
ದಾವಣಗೆರೆ (ಏ.08): ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಸೇರಿದ್ದೆಂದು ಹೇಳಲಾದ 39 ಲಕ್ಷ ಮೌಲ್ಯದ 66 ಕೆ.ಜಿ. ಬೆಳ್ಳಿ ಸಾಮಗ್ರಿಯನ್ನು ದಾವಣಗೆರೆ ಹೊರವಲಯದ ಹೆಬ್ಬಾಳು ಟೋಲ್'ಬಳಿಯ ಚೆಕ್ ಪೋಸ್ಟ್‌ನಲ್ಲಿ ಗುರುವಾರ ತಡರಾತ್ರಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಘಟನೆ ನಡೆದಿದೆ. ಚೆನ್ನೈಯಿಂದ ಮುಂಬೈನತ್ತ ಬಿಎಂಡಬ್ಲ್ಯೂ ಕಾರ್‌ನಲ್ಲಿ ಐದು ಬಾಕ್ಸ್‌ಗಳಲ್ಲಿ ಬೆಳ್ಳಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದರು. ರಘುನಾಥ ನೇತೃತ್ವದ ವಿಚಕ್ಷಣಾ ದಳವು ಬೆಳ್ಳಿ ಬಟ್ಟಲು, ಚಮಚ, ನೀರಿನ ಜಗ್ ಹಾಗೂ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್‌ನಲ್ಲಿದ್ದ ಹರಿಸಿಂಗ್, ಚಾಲಕ ಸುಲ್ತಾನ್ ಖಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ಳಿ ಸಾಮಗ್ರಿಗಳು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿವೆ ಎಂದು ಹರಿಸಿಂಗ್ ಹೇಳಿಕೆ ನೀಡಿದ್ದಾರೆ. ಬೆಳ್ಳಿ ಸಾಮಗ್ರಿಗಳಿಗೆ ಪೂರಕ ದಾಖಲೆ ತೋರಿಸದಿದ್ದರಿಂದ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ನಿರ್ಮಾಪಕ ಬೋನಿ ಕಪೂರ್‌ಗೆ ಸೇರಿದ್ದ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಕಟ್ಟಕಡೆ ಪ್ರಜೆಗೂ ಡಬಲ್ ಎಂಜಿನ್ ಸರ್ಕಾರದಿಂದ ಸೌಲಭ್ಯ: ಬಿ.ಎಲ್.ಸಂತೋಷ್
8 ಕೋಟಿ ರು. ನಗದು ಜಪ್ತಿ: ಚುನಾವಣಾ ಅಕ್ರಮದ ಮೇಲೆ ನಿಗಾ ವಹಿಸಿರುವ ಚುನಾವಣಾ ಆಯೋಗವು 8.04 ಕೋಟಿ ರು.ಗಿಂತ ಅಧಿಕ ನಗದನ್ನು ಜಪ್ತಿ ಮಾಡಿದೆ. ಈ ಮೂಲಕ ಈವರೆಗೆ 35.42 ಕೋಟಿ ರು. ನಗದನ್ನು ವಶಕ್ಕೆ ಪಡೆದುಕೊಂಡಂತಾಗಿದೆ. ಬೆಂಗಳೂರು ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 4.71 ಕೋಟಿ ರು. ನಗದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ 2.66 ಕೋಟಿ ರು. ಮೌಲ್ಯದ 5.58 ಕೆಜಿ ಚಿನ್ನ, ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದಲ್ಲಿ 1.05 ಕೋಟಿ ರು. ಮೌಲ್ಯದ 141.959 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಆಯೋಗವು 35.42 ಕೋಟಿ ರು. ನಗದು, 27.04 ಕೋಟಿ ರು. ಮೌಲ್ಯದ 4.45 ಲಕ್ಷ ಲೀಟರ್ ಮದ್ಯ, 1.19 ಕೋಟಿ ರು. ಮೌಲ್ಯದ 146.20 ಕೆಜಿ ಮಾದಕವಸ್ತುಗಳು ಸೇರಿದಂತೆ 93.40 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಒಟ್ಟು 697 ಎಫ್‌ಐಆರ್ ದಾಖಲಿಸಲಾಗಿದ್ದು, 51,628 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 2,238 ಪ್ರಕರಣಗಳನ್ನು ದಾಖಲಿಸಲಾಗಿದೆ.
ಹುನಗುಂದ ಹೋರಾಟ: ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿಗೆ ಪಕ್ಷೇತರರ ಅಡ್ಡಿ
ಈ ಪೈಕಿ 3,439 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 6137 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ