
ಚಿಕ್ಕಬಳ್ಳಾಪುರ (ಏ.11): ತಂದೆ-ತಾಯಿಯನ್ನು ಕಳೆದುಕೊಂಡು 12 ವಯಸ್ಸಿನಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕ ಸೇರಿದ್ದ ಅನಾಥ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿಯ ಲಾವಣ್ಯ ಎಂಬ ಹುಡುಗಿಯ ತಂದೆ ಶ್ರೀನಿವಾಸ್ 2019ರಲ್ಲಿ ಮೃತಪಟ್ಟಿದ್ದು, 2021ರಲ್ಲಿ ತಾಯಿ ಚಂದ್ರಕಲಾ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಈಕೆಯ ತಾಯಿಯ ಅಂತ್ಯಸಂಸ್ಕಾರಕ್ಕೆ ಯಾರು ಬರದಿದ್ದಾಗ ಜೆಸಿಬಿ ಬಕೆಟ್‌ನಲ್ಲಿ ಶವ ಸಾಗಿಸಲಾಗಿತ್ತು. ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದ ಲಾವಣ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದಳು. ಇಲ್ಲಿಂದಲೇ ಚಿಕ್ಕಬಳ್ಳಾಪುರದ ವಿಶ್ವವಿವೇಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ 600ಕ್ಕೆ 541 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಲಾವಣ್ಯಳಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿದ ಮಾರ್ಗದರ್ಶನ ಸಹಕಾರಿಯಾಗಿದೆ. ಜೊತೆಗೆ ಬಾಲ್ಯದಲ್ಲೇ ಎದುರಾದ ಕಷ್ಟಗಳು ಆಕೆಯನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ.
ಕೊಟ್ಟೂರು: ಮಹಿಳಾ ಸೆಕ್ಯೂರಿಟಿಯ ಮಗನೊಬ್ಬ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 597 ಅಂಕ (ಶೇ.99.5) ಪಡೆದು ಗಮನಾರ್ಹ ಸಾಧನೆ ತೋರಿದ್ದಾನೆ.
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ನಿಂಬಳಗೇರಿ ಗ್ರಾಮದ ನಿವಾಸಿ ಭರತ್ ಸಾಧಕ ವಿದ್ಯಾರ್ಥಿ. ಈತ ಕೊಟ್ಟೂರು ಭಾಗೀರಥಿ ಪದವಿಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು, ತಾಯಿ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮಗ ಅತ್ಯುತ್ತಮ ಫಲಿತಾಂಶ ಪಡೆದಿರುವುದಕ್ಕೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಚೌಡಪುರದ ಕೂಲಿ ಕಾರ್ಮಿಕನ ಮಗಳಾದ ಅಶ್ವಿನಿ 519 ಅಂಕ (ಶೇ.86.5) ಪಡೆದು ಜ್ಞಾನಾರ್ಜನೆಗೆ ಬಡತನ ಅಡ್ಡಿ ಬರಲ್ಲ ಎಂದು ತೋರಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ