ರಾಜ್ಯಕ್ಕೆ ಬರಬೇಕಾದ ಕೇಂದ್ರದ ಹಣದಲ್ಲಿ 40000 ಕೋಟಿ ಇಳಿಕೆ

By Kannadaprabha NewsFirst Published Dec 8, 2023, 6:38 AM IST
Highlights

ರಾಜ್ಯದ 2017-18 ಬಜೆಟ್‌ಗೆ ಹೋಲಿಸಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಜಿಎಸ್‌ಟಿ ಪರಿಹಾರ ಈಗ 40 ಸಾವಿರ ಕೋಟಿ ರು. ಕಡಿಮೆಯಾಗಿದ್ದು, ಇದರಿಂದ ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನ ಪರಿಷತ್‌ (ಡಿ.8) :  ರಾಜ್ಯದ 2017-18 ಬಜೆಟ್‌ಗೆ ಹೋಲಿಸಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಜಿಎಸ್‌ಟಿ ಪರಿಹಾರ ಈಗ 40 ಸಾವಿರ ಕೋಟಿ ರು. ಕಡಿಮೆಯಾಗಿದ್ದು, ಇದರಿಂದ ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017-18ರಲ್ಲಿ ರಾಜ್ಯದ ಬಜೆಟ್‌ ಗಾತ್ರ 1.86 ಲಕ್ಷ ಕೋಟಿ ಇದ್ದ ವೇಳೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು 43,369 ಕೋಟಿ ರು. (ಶೇ. 23) ಬಂದಿತ್ತು. ಆದರೆ ಈಗ ರಾಜ್ಯದ ಬಜೆಟ್‌ ಗಾತ್ರ 3.27 ಲಕ್ಷ ಕೋಟಿ ಇದ್ದರೂ ಕೇಂದ್ರದಿಂದ ಬರುವ ಮೊತ್ತ ಶೇ.17.5 ಕ್ಕೆ ಇಳಿದಿದೆ. ಶೇ.23ರಂತೆ ಲೆಕ್ಕ ಹಾಕಿದರೆ 76 ಸಾವಿರ ಕೋಟಿ ಬರುವ ಬದಲು 56 ಸಾವಿರ ಕೋಟಿ ಬರುತ್ತಿದೆ, ಅದೇ ರೀತಿ ಜಿಎಸ್‌ಟಿ ಪರಿಹಾರ ಸಹ 20 ಸಾವಿರ ಕೋಟಿ ರು. ಕಡಿಮೆಯಾಗಿದೆ. ಹೀಗಾಗಿ ಒಟ್ಟಾರೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಮೊತ್ತ 40 ಸಾವಿರ ಕೋಟಿ ರು. ಕಡಿಮೆಯಾಗಿದೆ. ಇದರ ಪರಿಣಾಮ ನಮ್ಮ ಆರ್ಥಿಕ ಸಂಪನ್ಮೂಲಗಳ ಮೂಲಕ ಕ್ರೋಢಿಕರಣ ಮಾಡುವ ಒತ್ತಡ ಹೆಚ್ಚಾಗಿದೆ ಎಂದರು.

ಈ ವರ್ಷ ಕೇಂದ್ರ ಪುರಸ್ಕೃತ ಯೋಜನೆಯಡಿ ಕೆಲವು ಇಲಾಖೆಗೆ ಹಣ ಬಂದಿದೆ. ಇನ್ನೂ ಕೆಲವುಗಳಿಗೆ ಬಂದಿಲ್ಲ, ಮಾರ್ಚ್‌ವರೆಗೆ ಅವಕಾಶ ಇರುವುದರಿಂದ ಸುಮಾರು 56 ಸಾವಿರ ಕೋಟಿ ರು. ಹಣ ಬರುವ ನಿರೀಕ್ಷೆ ಇದೆ. ಉಳಿದಂತೆ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನದ ಮೊತ್ತ 11,495 ಕೋಟಿ ರು. ಹಾಗೂ ಜಿಎಸ್‌ಟಿ ಪರಿಹಾರ ಬಾಕಿ 1141 ಕೋಟಿ ರು. ಬಾಕಿ ಬರಬೇಕಾಗಿದೆ. ಈ ಮೊತ್ತ ನೀಡುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದಿದ್ದರೂ ಈವರೆಗೆ ಹಣ ಬಂದಿಲ್ಲ ಎಂದು ಸಚಿವರು ವಿವರಿಸಿದರು.

ಸ್ಪೀಕರ್‌ಗೆ ಎಲ್ಲರೂ ನಮಸ್ಕರಿಸ್ತಾರೆ ಎಂದಿದ್ರಲ್ಲಿ ತಪ್ಪೇನಿದೆ? ಹೇಳಿಕೆ ಸಮರ್ಥಿಸಿಕೊಂಡ ಸಚಿವ ಜಮೀರ್

ಗದ್ದಲ, ವಾಗ್ವಾದ

ಇದಕ್ಕೂ ಮುನ್ನ ಯು.ಬಿ. ವೆಂಕಟೇಶ್‌ ಅವರು, ಪ್ರಸಕ್ತ ವರ್ಷ ಕೇಂದ್ರ ಸರ್ಕಾರದಿಂದ 61 ಇಲಾಖೆಗಳಿಗೆ ಒಂದೇ ಒಂದು ಪೈಸೆ ಬಂದಿಲ್ಲ ಎಂದು ಪತ್ರಿಕಾ ಹೇಳಿಕೆ ಉಲ್ಲೇಖಿಸಿ ಹೇಳಿದ ಮಾತಿಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೇಂದ್ರ ಸರ್ಕಾರವನ್ನು ತೇಜೋವಧೆ ಮಾಡಲು ನಾವು ಬಿಡುವುದಿಲ್ಲ. ಈ ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು, ಮಹಾರಾಷ್ಟ್ರ ನಂತರ ಕರ್ನಾಟಕ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ, ಆದರೆ ರಾಜ್ಯಕ್ಕೆ ನೀಡುವ ಪಾಲು ಕಡಿಮೆಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಪಾಲಿನ ಹಣ ಕೇಳುವುದು ತಪ್ಪೇ ಎಂದು ವಾದಿಸಿದರು. ಕೊನೆಗೆ ಬಿಜೆಪಿ ಸದಸ್ಯರು ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಅವಕಾಶ ನೀಡುವುದಾಗಿ ಸಭಾಪತಿ ಹೇಳಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. 

ವಿದೇಶಿಗರ ಅಕ್ರಮ ವಾಸದ 28 ಹಾಟ್‌ಸ್ಟಾಟ್‌ ಪತ್ತೆ-ಪರಂವಿದೇಶಿಗರ ಅಕ್ರಮ ವಾಸದ 28 ಹಾಟ್‌ಸ್ಟಾಟ್‌ ಪತ್ತೆ-ಪರಂ

click me!