ಬೆಟ್ಟ ಕೊರೆದು ರೆಸಾರ್ಟ್ ಮಾಡಲು ಯತ್ನ ಆರೋಪ; ಭೂಕುಸಿತದ ಆತಂಕ

By Ravi Janekal  |  First Published Jun 12, 2023, 11:43 PM IST

ಕೊಡಗು ಜಿಲ್ಲೆಯಲ್ಲಿ 2018 ರಿಂದಲೂ ಭಾರೀ ಭೂಕುಸಿತ, ಪ್ರವಾಹ ಎದುರಾಗುತ್ತಿದೆ. ಅದಕ್ಕೆ ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯವೇ ಮುಖ್ಯ ಕಾರಣ ಎಂದು ಈಗಾಗಲೇ ಭೂವಿಜ್ನಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಮಡಿಕೇರಿ (ಜೂ.12): ಕೊಡಗು ಜಿಲ್ಲೆಯಲ್ಲಿ 2018 ರಿಂದಲೂ ಭಾರೀ ಭೂಕುಸಿತ, ಪ್ರವಾಹ ಎದುರಾಗುತ್ತಿದೆ. ಅದಕ್ಕೆ ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯವೇ ಮುಖ್ಯ ಕಾರಣ ಎಂದು ಈಗಾಗಲೇ ಭೂವಿಜ್ನಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. 

Tap to resize

Latest Videos

undefined

ಇಷ್ಟಾಗಿಯೂ ಜಿಲ್ಲಾ ಕೇಂದ್ರ ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಅಪ್ಪರಾವ್ ಮತ್ತು ಸುಬ್ಬಯ್ಯಮ್ಮ ಎಂಬುವರು ಬೆಂಗಳೂರಿನ ರಿಯಲ್ ಎಸ್ಟೇಟ್ (ಪಟೇಲ್ ರಿಯಲ್ ಎಸ್ಟೇಟ್ ವೆಂಚರ್ಸ್) ಸಂಸ್ಥೆಯೊಂದಿಗೆ ಜಾರು ಬಂಡಿಯಂತಿರುವ ಕಡಿದಾದ ಬೆಟ್ಟ ಪ್ರದೇಶದಲ್ಲಿ ರೆಸಾರ್ಟ್ ಮಾಡಲು ಮುಂದಾಗಿರುವ ಆರೋಪ ಕೇಳಿ ಬಂದಿದೆ. ಬರೋಬ್ಬರಿ 35 ಎಕರೆ ಬೆಟ್ಟ ಪ್ರದೇಶವನ್ನು ದೇವಯ್ಯ ಎಂಬುವರಿಂದ 2007 ರಲ್ಲಿಯೇ ಖರೀದಿಸಿರುವ ಸಂಸ್ಥೆಯೂ ಈ ಜಾಗವನ್ನು 2016 ರಲ್ಲಿ ಭೂಪರಿವರ್ತನೆ ಮಾಡಿಸಿಕೊಂಡಿದೆ. ನಂತರ ಇದೇ ವರ್ಷದಲ್ಲಿ ಇಲ್ಲಿ ಬಡಾವಣೆ ನಿರ್ಮಿಸಿರುವುದಾಗಿ ಹೇಳಿ ಒಪ್ಪಿಗೆ ಕೇಳಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. 

Shakti Scheme: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಕಿರಿಕಿರಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ

ಹಲವು ಬಾರಿ ಸಭೆ ನಡೆಸಿದ ಮುಡಾ ಕೊನೆಗೂ ಹಲವು ಷರತ್ತುಗಳನ್ನು ವಿಧಿಸಿ 2020 ರಲ್ಲಿ ತಾತ್ಕಾಲಿಕ ಒಪ್ಪಿಗೆಯನ್ನು ಸೂಚಿಸಿದೆ. ಇದನ್ನೇ ಬಳಸಿಕೊಂಡ ರಿಯಲ್ ಎಸ್ಟೇಟ್ ಸಂಸ್ಥೆ ಬೃಹತ್ ಇಟಾಚಿ, ಜೆಸಿಬಿಗಳನ್ನು ಬಳಸಿ ಕಡಿದಾದ ಹಲವು ಬೆಟ್ಟಗಳನ್ನು ಮನಸ್ಸೋ ಇಚ್ಛೆ ಕೊರೆದು ರಸ್ತೆಗಳನ್ನು ನಿರ್ಮಿಸಿದೆ. 

2016 ರಲ್ಲಿ ಇಲ್ಲಿ ಬಡಾವಣೆ ನಿರ್ಮಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರೂ, ಈಗ ಇಲ್ಲಿ ಮಾಡಿರುವ ಕಾಮಗಾರಿಯನ್ನು ನೋಡಿದರೆ ಇದು ಲೇಔಟಿಗೆ ಅಲ್ಲವೇ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬಡಾವಣೆ ನಿರ್ಮಿಸುತ್ತಾರೋ, ಇಲ್ಲ ರೆಸಾರ್ಟ್ ಮಾಡುತ್ತಾರೋ. ಆದರೆ ಈ ಬೃಹತ್ ಬೆಟ್ಟಗಳನ್ನು ಕೊರೆದಿರುವುದರಿಂದ ಭೂಕುಸಿತವಾಗುವ ಆತಂಕ ಎದುರಾಗಿದೆ. 

ಬೆಟ್ಟವನ್ನು ಕೊರೆದು ಪ್ರಕೃತಿಯ ಮೇಲೆ ನಡೆಸಿರುವ ಈ ದೌರ್ಜನ್ಯದ ಭೀಕರತೆಯನ್ನು ಗಮನಿಸಿದ ನಿವೃತ ಏರ್ ಮಾರ್ಷಲ್ ಕಾರ್ಯಪ್ಪ ಅವರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಬೃಹತ್ ಘಾತ್ರದ ಯಂತ್ರಗಳಿಂದ ಬೆಟ್ಟಗಳನ್ನು ಕೊರೆದು ಭೂಕುಸಿತವಾಗುವುದಕ್ಕೆ ಕಾರಣವಾಗಿದೆ. ಜೊತೆಗೆ ಅಲ್ಲಿ ಓಡಾಡುವುದಕ್ಕೂ ಕಷ್ಟವಾಗುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ. 

ಬಡಾವಣೆ ನಿರ್ಮಿಸುವ ಹೆಸರಿನಲ್ಲಿ ಒಂದೆಡೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಮತ್ತೊಂದೆಡೆ ಅಪಾರ ಪ್ರಮಾಣದ ಮರಗಳನ್ನು ಅಕ್ರಮವಾಗಿ ತೆರವು ಮಾಡಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಕೊಡಗು ಸಿಸಿಎಫ್ ಕೆ.ಎನ್ ಮೂರ್ತಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಜೊತೆಗೆ ಅರಣ್ಯ ಇಲಾಖೆ ಸಂಸ್ಥೆಯ ವಿರುದ್ಧ ವನ್ಯ ಸಂಪತ್ತು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದೆ. 

ಸದ್ಯ ಸ್ಥಳದಲ್ಲಿ ಮರಗಳನ್ನು ತೆರವು ಮಾಡಿದ್ದ ಇಟಾಚಿಯನ್ನು ವಶಕ್ಕೆ ಪಡೆದಿದೆ. ಬಡಾವಣೆ ನಿರ್ಮಾಣಕ್ಕಾಗಿ ತಾತ್ಕಾಲಿಕ ಒಪ್ಪಿಗೆ ನೀಡಿದ್ದ ನಗರಾಭಿವೃದ್ಧಿಯ ಆಯುಕ್ತೆ ನಯನ ನಾಯಕ್ ಅವರು ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. 

ಮಳೆಗಾಲ ಆರಂಭ: ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ ಎನ್‌ಡಿಆರ್‌ಎಫ್‌ ತಂಡ

ಇಷ್ಟೊಂದು ಅಪಾಯಕಾರಿಯಾಗಿರುವ ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹೇಗೆ ಭೂಪರಿವರ್ತನೆ ಮಾಡಿದರು. 2016 ರಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆ ನಿರ್ಮಾಣಕ್ಕೆ ಹೇಗೆ ಅವಕಾಶ ನೀಡಿತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಎಲ್ಲರೂ ಸೇರಿ ಮಾಡಿರುವ ಎಡವಟ್ಟಿಗೆ ಅಲ್ಲಿ ಭೀಕರ ಭೂಕುಸಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಮೀಪದಲ್ಲಿಯೇ ಇರುವ ಹಲವು ಕುಟುಂಬಗಳು ಆತಂಕಕ್ಕೆ ಒಳಗಾಗುವಂತೆ ಆಗಿದೆ.

click me!