ಇಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ: ನಾಳೆ ಟೈಗರ್‌ ಸಫಾರಿ

By Kannadaprabha News  |  First Published Apr 8, 2023, 4:45 AM IST

2022ರ ಹುಲಿ ಸಮೀಕ್ಷಾ ವರದಿ ಇನ್ನಷ್ಟೇ ಹೊರಬೀಳಬೇಕಿದೆ. ಮೈಸೂರಿನಲ್ಲಿ ನಡೆಯಲಿರುವ ಹುಲಿ ಯೋಜನೆಯ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 2022ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 


ಮೈಸೂರು(ಏ.08): ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ನಾಳೆ(ಭಾನುವಾರ) ಈ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡುತ್ತಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಬಂಡೀಪುರದಲ್ಲಿ ಭಾನುವಾರ ಹುಲಿ ಸಫಾರಿ ನಡೆಸಲಿರುವ ಅವರು, ಬಳಿಕ ಅರಣ್ಯ ಸಿಬ್ಬಂದಿ ಜತೆಗೆ ಸಂವಾದ ನಡೆಸಲಿದ್ದಾರೆ. ತರುವಾಯ ಮೈಸೂರಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಂಡೀಪುರದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

Latest Videos

undefined

ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

ಇಂದೇ ಆಗಮನ: 

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಶನಿವಾರ ರಾತ್ರಿಯೇ ವಿಶೇಷ ವಿಮಾನದಲ್ಲಿ ಬಂದಿಳಿಯಲಿರುವ ಮೋದಿ ಅವರು, ನಗರದ ರಾರ‍ಯಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವರು. ಏ.9ರ ಬೆಳಗ್ಗೆ 6.30ಕ್ಕೆ ಮೈಸೂರು ವಿವಿ ಕ್ರಾಫರ್ಡ್‌ ಭವನದ ಎದುರಿನ ಓವೆಲ್‌ ಮೈದಾನದಲ್ಲಿ ನಿರ್ಮಿಸಿರುವ ಹೆಲಿಕಾಪ್ಟರ್‌ ಮೂಲಕ ಬಂಡೀಪುರಕ್ಕೆ ತೆರಳುವರು. ಬಳಿಕ ಅಲ್ಲಿ ಸಫಾರಿ ನಡೆಸಿ, ಅರಣ್ಯ ಅಧಿಕಾರಿಗಳ ಜೊತೆ ಸಂವಾದ ನಡೆಸುವರು. ನಂತರ ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿನ ಆನೆಕ್ಯಾಂಪ್‌ಗೆ ತೆರಳಿ, ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಆಸ್ಕರ್‌ ಪ್ರಶಸ್ತಿ ವಿಜೇತ ‘ಎಲಿಫೆಂಟ್‌ ವಿಸ್ಪರರ್ಸ್‌’ ಸಿನಿಮಾದ ನಿಜ ಪಾತ್ರಧಾರಿ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡುವರು. ಅಲ್ಲಿಂದ ಬೆಳಗ್ಗೆ 11ಕ್ಕೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ವಾಪಸ್‌ ಆಗುವರು.

ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1ಕ್ಕೆ ವಿಶೇಷ ವಿಮಾನದಲ್ಲಿ ವಾಪಸ್‌ ಹೋಗುವರು.

ನಿನ್ನೆಯಿಂದಲೇ ಬಂದ್‌:

ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ 4ರಿಂದಲೇ ಬಂಡೀಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಶನಿವಾರ ಸಂಜೆ 4 ರಿಂದ ಭಾನುವಾರ ಮಧ್ಯಾಹ್ನ 12 ರವರೆಗೆ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾ.ಹೆ.181 ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾ.ಹೆ.766ರಲ್ಲಿ ಎಲ್ಲಾ ರೀತಿಯ ವಾಹನಗಳ ಓಡಾಟ ಬಂದ್‌ ಮಾಡಲಾಗಿದೆ. ಏ.6 ರಿಂದಲೇ ಸಫಾರಿ, ರೆಸಾರ್ಟ್‌, ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ವಾಸ್ತವ್ಯ ನಿಷೇಧಿಸಲಾಗಿದ್ದು, ಎಲ್ಲಾ ರೀತಿಯ ಡ್ರೋನ್‌ ಹಾರಾಟಕ್ಕೂ ಕಡಿವಾಣ ಹಾಕಲಾಗಿದೆ.

ಭ್ರಷ್ಟರನ್ನು ಸುಮ್ಮನೆ ಬಿಡಬೇಡಿ, ಸದೆಬಡಿಯಿರಿ: ಸಿಬಿಐ ವಜ್ರಮಹೋತ್ಸವದಲ್ಲಿ ಪ್ರಧಾನಿ ಮೋದಿ

ಹೊಸ ಹುಲಿ ಗಣತಿ ವರದಿ ಬಿಡುಗಡೆ?

2022ರ ಹುಲಿ ಸಮೀಕ್ಷಾ ವರದಿ ಇನ್ನಷ್ಟೇ ಹೊರಬೀಳಬೇಕಿದೆ. ಮೈಸೂರಿನಲ್ಲಿ ನಡೆಯಲಿರುವ ಹುಲಿ ಯೋಜನೆಯ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 2022ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2018ರ ಹುಲಿ ಸಮೀಕ್ಷೆ ಪ್ರಕಾರ ಕರ್ನಾಟಕವು ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. 2023ರ ಸಮೀಕ್ಷೆ ಪ್ರಕಾರ ಕರ್ನಾಟಕವು ಮೊದಲ ಸ್ಥಾನಕ್ಕೇರಿರುವ ನಿರೀಕ್ಷೆ ಇದೆ.

15 ಕಿ.ಮೀ. ಸಫಾರಿ, ಸೋಲಿಗರ ಜತೆ ಚಹಾ ಸೇವನೆ

ಬಂಡೀಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಅವರು ಅರಣ್ಯ ಇಲಾಖೆಯ ಜೀಪಿನಲ್ಲಿ 15 ಕಿ.ಮೀ. ಸಫಾರಿ ನಡೆಸಲಿದ್ದಾರೆ. ಬೋಳಗುಡ್ಡ ಎಂಬ ಕಳ್ಳಬೇಟೆ ತಡೆ ಶಿಬಿರಕ್ಕೂ ಭೇಟಿ ಕೊಡಲಿದ್ದು, ಬಂಡೀಪುರದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದೇ ವೇಳೆ ದನ್ನಟ್ಟಿಹಳ್ಳ ಎಂಬ ಕ್ಯಾಂಪಿನಲ್ಲಿ ಅರಣ್ಯ ವೀಕ್ಷಕರು ವಿಶೇಷವಾಗಿ ಸೋಲಿಗರು ತಯಾರಿಸುವ ಬ್ಲ್ಯಾಕ್‌ ಟೀ ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!