ಐಸಿಯುನಲ್ಲಿದ್ದರೂ ಶಿವಪೂಜೆ ಸಿದ್ಧತೆ ನಡೆಸಿ ಎಂದ ಸಿದ್ಧಗಂಗಾ ಶ್ರೀಗಳು

By Web DeskFirst Published Dec 10, 2018, 8:09 AM IST
Highlights

ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ತಿ ಶಿಘ್ರದಲ್ಲೇ ಅವರನ್ನು ವಾರ್ಡ್‌ಗೆ ಶಿಫ್ಟ್‌ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಚೆನ್ನೈ[ಡಿ.10]: ಯಕೃತ್ತು ಮತ್ತು ಪಿತ್ತನಾಳದ ಸೋಂಕಿನಿಂದ ಬಳಲುತ್ತಿದ್ದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಚೆನೈನ ರೆಲಾ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಆದ ಬಳಿಕ ಗಣನೀಯವಾಗಿ ಚೇತರಿಸಿಕೊಳ್ಳುತ್ತಿದ್ದು ಶೀಘ್ರ ಮಠಕ್ಕೆ ಆಗಮಿಸಲಿದ್ದಾರೆ ಎಂಬ ಸೂಚನೆ ವೈದ್ಯರಿಂದ ಸಿಕ್ಕಿದೆ.

ಎರಡು ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆ ಆದ ಅವರಿಗೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಲವಲವಿಕೆಯಿಂದ ಇದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಐಸಿಯುನಿಂದ ಸ್ಪೆಷಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು. ಬಳಿಕ ಕೆಲವೇ ದಿನದಲ್ಲಿ ಶ್ರೀಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸಿದ್ಧಗಂಗಾ ಮಠಕ್ಕೆ ಕಳುಹಿಸಲಾಗುವುದು ಎಂಬ ಸುಳಿವನ್ನು ವೈದ್ಯರೇ ನೀಡಿದ್ದು ಭಕ್ತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.

ಶಿವಪೂಜೆಗೆ ಸಿದ್ಧತೆಗೆ ತಿಳಿಸಿದರು!:

ರೆಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿನಿಂದ ಇಲ್ಲಿಯವರೆಗೂ ಒಂದಲ್ಲ ಒಂದು ಅಚ್ಚರಿ ಮೂಡಿಸುತ್ತಿರುವ ಶ್ರೀಗಳು ಭಾನುವಾರ ಸಹ ಎಂದಿನಂತೆ ಲವಲವಿಕೆಯಿಂದಲೇ ಇದ್ದರು. ಭಾನುವಾರ ಬೆಳಿಗ್ಗೆಯೂ 6.30ಕ್ಕೆ ಎದ್ದ ಶ್ರೀಗಳು ಭಕ್ತರಿಗೆ ಹಾಗೂ ತಮ್ಮ ಆಪ್ತರಿಗೆ ಶಿವಪೂಜೆ ಮಾಡಬೇಕು. ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ. ಆದರೆ ಶ್ರೀಗಳು ಐಸಿಯುನಲ್ಲಿ ಇರುವುದರಿಂದ ಶಿವಪೂಜೆಗೆ ಅವಕಾಶವಿಲ್ಲ ಎನ್ನುವ ಮಾಹಿತಿಯನ್ನು ಸ್ವಾಮೀಜಿ ಆಪ್ತರು ಅವರಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಡಾಕ್ಟರ್ ರೇಲಾ ಹಾಗೂ ಅವರ ವೈದ್ಯ ತಂಡಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಿದರು. 

ಶನಿವಾರ ನಡೆಸಲಾಗಿರುವ ಆಪರೇಷನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಸುಮಾರು 5ಕ್ಕೂ ಹೆಚ್ಚು ನುರಿತ ವೈದ್ಯರ ತಂಡ ಶ್ರೀಗಳಿಗೆ ಗಂಟೆಗೊಮ್ಮೆ ತಪಾಸಣೆ ನಡೆಸುತ್ತಿದ್ದು ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಸ್ಪೆಷಲ್ ವಾರ್ಡ್‌ಗೆ ಶಿಫ್ಟ್ ಆಗಲಿದ್ದಾರೆ ಎನ್ನುವ ಮಾಹಿತಿಯನ್ನು ಶ್ರೀಗಳ ಆಪ್ತರಿಗೆ ವೈದ್ಯರು ನೀಡಿದ್ದಾರೆ. ಶ್ರೀಗಳು ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ದಾಖಲಾದಾಗಿಂದಲೂ ಕಿರಿಯ ಶ್ರೀಗಳು ಸ್ವಾಮೀಜಿ ಅವರ ಜೊತೆಯಲ್ಲೇ ಇದ್ದು ಶ್ರೀಗಳಿಗೆ ಅಗತ್ಯವಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಶ್ರೀಗಳ ಆರೋಗ್ಯಸ್ಥಿರವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿರುವ ಕಿರಿಯ ಶ್ರೀಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ಡಾಕ್ಟರ್ ರೇಲಾ ಹಾಗೂ ಸಹಕಾರ ನೀಡಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಸಚಿವ ಡಿಕೆಶಿ ಭೇಟಿ:

ಶ್ರೀಗಳಿಗೆ ಯಶಸ್ವಿ ಚಿಕಿತ್ಸೆಯಾದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಚೆನ್ನೈನ ರೆಲಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಅಲ್ಲದೇ ಶ್ರೀಗಳಿಗೆ ನಡೆಸಲಾದ ಶಸ್ತ್ರ ಚಿಕಿತ್ಸೆ ಬಗ್ಗೆ ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. 

ತಮಿಳುನಾಡಿಗೂ ಭಕ್ತರ ದಂಡು...

ಭಾನುವಾರ ಬೆಳಗ್ಗೆಯಿಂದಲೂ ಶ್ರೀಗಳನ್ನು ನೋಡಲಿಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದರು. ತಮಿಳುನಾಡಿನಲ್ಲಿರುವ ಕನ್ನಡಿಗರು ಕೂಡ ಸ್ವಾಮೀಜಿ ಅವರ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಭಕ್ತರಿಗೆ ಕಿರಿಯ ಶ್ರೀಗಳು ಹಿರಿಯ ಶ್ರೀಗಳ ಆರೋಗ್ಯದ ಸ್ಥಿತಿಯನ್ನು ಮನದಟ್ಟು ಮಾಡಿದರು. ಐಸಿಯುನಲ್ಲಿರುವ ಅವರನ್ನು ಈಗ ಭೇಟಿಯಾಗುವುದು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ ಹಿಂದಕ್ಕೆ ತೆರಳಿದರು. ಶ್ರೀಗಳ ದರ್ಶನಕ್ಕಾಗಿ ಬಂದಿದ್ದೆವು. ಆದರೆ ದರ್ಶನ ಸಿಗಲಿಲ್ಲ. ಆದರೆ ಅವರು ಆರೋಗ್ಯವಾಗಿರುವ ಸುದ್ದಿ ಕೇಳಿ ಸಂತೋಷವಾಗಿದೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು. 

click me!