ರಾಷ್ಟ್ರೀಯ ಲೋಕ ಅದಾಲತ್‌: ಕರ್ನಾಟಕದಲ್ಲಿ ಒಂದೇ ದಿನ 35 ಲಕ್ಷ ಕೇಸ್‌ ಇತ್ಯರ್ಥ

Published : Jul 11, 2023, 12:33 PM IST
ರಾಷ್ಟ್ರೀಯ ಲೋಕ ಅದಾಲತ್‌: ಕರ್ನಾಟಕದಲ್ಲಿ ಒಂದೇ ದಿನ 35 ಲಕ್ಷ ಕೇಸ್‌ ಇತ್ಯರ್ಥ

ಸಾರಾಂಶ

ಜು.8ರಂದು ರಾಜ್ಯದಲ್ಲಿ 1,020 ಪೀಠಗಳು ನಡೆಸಿದ ಅದಾಲತ್‌ ವೇಳೆ ಒಟ್ಟು 34,76,231 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಟ್ಟು 1,911 ಕೋಟಿ ರು. ಪರಿಹಾರ ಕೊಡಿಸಲಾಗಿದೆ. ಇತ್ಯರ್ಥಗೊಂಡಿರುವ ಪ್ರಕರಣಗಳ ಪೈಕಿ 2,50,344 ನ್ಯಾಯಾಲಯದಲ್ಲಿ ಬಾಕಿಯಿದ್ದ ಮತ್ತು 32,25,887 ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ. 

ಬೆಂಗಳೂರು(ಜು.11):  ರಾಜ್ಯಾದ್ಯಂತ ಜು.8ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸುಮಾರು 35 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 1,911 ಕೋಟಿ ರು.ಗಳನ್ನು ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಜಿ. ನರೇಂದರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಜು.8ರಂದು ರಾಜ್ಯದಲ್ಲಿ 1,020 ಪೀಠಗಳು ನಡೆಸಿದ ಅದಾಲತ್‌ ವೇಳೆ ಒಟ್ಟು 34,76,231 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಟ್ಟು 1,911 ಕೋಟಿ ರು. ಪರಿಹಾರ ಕೊಡಿಸಲಾಗಿದೆ. ಇತ್ಯರ್ಥಗೊಂಡಿರುವ ಪ್ರಕರಣಗಳ ಪೈಕಿ 2,50,344 ನ್ಯಾಯಾಲಯದಲ್ಲಿ ಬಾಕಿಯಿದ್ದ ಮತ್ತು 32,25,887 ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ ಎಂದು ಹೇಳಿದರು.

ರಾಷ್ಟ್ರೀಯ ಲೋಕ್ ಅದಾಲತ್ ಒಂದೇ ದಿನದಲ್ಲಿ ಒಟ್ಟು 32930 ಪ್ರಕರಣ ಇತ್ಯರ್ಥ

ಅದಾಲತ್‌ನಲ್ಲಿ ಒಟ್ಟು 1,874 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 243 ಜೋಡಿಗಳನ್ನು ಒಂದು ಮಾಡಲಾಗಿದೆ. 13 ವರ್ಷಗಳ ಹಿಂದೆ ಹೊಸದುರ್ಗದ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಒಂದು ಮಾಡಿ ಪ್ರಕರಣವನ್ನು ಸುಖಾಂತ್ಯ ಕಾಣಿಸಲಾಗಿದೆ. ಆಸ್ತಿಗೆ ಸಂಬಂಧಿಸಿದ 3,844 ವಿಭಾಗ ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧಕ್ಕೆ ಸಂಬಂಧಿಸಿದ 5,007 ಪ್ರಕರಣಗಳನ್ನು ವಿಲೇವಾರಿ ಮಾಡಿ, 224 ಕೋಟಿ ರು. ಪರಿಹಾರ ಕೊಡಿಸಲಾಗಿದೆ ಎಂದು ಅವರು ವಿವರಿಸಿದರು.

11,982 ಚೆಕ್‌ ಬೌನ್ಸ್‌ ಪ್ರಕರಣಗಳು, 615 ಭೂಸ್ವಾಧೀನ ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ವಿಲೇವಾರಿ ಮಾಡಿ, ಒಟ್ಟು 141 ಕೋಟಿ ರು. ಮತ್ತು ಇತರೆ 4,921 ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿ, 234 ಕೋಟಿ ರು. ಪರಿಹಾರ ಕೊಡಿಸಲಾಗಿದೆ. ರೇರಾ ವ್ಯಾಪ್ತಿಗೆ ಬರುವ 98 ಪ್ರಕರಣಗಳನ್ನು ಪರಿಹರಿಸಿ 14 ಕೋಟಿ ರು., 180 ಗ್ರಾಹಕರ ವ್ಯಾಜ್ಯ ಕುರಿತ ಪ್ರಕರಣಗಳನ್ನು ಬಗೆಹರಿಸಿ 6 ಕೋಟಿ ರು. ಪರಿಹಾರ ಕೊಡಲು ಆದೇಶಿಸಲಾಗಿದೆ ಎಂದು ಹೇಳಿದರು.

ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ 15 ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ಲೋಕ ಅದಾಲತ್‌

ಕೋಟಿ ಪರಿಹಾರಕ್ಕೆ ಆದೇಶ

ಶ್ರೀರಾಮ್‌ ಜನರಲ್‌ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್‌ ವರ್ಸಸ್‌ ಕೆ.ಪೂಜಾ ಇತರರು ವಿರುದ್ಧದ ಪ್ರಕರಣವನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರ ನೇತೃತ್ವದ ಪೀಠ ಇತ್ಯರ್ಥಡಿಸಿ 1.15 ಕೋಟಿ ರು. ಪರಿಹಾರ ಕೊಡಲು ಆದೇಶಿಸಿದೆ. ಹುಬ್ಬಳ್ಳಿ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ 63 ವರ್ಷ ಹಿಂದಿನ ಸಿವಿಲ್‌ ದಾವೆಗೆ ಅಂತ್ಯ ಹಾಡಲಾಗಿದೆ. ಚಿತ್ರದುರ್ಗದ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಕಳೆದ 30 ವರ್ಷಗಳಿಂದ ಇದ್ದ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಆ್ಯಂಬುಲೆನ್ಸ್‌ನಲ್ಲಿ ಬಂದ ವೃದ್ಧೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೋಳರಾಮನಹಳ್ಳಿ ಗ್ರಾಮದ 74 ವರ್ಷದ ಲಲಿತಮ್ಮ ಮತ್ತು ಅವರ ಸಂಬಂಧಿಗಳ ನಡುವೆ ಭೂ ವ್ಯಾಜ್ಯ 2009ರಿಂದ ಬಾಕಿಯಿತ್ತು. ಆ ಕುರಿತು ಹಲವು ಸುತ್ತಿನ ವ್ಯಾಜ್ಯಗಳು ನಡೆದು ಕೊನೆಗೆ 2020ರಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿತ್ತು. ಪ್ರಕರಣದ ವಿಚಾರಣೆಗೆ ಅನಾರೋಗ್ಯದ ನಡುವೆಯೇ ಆ್ಯಂಬುಲೆನ್ಸ್‌ನಲ್ಲಿ ಹೈಕೋರ್ಟ್‌ಗೆ ಆಗಮಿಸಿದ್ದರು. ನ್ಯಾಯಮೂರ್ತಿ ಹೇಮಲೇಖಾ ಅವರು ಖುದ್ದು ಆ್ಯಂಬುಲೆನ್ಸ್‌ ಬಳಿ ತೆರಳಿ ಲಲಿತಮ್ಮ ಹಾಗೂ ಪ್ರತಿವಾದಿಗಳ ಒಪ್ಪಿಗೆ ಮೇರೆಗೆ ಪ್ರಕರಣವನ್ನು ಇತ್ಯರ್ಥಪಡಿಸಿದರು. ಭೂಮಿ ಲಲಿತಮ್ಮಗೆ ಸಿಗುವಂತೆ ಆದೇಶ ನೀಡಲಾಗಿದೆ. ಇದು ಈ ಬಾರಿಯ ಲೋಕ ಅದಾಲತ್‌ನಲ್ಲಿ ವಿಶೇಷ ಘಟನೆಯಾಗಿದೆ ಎಂದು ನ್ಯಾ.ಜಿ.ನರೇಂದರ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ