ನವದೆಹಲಿ (ಮೇ.28): ಬುಧವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಮೇಲೆ ಅಪ್ಪಳಿಸಿದ್ದ ಯಾಸ್ ಚಂಡಮಾರುತ, ಗುರುವಾರದ ವೇಳೆಗೆ ತನ್ನ ತೀವ್ರತೆ ಕಳೆದುಕೊಂಡು ವಾಯುಭಾರ ಕುಸಿತವಾಗಿ ಮಾರ್ಪಾಡಾಗಿದೆ. ಆದರೆ ಅದರ ಪರಿಣಾಮಗಳು ಮಾತ್ರ ಮುಂದುವರೆದಿದ್ದು, ಒಡಿಶಾ ಮತ್ತು ಜಾರ್ಖಂಡ್‌ನ ಹಲವು ಭಾಗಗಳಲ್ಲಿ ಗುರುವಾರ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆಯಾಗಿದೆ. ಹೀಗಾಗಿ ಎರಡೂ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ.
ಜಾರ್ಖಂಡ್‌ನಲ್ಲಿ ಬಿರುಗಾಳಿ ಮಳೆಯಿಂದಾಗಿ 8 ಲಕ್ಷ ಜನರು ಸಂತ್ರಸ್ತರಾಗಿದ್ದು, 15000 ಜನರನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿ ಘಟನೆಗೆ ರಾಜ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವು ನಗರಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 10 ರಿಂದ 20 ಸೆ.ಮೀನಷ್ಟುಭಾರೀ ಮಳೆ ಸುರಿದಿದೆ.
undefined
ಮಳೆಗಾಲದಲ್ಲಿ ಇನ್ಫೆಕ್ಷನ್ ಆಗದಿರಲು ಈ ಟಿಪ್ಸ್ ನೆನಪಿನಲ್ಲಿರಲಿ ..
ಈ ನಡುವೆ ಒಡಿಶಾದಲ್ಲಿ ಗುರುವಾರವೂ ಭಾರೀ ಮಳೆಯಾಗುತ್ತಿದ್ದು, ಕಿಯೋಂಝಾರ್ ಜಿಲ್ಲೆಯ ಜೋಡಾದಲ್ಲಿ 27 ಸೆಂ.ಮೀಮಳೆಯಾಗಿದೆ. ಇತರೆ ಹಲವು ನಗರಗಳಲ್ಲೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಪರಿಸ್ಥಿತಿಯ ಅಧ್ಯಯನ ನಡೆಸಿದ್ದಾರೆ.
ಭಾರೀ ನಷ್ಟ: ಬಂಗಾಳದಲ್ಲಿ ಚಂಡಮಾರುತದಿಂದ 15000 ಕೋಟಿ ರು.ಆಸ್ತಿಪಾಸ್ತಿಗೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೆ ತಕ್ಷಣವೇ ಪರಿಹಾರ ಕಾರ್ಯಗಳಿಗಾಗಿ 1000 ಕೋಟಿ ರು. ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
750 ಮಕ್ಕಳ ಜನನ: ಕೆಲವರಿಗೆ ಯಾಸ್ ಎಂದೇ ನಾಮಕರಣ
ಭುವನೇಶ್ವರ: ‘ಯಾಸ್’ ಚಂಡಮಾರುತದ ನಡುವೆಯೇ, ಒಡಿಶಾದಲ್ಲಿ 750ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ. ಈ ಪೈಕಿ ಹಲವು ಪೋಷಕರು ತಮ್ಮ ಮಕ್ಕಳಿಗೆ ಯಾಸ್ ಎಂದೇ ನಾಮಕರಣ ಮಾಡುತ್ತಿದ್ದಾರೆ. ಒಡಿಶಾದಲ್ಲಿ ಶುಕ್ರವಾರ ನೋಂದಣಿಯಾಗಿರುವ 650 ಮಕ್ಕಳ ಪೈಕಿ ಮಂಗಳವಾರ ರಾತ್ರಿಯೇ ಹುಟ್ಟಿದ್ದಾರೆ. ಪರ್ಷಿಯಾ ಭಾಷಾ ಮೂಲದಿಂದ ಉತ್ಪತ್ತಿಯಾದ ಯಾಸ್ ಎಂದರೆ ಮಲ್ಲಿಗೆ ಎಂದರ್ಥ.