Grama One: 3000 ಸೇವಾಕೇಂದ್ರ ತೆರೆಯಲು ನಿರ್ಧಾರ: ಜ.26ರಿಂದ 12 ಜಿಲ್ಲೆಗಳಲ್ಲಿ ಜಾರಿ!

By Kannadaprabha News  |  First Published Jan 18, 2022, 4:26 AM IST

*ಬೆಂಗಳೂರು ಒನ್‌, ಕರ್ನಾಟಕ ಒನ್‌ ರೀತಿ ಒಂದೇ ಸೂರಿನಡಿ 100 ಸೇವೆ
*3000 ಗ್ರಾಮ ಒನ್‌ ಸೇವಾಕೇಂದ್ರ ತೆರೆಯಲು ಸಿಎಂ ಸಭೆಯಲ್ಲಿ ನಿರ್ಧಾರ
*ಇಲ್ಲಿಯವರೆಗೆ 5,85,000ಕ್ಕೂ ಹೆಚ್ಚು ಅರ್ಜಿ ಸ್ವೀಕಾರ


ಬೆಂಗಳೂರು (ಜ. 18):  ಬೆಂಗಳೂರು ಒನ್‌ (Bengaluru One) ಹಾಗೂ ಕರ್ನಾಟಕ ಒನ್‌ ಮಾದರಿಯಲ್ಲಿ ಸುಮಾರು 100 ಸರ್ಕಾರಿ ಸೇವೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ರಾಮ ಒನ್‌’ (Grama One) ಯೋಜನೆ ರಾಜ್ಯದ 12 ಜಿಲ್ಲೆಗಳಲ್ಲಿ ಇದೇ ತಿಂಗಳ 26ರ ಗಣರಾಜ್ಯೋತ್ಸವ ದಿನ ಜಾರಿಗೆ ಬರಲಿದೆ. ‘ಗ್ರಾಮ ಒನ್‌’ ಯೋಜನೆ ಜಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basvaraj Bommai) ಅವರು ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದರು.

ಮೊದಲ ಹಂತದಲ್ಲಿ ಯೋಜನೆಯನ್ನು 12 ಜಿಲ್ಲೆಗಳಲ್ಲಿ ಜಾರಿ ಮಾಡಲಿದ್ದು, ಒಟ್ಟು 3,000 ಗ್ರಾಮ ಒನ್‌ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ತನ್ಮೂಲಕ ಸಾರ್ವಜನಿಕರ ಬಳಿಗೆ ಸುಮಾರು 100 ಸರ್ಕಾರಿ ಸೇವೆ ಒದಗಿಸಲು ಮಹತ್ವದ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ 12 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು. ಹಲವಾರು ಪ್ರಮುಖ ಇಲಾಖೆಗಳ ಎಲ್ಲಾ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚನೆ ನೀಡಿದರು.

Tap to resize

Latest Videos

ಇದನ್ನೂ ಓದಿ: Basavaraj Bommai: ದೇಶಕ್ಕೊಂದೇ ಸಿಆರ್‌ಝಡ್‌ ಕಾನೂನು ಬೇಕು: ಸಿಎಂ ಸಲಹೆ

ಕಳೆದ ನವೆಂಬರ್‌ 19ರಂದು ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್‌ ಯೋಜನೆಗೆ ಮುಖ್ಯಮಂತ್ರಿಗಳು ಪ್ರಾಯೋಗಿಕವಾಗಿ ಚಾಲನೆ ನೀಡಿದ್ದರು. ಸದ್ಯ ದಾವಣಗೆರೆ, ವಿಜಯಪುರ, ಚಿಕ್ಕಮಗಳೂರು ಹಾಗೂ ಬೀದರ್‌ ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಗ್ರಾಮ ಒನ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ಇಲ್ಲಿಯವರೆಗೆ 5,85,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಈ ಆಡಳಿತ) ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಭಾಗವಹಿಸಿದ್ದರು.

12 ಜಿಲ್ಲೆಗಳು: ಮೊದಲ ಹಂತದಲ್ಲಿ ಬೀದರ್‌, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಗ್ರಾಮ ಒನ್‌ ಕೇಂದ್ರಗಳು ಆರಂಭವಾಗಲಿವೆ.

ಏನೇನು ಸೇವೆ?: ಕಂದಾಯ, ಆಹಾರ, ಆರೋಗ್ಯ, ಕಾರ್ಮಿಕ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಂದಾಜು 100 ಸೇವೆಗಳು ಗ್ರಾಮ ಒನ್‌ ಕೇಂದ್ರದಲ್ಲಿ ಲಭ್ಯವಾಗಲಿವೆ. ಜನರಿಗೆ ಒಂದೇ ಸೂರಿನಡಿ ಹಲವು ಇಲಾಖೆಗಳ ಸೇವೆ ಸಿಗುವುದು ಇಲ್ಲಿನ ವಿಶೇಷ.

ಇದನ್ನೂ ಓದಿWorld Bank Loan : ಪ್ರತಿ ಮನೆಗೂ ನೀರು ಪೂರೈಸಲು ನೆರವು

ದೇಶಕ್ಕೊಂದೇ ಸಿಆರ್‌ಝಡ್‌ ಕಾನೂನು: ಕರ್ನಾಟಕ (Karnataka) ರಾಜ್ಯದಲ್ಲಿ 330 ಕಿ.ಮೀ. ಕರಾವಳಿ ಇರುವುದರಿಂದ ಅಲ್ಲಿ ಬಂದರುಗಳ ನಿರ್ಮಾಣ, ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದಕ್ಕಾಗಿ ಈಗಿರುವ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್‌) ಕಾನೂನಿನಲ್ಲಿ ಬದಲಾವಣೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ದೇಶಕ್ಕೆ ಒಂದೇ ಸಿಆರ್‌ಝಡ್‌ ಕಾನೂನು (CRZ Law) ತರುವುದು ಸೂಕ್ತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಲಹೆ ನೀಡಿದರು.

ಸೋಮವಾರ ‘ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ’ಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗತಿಶಕ್ತಿ ಕಾರ್ಯಕ್ರಮ ಹೊಸ ಶಕೆಯನ್ನು ಆರಂಭಿಸಲಿದ್ದು, ಯೋಜನೆಯು ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದ ರೂಪಿತವಾದ ಕಾರ್ಯಕ್ರಮವಾಗಿದೆ ಎಂದರು.

click me!