ವೃಷಣ ಹಿಸುಕಿ ಗಾಯಗೊಳಿಸಿದವಗೆ 3 ವರ್ಷ ಜೈಲು: ಹೈಕೋರ್ಟ್‌ ಆದೇಶ

By Kannadaprabha News  |  First Published Jun 26, 2023, 11:03 AM IST

ಜಾತ್ರೆ ವೇಳೆ ನಡೆದ ಜಗಳದಲ್ಲಿ ಎದುರಾಳಿಯ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ ವ್ಯಕ್ತಿಗೆ ‘ಕೊಲೆ ಯತ್ನ’ ಅಪರಾಧದ ಅಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಏಳು ವರ್ಷ ಜೈಲು ಶಿಕ್ಷೆಯನ್ನು ಮೂರು ವರ್ಷಕ್ಕೆ ಇಳಿಸಿ ಹೈಕೋರ್ಟ್‌ ಆದೇಶಿಸಿದೆ. 


ಬೆಂಗಳೂರು (ಜೂ.26): ಜಾತ್ರೆ ವೇಳೆ ನಡೆದ ಜಗಳದಲ್ಲಿ ಎದುರಾಳಿಯ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ ವ್ಯಕ್ತಿಗೆ ‘ಕೊಲೆ ಯತ್ನ’ ಅಪರಾಧದ ಅಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಏಳು ವರ್ಷ ಜೈಲು ಶಿಕ್ಷೆಯನ್ನು ಮೂರು ವರ್ಷಕ್ಕೆ ಇಳಿಸಿ ಹೈಕೋರ್ಟ್‌ ಆದೇಶಿಸಿದೆ. ಕೊಲೆ ಮಾಡುವ ಉದ್ದೇಶವಿಲ್ಲದೆ ಜಗಳವಾಡುವ ಸಂದರ್ಭದಲ್ಲಿ ವೃಷಣಗಳನ್ನು ಹಿಸುಕಿದರೆ ಅದು ಐಪಿಸಿ ಸೆಕ್ಷನ್‌ 307ರ (ಕೊಲೆ ಯತ್ನ) ಅಡಿಯಲ್ಲಿ ಅಪರಾಧವಾಗುವುದಿಲ್ಲ. 

ಬದಲಿಗೆ ಐಪಿಸಿ ಸೆಕ್ಷನ್‌ 325ರ (ಗಂಭೀರವಾಗಿ ಗಾಯಗೊಳಿಸುವ) ಅಡಿಯಲ್ಲಿ ಅಪರಾಧ ಎನಿಸಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಕೊಲೆ ಯತ್ನದ ಬದಲಿಗೆ ಗಂಭೀರ ಗಾಯಗೊಳಿಸಿದ ಅಪರಾಧಕ್ಕಾಗಿ ಅರ್ಜಿದಾರನನ್ನು ದೋಷಿ ಎಂದು ತೀರ್ಮಾನಿಸಿದೆ. ಅದರಂತೆ ಕೊಲೆ ಯತ್ನ ಅಪರಾಧದಡಿ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಏಳು ವರ್ಷ ಶಿಕ್ಷೆಯನ್ನು ಮಾರ್ಪಾಡುಗೊಳಿಸಿ, ಮೂರು ವರ್ಷ ಶಿಕ್ಷೆ ಹಾಗೂ 50 ಸಾವಿರ ರು. ದಂಡ ವಿಧಿಸಿದೆ. ಅಲ್ಲದೆ, ಅಪರಾಧಿ ದಂಡದ ಮೊತ್ತವನ್ನು ಸಂತ್ರಸ್ತ ವ್ಯಕ್ತಿಗೆ ಪರಿಹಾರವಾಗಿ ಪಾವತಿಸಬೇಕು. 

Tap to resize

Latest Videos

ಇನ್ನೆರೆಡು ತಿಂಗಳಲ್ಲಿ ಡಿಸೇಲ್‌ ಇಲ್ಲದೆ ಬಸ್‌ಗಳು ಸಂಚಾರ ನಿಲ್ಲಿಸಲಿವೆ: ಬೊಮ್ಮಾಯಿ

ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದಕ್ಕೆ ಒಂದು ವರ್ಷ ಮತ್ತು ಅಕ್ರಮವಾಗಿ ತಡೆಹಿಡಿದ ಅಪರಾಧಕ್ಕೆ ಒಂದು ತಿಂಗಳು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಪ್ರಕರಣದಲ್ಲಿ ಕೊಲೆ ಯತ್ನ ಅಪರಾಧದಡಿ ತನಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಮಗಳೂರಿನ ಪ್ರಧಾನ ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿ ಪರಮೇಶ್ವರಪ್ಪ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಮುಗಳಿಕಟ್ಟೆಯಲ್ಲಿ 2010ರ ಮಾ.15ರ ರಾತ್ರಿ ನರಸಿಂಹಸ್ವಾಮಿ ಜಾತ್ರೆಯ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಜತೆ ಜಗಳ ತೆಗೆದಿದ್ದ ಪರಮೇಶ್ವರಪ್ಪ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ್ದ. ವೈದ್ಯರು ಚಿಕಿತ್ಸೆ ಕಲ್ಪಿಸಿ ಪೊಲೀಸರಿಗೆ ಮೆಡಿಕೋ ಲೀಗಲ್‌ ಕೇಸ್‌ (ಎಂಎಲ್‌ಸಿ) ಶಿಫಾರಸು ಮಾಡಿದ್ದರು. ಈ ಸಂಬಂಧ ಮಾ.16ರಂದು ಆಸ್ಪತ್ರೆಗೆ ತೆರಳಿದ್ದ ಪೊಲೀಸರು ಗಾಯಾಳುವಿನಿಂದ ಹೇಳಿಕೆ ದಾಖಲಿಸಿಕೊಂಡು ಪರಮೇಶ್ವರಪ್ಪ ವಿರುದ್ಧ ದೂರು ನೀಡಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪರಮೇಶ್ವರಪ್ಪ ಬಳಿಕ ಜಾಮೀನು ಪಡೆದಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಪರಮೇಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್‌ 307 (ಕೊಲೆ ಯತ್ನ), 341 (ಅಕ್ರಮವಾಗಿ ತಡೆ ಹಿಡಿದಿರುವುದು), 504 (ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಅಪಮಾನಿಸುವುದು) ಅಡಿಯಲ್ಲಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಪರಮೇಶ್ವರಪ್ಪ ಅವರನ್ನು ದೋಷಿಯಾಗಿ ತೀರ್ಮಾನಿಸಿ ಕೊಲೆ ಯತ್ನ ಅಪರಾಧಕ್ಕೆ ಏಳು ವರ್ಷ, ಅಕ್ರಮವಾಗಿ ವ್ಯಕ್ತಿಯನ್ನು ತಡೆಹಿಡಿದಿದ್ದಕ್ಕೆ ಒಂದು ತಿಂಗಳು ಮತ್ತು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ್ದಕ್ಕೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, 2012ರ ಫೆ.7ರಂದು ಆದೇಶಿಸಿತ್ತು. ಈ ಶಿಕ್ಷೆ ರದ್ದು ಕೋರಿ ಪರಮೇಶ್ವರಪ್ಪ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಎಡ ಭಾಗದ ವೃಷಣ ಕಳಕೊಂಡ ಗಾಯಾಳು: ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸಾಕ್ಷ್ಯಾಧಾರ ಮತ್ತು ಪ್ರತ್ಯಕ್ಷ ಸಾಕ್ಷಿ ಪ್ರಕಾರ ಆರೋಪಿ ಹಾಗೂ ಗಾಯಾಳು ನಡುವೆ ಮೊದಲೇ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿ ಊರ ಜಾತ್ರೆ ವೇಳೆ ಗಾಯಾಳು ಕುಣಿಯುತ್ತಿದ್ದ ಸಂದರ್ಭದಲ್ಲಿ ಜಗಳ ತೆಗೆದು, ಆತನ ವೃಷಣಗಳನ್ನು ಹಿಸುಕಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಗಾಯಾಳುವಿನ ಎಡ ಭಾಗದ ವೃಷಣ ತೆಗೆದು ಜೀವ ಉಳಿಸಿದ್ದರು. ವೃಷಣ ದೇಹದ ಸೂಕ್ಷ್ಮ ಮತ್ತು ಪ್ರಮುಖ ಅಂಗ. ತಕ್ಷಣವೇ ಗಾಯಾಳುವಿಗೆ ಚಿಕಿತ್ಸೆ ಸಿಗದಿದ್ದರೆ ಆತ ಸಾಯುವ ಸಾಧ್ಯತೆಯಿತ್ತು. ವೃಷಣವನ್ನು ಗಾಯಗೊಳಿಸಿದರೆ ಜೀವಕ್ಕೆ ಅಪಾಯವಾಗಲಿದೆ ಎಂಬ ತಿಳುವಳಿಕೆ ಆರೋಪಿಗೆ ಇರಲಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ರಾಜ್ಯದಲ್ಲಿ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಆದರೆ, ಆರೋಪಿಯು ಗಾಯಾಳುವನ್ನು ಕೊಲೆಗೈಯ್ಯುವ ಉದ್ದೇಶದಿಂದಲೇ ಘಟನಾ ಸ್ಥಳಕ್ಕೆ ಬಂದಿದ್ದಾನೆ ಎಂದು ಹೇಳಲಾಗುವುದಿಲ್ಲ. ಕೊಲೆ ಮಾಡುವ ಉದ್ದೇಶ ಹೊಂದಿದ್ದರೆ, ಯಾವುದಾದರೂ ಮಾರಕಾಸ್ತ್ರ ತರುತ್ತಿದ್ದ. ಆರೋಪಿ ಬಳಿ ಯಾವುದೇ ಮಾರಾಕಾಸ್ತ್ರ ಇರಲಿಲ್ಲ. ಹಾಗಾಗಿದ್ದರೂ ದೇಹದ ಪ್ರಮುಖ ಅಂಗವನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದು ಕೊಲೆ ಯತ್ನ ಬದಲಿಗೆ ಐಪಿಸಿ ಸೆಕ್ಷನ್‌ 325 ಅಡಿಯಲ್ಲಿ ಗಂಭೀರವಾಗಿ ಗಾಯಗೊಳಿಸಿದ ಅಪರಾಧವಾಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

click me!