ಮಹಾರಾಷ್ಟ್ರ ಪರಿಷತ್‌ನಲ್ಲಿ ಶಿವಸೇನೆ ನಾಯಕ ಆಗ್ರಹ, ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವರೆಗೆ ಕೇಂದ್ರಾಡಳಿತ ಇರಲಿ
ನಾಗಪುರ(ಡಿ.27): ಕರ್ನಾಟಕ ಗಡಿ ವಿಷಯದಲ್ಲಿ ಸದಾ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಗಡಿ ವಿವಾದದ ಕುರಿತು ಸೋಮವಾರ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ, ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಕೇಂದ್ರ ಸರ್ಕಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.
ಗಡಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಸಂಸದ ಮಾನೆ ಒತ್ತಾಯ
‘ಇದು ಕೇವಲ ಭಾಷೆ ಮತ್ತು ಗಡಿಯ ಪ್ರಕರಣವಲ್ಲ, ಆದರೆ ಮಾನವೀಯತೆಯ ವಿಚಾರ. ಮರಾಠಿ ಮಾತನಾಡುವ ಜನರು ತಲೆಮಾರುಗಳಿಂದ ಗಡಿ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಅವರ ದೈನಂದಿನ ಜೀವನ, ಭಾಷೆ ಮತ್ತು ಜೀವನಶೈಲಿ ಮರಾಠಿ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವವರೆಗೂ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು’ ಎಂದರು.
‘ಈ ವಿಚಾರದಲ್ಲಿ ಸಿಎಂ ಮೌನ ತಾಳಿದ್ದಾರೆ? ರಾಜ ಸರ್ಕಾರದ ನಿಲುವೇನು?’ ಎಂದು ಪ್ರಶ್ನಿಸಿದ ಅವರು, ‘ಕರ್ನಾಟಕ ಸರ್ಕಾರವೇ ವಾತಾವರಣವನ್ನು ಹಾಳು ಮಾಡುತ್ತಿದೆ’ ಎಂದು ಆರೋಪಿಸಿದರು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರನ್ನೂ ಪ್ರಶ್ನಿಸಿದರು. ‘ಎರಡೂ ಸದನಗಳ ಸದಸ್ಯರು ಗಡಿ ಕುರಿತ ‘ಕೇಸ್ ಫಾರ್ ಜಸ್ಟೀಸ್’ ಚಲನಚಿತ್ರವನ್ನು ವೀಕ್ಷಿಸಬೇಕು ಮತ್ತು ಮಹಾಜನ್ ಆಯೋಗದ ವರದಿ ಓದಬೇಕು’ ಎಂದು ಠಾಕ್ರೆ ಕೋರಿದರು.=