ಲಿಂಗಾಯತರನ್ನು ಒಬಿಸಿಗೆ ಸೇರಿಸಿ| ಪಂಚಮಸಾಲಿ ಸಮಾಜಕ್ಕೆ 2ಎ ಮಾನ್ಯತೆ ನೀಡಿ| ಜಯಮೃತ್ಯಂಜಯ ಶ್ರೀ ಪಟ್ಟು| ಲಿಂಗಾಯತ ನಿಗಮಕ್ಕೆ ಬಸವೇಶ್ವರರ ಹೆಸರಿಡಿ|
ಬೆಂಗಳೂರು(ನ.28): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಮತ್ತು ರಾಜ್ಯದಲ್ಲಿ 2 ‘ಎ’ ಪ್ರವರ್ಗಕ್ಕೆ ಸೇರಿಸಲು ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಡಿ.23 ರಿಂದ ಕೂಡಲ ಸಂಗಮದಿಂದ ಬೆಂಗಳೂರು ನಗರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲು ಕೇಂದ್ರದಲ್ಲಿ ಹಿಂದುಳಿದ ವರ್ಗಗಳು ಮತ್ತು ರಾಜ್ಯದಲ್ಲಿ 2 ‘ಎ’ ಪ್ರವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಈ ಹಿಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ನವೆಂಬರ್ 28ರ ಅಂತ್ಯದ ವೇಳೆಗೆ ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಗಡುವು ನೀಡಲಾಗಿತ್ತು. ಆದರೆ, ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ, ನಮ್ಮ ಸಮುದಾಯದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯಲ್ಲಿ ಸಮುದಾಯದ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ ಎಂದರು.
ಮುಖಂಡರ ಬಳಿ ಚರ್ಚಿಸಿ ಕ್ರಮ:
ಮೀಸಲಾತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ನೀಡಿರುವ ಗಡುವು ಮುಕ್ತಾಯವಾಗಿದೆ. ಹೀಗಾಗಿ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮುದಾಯದ ಮುಖಂಡರು, ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಅದರ ಆಧಾರದಲ್ಲಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದರು.
ಕನ್ನಡಿಗರ ಸ್ವಾಭಿಮಾನ ಕೆದಕದಿರಿ: ಮಹಾನಾಯಕರಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಕೆಲ ತಾಂತ್ರಿಕ ಕಾರಣಗಳಿಂದ ಶುಕ್ರವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಡ್ವೋಕೇಟ್ ಜನರಲ್ ಮತ್ತು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ವಿಷಯ ಮುಂದೂಡಲಾಗಿದೆ ಎಂಬ ಅಂಶ ತಿಳಿದು ಬಂದಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಮುಂದಿನ ಸಚಿವ ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಲಿಂಗಾಯತ ನಿಗಮಕ್ಕೆ ಬಸವೇಶ್ವರರ ಹೆಸರಿಡಿ
ಬೆಂಗಳೂರು: ರಾಜ್ಯದಲ್ಲಿ ವೀರಶೈವ-ಲಿಂಗಾಯತ ನಿಗಮ ಸ್ಥಾಪನೆಯಾಗಬೇಕು ಎಂದು ನಾವು ಮೊದಲು ಮನವಿ ಮಾಡಿದ್ದೆವು. ಇದೀಗ ಸರ್ಕಾರ ನಿಗಮ ರಚನೆ ಮಾಡಿ ಹಣ ಬಿಡುಗಡೆ ಮಾಡಿದೆ. ಇದು ಸಂತಸದ ವಿಷಯವಾಗಿದೆ. ಬಸವಣ್ಣನವರನ್ನು ವೀರಶೈವರು ಮತ್ತು ಲಿಂಗಾಯತ ಧರ್ಮದವರು ಒಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ ವೀರಶೈವ -ಲಿಂಗಾಯತ ಬದಲಾಗಿ ‘ಬಸವೇಶ್ವರ ನಿಗಮ’ ಎಂಬುದಾಗಿ ನಾಮಕರಣ ಮಾಡಬೇಕು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯ ಮೃತ್ಯಂಜಯ ಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.