ಡಿಸೆಂಬರೊಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್‌’: ಸಚಿವ ಸುಧಾಕರ್‌

By Govindaraj SFirst Published Oct 7, 2022, 7:40 AM IST
Highlights

ರಾಜಧಾನಿ ಬೆಂಗಳೂರಿನ 243 ‘ನಮ್ಮ ಕ್ಲಿನಿಕ್‌’ ಸೇರಿದಂತೆ ರಾಜ್ಯದ 438 ನಮ್ಮ ಕ್ಲಿನಿಕ್‌ಗಳು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15ರ ವೇಳೆಗೆ ಕಾರ್ಯಾರಂಭಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬೆಂಗಳೂರು (ಅ.07): ರಾಜಧಾನಿ ಬೆಂಗಳೂರಿನ 243 ‘ನಮ್ಮ ಕ್ಲಿನಿಕ್‌’ ಸೇರಿದಂತೆ ರಾಜ್ಯದ 438 ನಮ್ಮ ಕ್ಲಿನಿಕ್‌ಗಳು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15ರ ವೇಳೆಗೆ ಕಾರ್ಯಾರಂಭಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಗುರುವಾರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ದೇವಸ್ಥಾನದ ಸಮೀಪದಲ್ಲಿ ಸಿದ್ಧಪಡಿಸಿರುವ ನಮ್ಮ ಕ್ಲಿನಿಕ್‌ ಮಾದರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಕಾರ್ಯ ನಿರ್ವಹಿಸಲಿದೆ. 

ಪ್ರತಿ ವಾರ್ಡ್‌ನಲ್ಲಿ ಒಂದು ಕ್ಲಿನಿಕ್‌ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದೆ. ನಮ್ಮ ಕ್ಲಿನಿಕ್‌ನಲ್ಲಿ ವೈದ್ಯ, ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಡಿ ಗ್ರೂಪ್‌ನ ತಲಾ ಒಬ್ಬ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು. ಬಿಬಿಎಂಪಿ ವ್ಯಾಪ್ತಿಯ ಕ್ಲಿನಿಕ್‌ಗಳಿಗೆ 160 ವೈದ್ಯರು ಈಗಾಗಲೇ ನೇಮಕ ಆಗಿದ್ದಾರೆ. ಉಳಿದ ಎಲ್ಲಾ ಸಿಬ್ಬಂದಿ ಹುದ್ದೆ ತುಂಬಿದೆ. ಬಾಕಿ ಉಳಿದ 83 ವೈದ್ಯರ ನೇಮಕಕ್ಕೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ. ಹತ್ತು ದಿನಗಳೊಳಗೆ ಇದು ಕೂಡ ಆಗಲಿದೆ ಎಂದು ಮಾಹಿತಿ ನೀಡಿದರು. ನಿಯಮ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 

ಸಿದ್ದರಾಮಯ್ಯ ಅವರಷ್ಟು ನಾನು ಬುದ್ಧಿವಂತನಲ್ಲ: ಸಚಿವ ಸುಧಾಕರ್

ಆದರೆ, ನಗರ ಪ್ರದೇಶಗಳಲ್ಲಿ ಇದು ಕಡಿಮೆ ಇದೆ. ಆದ್ದರಿಂದಲೇ ನಮ್ಮ ಕ್ಲಿನಿಕ್‌ ಆರಂಭಿಸಲಾಗುತ್ತಿದೆ. ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಹೆಚ್ಚಾಗಿವೆ. ಅದಕ್ಕೆ ಅನುಗುಣವಾಗಿ ಕ್ಲಿನಿಕ್‌ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು. ಸರ್ಕಾರಿ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 1,000-1,200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕ್ಲಿನಿಕ್‌ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಿಬ್ಬಂದಿಯ ವೇತನಕ್ಕೆ 138 ಕೋಟಿ ರು. ಸೇರಿದಂತೆ ಒಟ್ಟು 155 ಕೋಟಿ ರು. ವೆಚ್ಚವಾಗಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮೊದಲಾದವುಗಳ ಕುರಿತು ಕ್ಲಿನಿಕ್‌ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಏನಿದು?
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚಿಕಿತ್ಸೆ ನೀಡಲಿರುವ ಕೇಂದ್ರಗಳು
- ವೈದ್ಯ, ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ಗ್ರೂಪ್‌ ಸಿಬ್ಬಂದಿ ಕ್ಲಿನಿಕ್‌ನಲ್ಲಿ ಇರಲಿದ್ದಾರೆ
- ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಜನರು ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಬಹುದು
- ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಕುರಿತೂ ಈ ಕೇಂದ್ರಗಳಲ್ಲಿ ಜಾಗೃತಿ'

ರಾಜ್ಯೋತ್ಸವಕ್ಕೆ ಎಲ್ಲಾ ನಮ್ಮ ಕ್ಲಿನಿಕ್‌ ಕಾರ್ಯಾರಂಭ: ನಗರ ವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ‘ನಮ್ಮ ಕ್ಲಿನಿಕ್‌’ಗಳು ‘ಕನ್ನಡ ರಾಜ್ಯೋತ್ಸವ’ಕ್ಕೆ ಬಿಬಿಎಂಪಿಯ ಎಲ್ಲಾ 243 ವಾರ್ಡ್‌ಗಳಲ್ಲಿ ಕಾರ್ಯಾರಂಭಕ್ಕೆ ಭರದ ಸಿದ್ಧತೆ ನಡೆದಿದೆ. ಬೆಂಗಳೂರಿನ ಎಲ್ಲ 243 ವಾರ್ಡ್‌ ಸೇರಿದಂತೆ ರಾಜ್ಯದ ಒಟ್ಟು 438 ಕಡೆ ನಮ್ಮ ಕ್ಲಿನಿಕ್‌ ಆರಂಭಿಸುವುದಾಗಿ ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸವಿ ನೆನಪಿಗಾಗಿ ಜುಲೈ 28ರಂದು ಪ್ರಾಯೋಗಿಕವಾಗಿ ಬೆಂಗಳೂರಿನ ಎರಡು ತಾಣಗಳಲ್ಲಿ ಕ್ಲಿನಿಕ್‌ ಆರಂಭವಾಗಿದ್ದು, ಉಳಿದ ವಾರ್ಡ್‌ಗಳಲ್ಲಿ ‘ಕನ್ನಡ ರಾಜ್ಯೋತ್ಸವ’ಕ್ಕೆ ಆರಂಭಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಮುಂದೆ ಷರತ್ತುಗಳನ್ನಿಟ್ಟ ಹೋರಾಟಗಾರರು

ಇನ್ನೂ 43 ಡಾಕ್ಟರ್‌ ಕೊರತೆ: ಬಿಬಿಎಂಪಿಯು ನಮ್ಮ ಕ್ಲಿನಿಕ್‌ಗೆ ಡಾಕ್ಟರ್‌, ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ಗ್ರೂಪ್‌ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ಈ ವೇಳೆ 160 ಡಾಕ್ಟರ್‌ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 43 ಮಂದಿ ಡಾಕ್ಟರ್‌ ಅವಶ್ಯಕತೆ ಇದ್ದು, ಮತ್ತೊಂದು ಬಾರಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು. ಉಳಿದಂತೆ 243 ನಮ್ಮ ಕ್ಲಿನಿಕ್‌ಗೆ ತಲಾ ಒಬ್ಬರಂತೆ ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಹಾಗೂ ಡಿ ಗ್ರೂಪ್‌ ಸಿಬ್ಬಂದಿ ನೇಮಕಾತಿ ಅಂತಿಮಗೊಳಿಸಲಾಗಿದೆ. ಗುರುವಾರದಿಂದ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!