂ.13) ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಗೆ ಎಲ್ಲೆಡೆ ಮಹಿಳೆಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ದಿನವಾದ ಸೋಮವಾರವೂ ಬಹುತೇಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಎಂದಿಗಿಂತ ಹೆಚ್ಚಾಗಿದ್ದು ಕಂಡುಬಂದಿದೆ.
ಯೋಜನೆ ಜಾರಿಗೊಂಡ ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1ರಿಂದ ರಾತ್ರಿ 12 ಗಂಟೆವರೆಗೆ ರಾಜ್ಯಾದ್ಯಂತ 5.71 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಇವರ ಪ್ರಯಾಣದ ಮೌಲ್ಯ 1.40 ಕೋಟಿ ರು.ಗಳಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಚಿಕ್ಕಮಗಳೂರಿನಲ್ಲಿ ಉಚಿತ ಬಸ್ ಸೇವೆಗೆ ಭರ್ಜರಿ ರೆಸ್ಪಾನ್ಸ್, 10ಸಾವಿರಕ್ಕೂ ಅಧಿಕ ಮಹಿಳೆಯರ ಪ್ರಯಾಣ
ಈ ನಡುವೆ ರಾಜ್ಯದ ಹಲವೆಡೆ ಗುರುತಿನ ಪತ್ರ(ಐಡಿ ಪ್ರೂಫ್) ವಿಚಾರಕ್ಕೆ ಬಸ್ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರ ನಡುವೆ ಮಾತಿನ ಚಕಮಕಿ, ಗಲಾಟೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳನ್ನು ಮೂಲ ರೂಪ ಅಥವಾ ಡಿಜಿಲಾಕರ್ ಮುಖಾಂತರ ಹಾಜರುಪಡಿಸಬೇಕು ಎಂದು ತಿಳಿಸಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಿದೆ.
ಮಹಿಳೆಯರು ಪ್ರಯಾಣದ ಸಮಯದಲ್ಲಿ ಆಧಾರ್, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅವುಗಳ ಅಂಗಸಂಸ್ಥೆಗಳು ನೀಡಿರುವ ಗುರುತಿನ ಚೀಟಿಗಳ ಮೂಲ ಅಥವಾ ನಕಲು ಇಲ್ಲವೇ ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್‌್ಟಕಾಪಿ) ಮಾದರಿಯಲ್ಲಿ ಹಾಜರುಪಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿ ಗೊಂದಲಗಳಿಗೆ ತೆರೆ ಎಳೆದಿದೆ.
ಉಚಿತ ಪ್ರಯಾಣ:
ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ರವರೆಗೆ ರಾಜ್ಯಾದ್ಯಂತ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ 1,93,831 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು ಅದರ ಮೌಲ್ಯ 58,16,178 ರು.ಗಳಾಗಿವೆ. ಬಿಎಂಟಿಸಿ ಬಸ್‌ನಲ್ಲಿ 2,01,215 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 26,19,604 ರು.ಗಳಾಗಿವೆ. ವಾಯವ್ಯ ಸಾರಿಗೆ ಬಸ್‌ಗಳಲ್ಲಿ 1,22,354 ಮಹಿಳೆಯರು ಪ್ರಯಾಣ ಮಾಡಿದ್ದು, ಪ್ರಯಾಣದ ಮೌಲ್ಯ 36,17,096 ರು.ಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳಲ್ಲಿ 53,623 ಮಹಿಳೆಯರು ಪ್ರಯಾಣಿಸಿದ್ದು ಒಟ್ಟು ಪ್ರಯಾಣದ ಮೌಲ್ಯ 19.70 ಲಕ್ಷ ರು.ಗಳಾಗಿವೆ. ಒಟ್ಟು 5,71,023 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 1,40,22,878 ರು.ಗಳೆಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ