ಪ್ರತಿ ಶಾಸಕರ ಕ್ಷೇತ್ರಕ್ಕೂ 25 ಕೋಟಿ ಬಂಪರ್‌

By Kannadaprabha NewsFirst Published Jan 6, 2021, 11:18 AM IST
Highlights

ಅನುದಾನ ಸಿಗುತ್ತಿಲ್ಲ ಎಂಬ ಶಾಸಕರ ದೂರಿಗೆ ಸಿಎಂ ಸ್ಪಂದನೆ | ಹಂತ ಹಂತವಾಗಿ 25 ಕೋಟಿ ರು. ನೀಡುವ ಭರವಸೆ | 2 ದಿನಗಳ ಸಭೆಯ ನಂತರ ಡಿಸಿಎಂ ಕಾರಜೋಳ ಘೋಷಣೆ

ಬೆಂಗಳೂರು(ಜ.06): ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಅನುದಾನ ಸಿಕ್ಕಿಲ್ಲ ಎಂಬ ಆಡಳಿತಾರೂಢ ಬಿಜೆಪಿ ಶಾಸಕರ ಅಹವಾಲನ್ನು ಆಲಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಎರಡು ದಿನಗಳ ಶಾಸಕರೊಂದಿಗಿನ ವಿಸ್ತೃತ ಸಮಾಲೋಚನಾ ಸಭೆಯಲ್ಲಿ ಬಹುತೇಕ ಶಾಸಕರು ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಕೊರತೆ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಆಶ್ವಾಸನೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ತಳ್ಳಾಟ-ನೂಕಾಟ; ಶಾಸಕ ಸಿದ್ದು ಸವದಿಗೆ ಈಗ ಶುರುವಾಯ್ತು ಅಸಲಿ ಸಂಕಟ

ಆದರೆ, ಕೋವಿಡ್‌ ಪರಿಣಾಮ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರಕ್ಕೆ 25 ಕೋಟಿ ರು.ಗಳ ಅನುದಾನವನ್ನು ಒಂದೇ ಬಾರಿಗೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಮುಂಬರುವ ಬಜೆಟ್‌ನಲ್ಲಿ ಆಯಾ ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಒಂದಿಷ್ಟುಅನುದಾನ ನೀಡಬಹುದು. ನಂತರ ಅದನ್ನು ಅದರ ಮುಂದಿನ ಬಜೆಟ್‌ನಲ್ಲೂ ಮುಂದುವರೆಸಬಹುದು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಇರುವ ಮಾಹಿತಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒದಗಿಸಿದ್ದಾರೆ. ಅನುದಾನ ಹೆಚ್ಚು ನೀಡುವಂತೆಯೂ ಮನವಿ ಮಾಡಿದ್ದಾರೆ. ಶಾಸಕರ ಅಭಿಪ್ರಾಯಗಳನ್ನು ಕೇಳಿದ ಬಳಿಕ ಮುಖ್ಯಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರು. ಅನುದಾನ ನೀಡುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.

ಬೆಂಗ್ಳೂರು ಜಿಲ್ಲೆಯಲ್ಲಿ ಎಷ್ಟು ವೃದ್ಧಾಶ್ರಮಗಳಿವೆ..?

ಕಳೆದ 2019ರ ಜುಲೈ ತಿಂಗಳಲ್ಲಿ ಯಡಿಯೂರಪ್ಪ ನಾಯಕತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎದುರಾದ ಪ್ರವಾಹ ಪರಿಸ್ಥಿತಿಯಿಂದಾಗಿ ಸಾರ್ವಜನಿಕ ಆಸ್ತಿ, ಸೇತುವೆ, ಮನೆಗಳು, ಕೆರೆ-ಕಟ್ಟೆ, ರೈತರು ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ಉಂಟಾದ ಹಾನಿಯ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಎದುರಿಸಬೇಕಾಯಿತು. ಆದರೂ ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ರಾಜ್ಯವು ದೇಶದಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ. ಶಾಸಕರು ಸಹ ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬಹುದು ಎಂಬ ಆಶ್ವಾಸನೆ ಇದೆ. ಮುಂದಿನ ದಿನದಲ್ಲಿ ಬಜೆಟ್‌ ಮಂಡನೆ ಮಾಡುವ ವೇಳೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳ ನಾಯಕತ್ವ ಬಗ್ಗೆ ಅಚಲ ನಂಬಿಕೆ ಮತ್ತು ಬೆಂಬಲ ವ್ಯಕ್ತವಾಗಿದೆ ಎಂದರು.

ಪಕ್ಷದ ಸಂಘಟನೆ ಬಗ್ಗೆಯೂ ಚರ್ಚೆ:

ಪಕ್ಷದ ಸಂಘಟನೆ ಮತ್ತು 2023ರಲ್ಲಿ ಅಧಿಕಾರಕ್ಕೆ ಬರಲು ಕಾರ್ಯಸೂಚಿ ರೂಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಪಕ್ಷದ ಅಂತರಿಕ ವಿಚಾರಗಳನ್ನು ಹೊರಗಡೆ ಸಾರ್ವಜನಿಕವಾಗಿ ಹೇಳುವಂತಹದಾಗಲಿ, ಟೀಕೆ ಮಾಡುವುದಾಗಲಿ ಮಾಡಬಾರದು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು. ಮುಂದಿನ ದಿನದಲ್ಲಿ ಒಗ್ಗಟ್ಟಾಗಿ ಪಕ್ಷವನ್ನು ಸಂಘಟನೆ ಮಾಡಲಾಗುವುದು. ಪ್ರತಿಯೊಬ್ಬರು ಸಹ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿಲುವಿಗೆ ಬರಲಾಗಿದೆ.

ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ಮಾಡಿದ್ದಾರೆ. ಶಾಸಕರ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಲಾಗಿದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಆದಾಯ ಕೊರತೆಯಿಂದ ಕೆಲವು ಕಾರ್ಯಗಳು ಕುಂಠಿತಗೊಂಡವು. ಇದೀಗ ಹಣಕಾಸು ಸುಧಾರಣೆ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಾರಜೋಳ ವಿವರಿಸಿದರು.

click me!