
ಚೆನ್ನೈ[ಡಿ.10]: ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 300 ಟನ್ ತೂಕದ ಏಕಶಿಲಾ ವಿಷ್ಣುವಿನ ವಿಗ್ರಹವನ್ನು ತಮಿಳುನಾಡಿನಿಂದ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಿರುವಣ್ಣಾಮಲೈ ಜಿಲ್ಲೆಯ ವಂದಾವಾಸಿ ತಾಲೂಕಿನ ಕೊರಕ್ಕೊಟ್ಟೈ ಎಂಬ ಗ್ರಾಮದ ಗುಡ್ಡದ ಮೇಲೆ ಕೆತ್ತಲಾದ 64 ಅಡಿ ಉದ್ದ ಹಾಗೂ 300 ಟನ್‌ಗಿಂತಲೂ ಹೆಚ್ಚಿನ ತೂಕದ ವಿಶ್ವರೂಪ ಮಹಾವಿಷ್ಣುವಿನ ಬೃಹತ್ ಏಕಶಿಲಾ ಮೂರ್ತಿಯನ್ನು 240 ಟೈರ್‌ಗಳ ಟ್ರೈಲರ್ (ನೂಕುವ ಗಾಡಿ)ಯ ಮೂಲಕ ಸಾಗಿಸಲಾಗುತ್ತಿದ್ದು, ಮೂರು ದಿನಗಳಲ್ಲಿ 300 ಮೀಟರ್ ದೂರ ಸ್ಥಳಾಂತರಿಸಲಾಗಿದೆ. ಬೆಂಗಳೂರಿನ ಕೋದಂಡರಾಮಸ್ವಾಮಿ ಚಾರಿಟೇಬಲ್ ಟ್ರಸ್ಟ್ ಈ ಬೃಹತ್ ರಚನೆಯ ಸ್ಥಳಾಂತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಮುಂಬೈ ಮೂಲದ ಸರಕು ಸಾಗಣೆ ಕಂಪನಿಯ 30 ಮಂದಿ ಸದಸ್ಯರ ತಂಡ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕಲ್ಲು ಕ್ವಾರಿಯಿಂದ ಮಣ್ಣುದಾರಿಯ ಮೂಲಕ ತಲ್ಲಾರ್ ದೇಸೂರ್ ರಸ್ತೆಗೆ ತರುವ ಯತ್ನ ಆರಂಭಗೊಂಡಿದೆ. ಇತ್ತೀಚೆಗೆ ಮಳೆ ಬಂದಿದ್ದರಿಂದ ಈ ಕಾರ್ಯಕ್ಕೆ ವಿಘ್ನ ಎದುರಾಗಿದ್ದು, ಟೈರ್‌ಗಳು ಹುಗಿದು ಹೋಗಿದ್ದವು. ಬಳಿಕ ಅವುಗಳನ್ನು ಬದಲಾಯಿಸಿ ಮೂರ್ತಿಯನ್ನು ಯಶಸ್ವಿಯಾಗಿ 300 ಮೀಟರ್ ಸಾಗಿಸಲಾಗಿದೆ. ಸದ್ಯ ಆಮೆಗತಿಯಲ್ಲಿ ಟ್ರೈಲರ್ ಮುಂದೆ ಸರಿಯುತ್ತಲಿದೆ. ಆದಾಗ್ಯೂ ಮಹಾವಿಷ್ಣು ಹಾಗೂ ಏಳು ಹೆಡೆಯ ಆದಿಶೇಷನ ಮೂರ್ತಿಯನ್ನು 50 ದಿನದಲ್ಲಿ ದೇವಾಲಯಕ್ಕೆ ಸ್ಥಳಾಂತರಿಸುವ ವಿಶ್ವಾಸವಿದೆ ಎಂದು ಈ ಕಾರ್ಯಕ್ಕೆ ನೆರವು ನೀಡಲು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ತಿರುವಣ್ಣಾಮಲೈ ಜಿಲ್ಲಾಧಿಕಾರಿ ಕೆ.ಎಸ್. ಕೆಂಡಸ್ವಾಮಿ ಹೇಳಿದ್ದಾರೆ.
ಇನ್ನು 500 ಮೀಟರ್ ಸಾಗಿದರೆ ಪಕ್ಕಾ ರಸ್ತೆ ಸಿಗಲಿದೆ. ಬಳಿಕ ಪುದುಚೇರಿ- ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿ ದೊರೆಯಲಿದ್ದು, ಆ ಬಳಿಕ ಟ್ರಕ್ ತನ್ನ ವೇಗದಲ್ಲಿ ಚಲಿಸಲಿದೆ. ತಲ್ಲಾರ್, ವೆಲ್ಲಿಮೆದುಪೆಟ್ಟಿ, ಗಿಂಗೀ,ತಿರುವಣ್ಣಾ ಮಲೈ, ಚೆಂಗಮ್ ಮೂಲಕ ಬೆಂಗಳೂರಿಗೆ ತರಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ