241 ದಿನಗಳ ವಾಲ್ಮೀಕಿ ಶ್ರೀ ಮೀಸಲು ಧರಣಿ ಅಂತ್ಯ

By Kannadaprabha News  |  First Published Oct 9, 2022, 8:55 AM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 241 ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿದ್ದ ಧರಣಿ ಶನಿವಾರ ಸುಖಾಂತ್ಯವಾಗಿದೆ. 


ಬೆಂಗಳೂರು (ಅ.09): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 241 ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿದ್ದ ಧರಣಿ ಶನಿವಾರ ಸುಖಾಂತ್ಯವಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರಕಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಪರವಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆರ್‌.ಅಶೋಕ್‌, ಸಚಿವ ಸಂಪುಟದ ತೀರ್ಮಾನದ ಬಗ್ಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ತಿಳಿಸಿದರು.

ಸಚಿವರಾದ ಶ್ರೀರಾಮುಲು, ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್‌, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಚಿವ ಆರ್‌.ಅಶೋಕ್‌ಗೆ ಸಾಥ್‌ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಆರ್‌.ಅಶೋಕ್‌, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ನ್ಯಾಯಮೂರ್ತಿ ಸುಭಾಷ್‌ ಅಡಿ ಅವರ ಸಮಿತಿ ವರದಿಯನ್ನೂ ಅಂಗೀಕರಿಸಿದೆ ಎಂದು ಹೇಳಿದರು.

Tap to resize

Latest Videos

ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ

ಸಿಎಂ ಬೊಮ್ಮಾಯಿಗೆ ಅಭಿನಂದನೆ: ಬಳಿಕ ಧರಣಿ ಅಂತ್ಯಗೊಳಿಸಿದ ಪ್ರಸನ್ನಾನಂದಪುರಿ ಸ್ವಾಮೀಜಿ, ಧರಣಿ ಸ್ಥಳದಿಂದ ನೇರವಾಗಿ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿದರು. ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾದರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದರು. ಇದೇ ವೇಳೆ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ತಿನಿಸಿ ಅಭಿನಂದಿಸಿದರು. ಈ ವೇಳೆ ಸಚಿವರಾದ ಆರ್‌.ಅಶೋಕ್‌, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆನಂದ ಸಿಂಗ್‌, ಶಂಕರ ಪಾಟೀಲ್‌ ಮುನೇನಕೊಪ್ಪ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಒಳ ಮೀಸಲಿಗೆ ಕ್ರಮ: ಅವಕಾಶ ವಂಚಿತ ಪರಿಶಿಷ್ಟಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳಸಮುದಾಯಗಳಿಗೆ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ವರದಿ ಹೇಳಿದೆ. ಈ ಸಮುದಾಯಗಳಿಗೆ ನ್ಯಾಯ ಒದಗಿಸಲು ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ತಜ್ಞರು ಹೇಳಿದ್ದಾರೆ ಎಂದರು.

ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಪರಿಶಿಷ್ಟಜಾತಿಯಲ್ಲಿ ಬರುವ ಎಲ್ಲಾ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಪರಿಶಿಷ್ಟಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಚರ್ಚಿಸಿ ಕೈಗೊಂಡಿರುವ ತೀರ್ಮಾನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ

ಎಸ್ಸಿ-ಎಸ್ಟಿಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಹಿಂದಿನ ಎಲ್ಲ ಸರ್ಕಾರಗಳು ನಿರ್ಲಕ್ಷ ಮಾಡಿದ್ದವು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಟ್ಟನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ತಂದೆಯ ಸಾಮಾಜಿಕ ಬದ್ಧತೆಯನ್ನು ತೋರಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಮ್ಮ ಸಮುದಾಯಗಳಿಗೆ ಅಮೃತ ಸಿಕ್ಕಿದೆ.
-ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರು ಪೀಠ

click me!